ಪುರಾಣ ಪ್ರಸಿದ್ಧ ಹಾಸನಾಂಬೆಯ ದರ್ಶನವನ್ನು ಈ ಬಾರಿ ಅಕ್ಟೋಬರ್ 12 ರಿಂದ 21ರ ತನಕ ಪಡೆಯಬಹುದಾಗಿದೆ..ನೀವು ಒಮ್ಮೆ ಭೇಟಿ ಕೊಟ್ಟು ದೇವಿಯ ಕೃಪೆಗೆ ಪಾತ್ರರಾಗಿ..!

0
957

ಪುರಾಣ ಪ್ರಸಿದ್ಧ ಹಾಸನಾಂಬೆಯ ದರ್ಶನವನ್ನು ಈ ಬಾರಿ ಅಕ್ಟೋಬರ್ 12 ರಿಂದ 21ರ ತನಕ ಪಡೆಯಬಹುದಾಗಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಹಾಸನ ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತಾಗಿಗಳಿಗೆ ಪುನೀತ ಭಾವವೇ.

ಹೀಗೆ ಬಾಗಿಲು ತೆರೆದ ಬಳಿಕ ದೇವಾಲಯದಲ್ಲಿ ದೇವಿಗೆ ನಿತ್ಯ ಪೂಜೆ ನಡೆಯುತ್ತದೆ. ಬಳಿಕ ಬಲಿಪಾಡ್ಯಮಿ ಮಾರನೇ ದಿನ ಪೂಜಾ ಕೈಂಕರ್ಯವನ್ನು ನೆರವೇರಿಸಿ ದೇವರಿಗೆ ದೀಪ ಹಚ್ಚಿ, ದೇವಾಲಯ ಬಾಗಿಲನ್ನು ಹಾಕಲಾಗುತ್ತದೆ. ಮತ್ತೆ ಬಾಗಿಲನ್ನು ತೆರೆಯುವುದು ಮುಂದಿನ ವರ್ಷವೇ ಅಲ್ಲಿವರೆಗೂ ಗರ್ಭಗುಡಿಯಲ್ಲಿ ಹಚ್ಚಿದ ದೀಪ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ, ಈ ಕುಂಭಗಳಿಗೆ ಹೆಣ್ಣು ದೇವತೆ ಮುಖವಾಡಗಳಿಂದ ಅಲಂಕರಿಸಿ, ಪೂಜಿಸುವುದನ್ನು ಕಾಣಬಹುದು.

ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆಯಲ್ಲದೇ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಅವರೆಲ್ಲರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವಿದ್ಯಾದಿ ಅಲಂಕಾರಗಳು ಇರುವಂತೆಯೇ ಮುಚ್ಚಲಾಗುತ್ತದೆ.

ಈ ವರ್ಷ ಒಟ್ಟಾರೆ 11 ದಿನ ದೇವಾಲಯ ಬಾಗಿಲು ತೆರೆಯಲಿದ್ದು, ಸಾರ್ವಜನಿಕರಿಗೆ 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ದೊರೆಯಲಿದೆ. ಈ ಬಾರಿ ಭಕ್ತರಿಗೆ ಪ್ರಸಾದವನ್ನು ಹಾಸನಾಂಬ ದೇವಾಲಯದಿಂದ 200 ಮೀಟರ್ ದೂರದಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿತರಿಸಲಾಗುವುದು. ತುರ್ತು ದರ್ಶನ ಬಯಸುವವರು ವಿಶೇಷ ದರ್ಶನದ ಟಿಕೆಟ್‌ ₹ 300 ಪಡೆದುಕೊಳ್ಳಬಹುದು.

ಸಾರ್ವಜನಿಕರಿಗೆ ಎರಡು ತಾಸಿನಲ್ಲಿ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಅತಿ ಗಣ್ಯರಿಗೆ ₹ 1, 000 ಟಿಕೆಟ್‌ ಪಡೆದು ದರ್ಶನ ಪಡೆಯುವ ಚಿಂತನೆ ನಡೆದಿದೆ. ಪ್ರವಾಸಿ ಮಂದಿರದಲ್ಲಿ ಬಂದು ಗಣ್ಯರು ಮೊದಲು ಹೆಸರು ನೋಂದಾಯಿಸಿ, ಅಲ್ಲಿಯೇ ವಿಶೇಷ ದರ್ಶನದ ಟಿಕೆಟ್‌ ಪಡೆಯಬಹುದಾಗಿದೆ.

ಹಾಸನಾಂಬೆ ದೇವಿ ಮಡಿವಂತಿಕೆ- ನೈರ್ಮಲ್ಯ, ನೇಮ ನಿಷ್ಠೆಗೆ ಒಲಿವಳೆಂಬದು ಇಲ್ಲಿನ ಭಕ್ತರ ನಂಬಿಕೆ ನೀವು ಒಮ್ಮೆ ಭೇಟಿ ಕೊಟ್ಟು ದೇವಿಯ ಕೃಪೆಗೆ ಪಾತ್ರರಾಗಿ.