ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಬಗ್ಗೆ ಪೊಲೀಸರ ಬಗ್ಗೆಯೇ ಅನುಮಾನ ಇದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ ಎಚ್.ಡಿ.ಕೆ.

0
197

ನಿನ್ನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಗ್-ನಲ್ಲಿ ಸ್ಪೋಟಕ ಬಾಂಬ್ ತಂದಿಟ್ಟಿದ್ದು ಭಾರಿ ಸದ್ದು ಮಾಡಿತ್ತು, ಇಡಿ ರಾಜ್ಯವೇ ನಡುಗಿ ಹೋಗಿತ್ತು, ನಂತರ ಅದನ್ನು ಪೊಲೀಸರು ಹರಸಾಹಸ ಪಟ್ಟು ನಿಷ್ಕ್ರಿಯಗೊಳಿಸಿದರು, ಇದಕ್ಕೆ ರಾಜ್ಯದ ತುಂಬೆಲ್ಲ ಮೆಚ್ಚುಗೆ ಕೂಡ ವ್ಯಕ್ತವಾಯಿತು, ಇಂದು ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಮಂಗಳೂರು ಬಾಂಬ್​ ಪತ್ತೆ ಪ್ರಕರಣ ಅಣಕು ಪ್ರದರ್ಶನದಂತೆ ಇದೆ. ಅದರಲ್ಲಿ ‘ಮುಖಕ್ಕೆ ಹಾಕಿಕೊಳ್ಳೋ ಪೌಡರ್ ಇತ್ತೋ ಏನೋ ತಿಳಿಯದು’ ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಬಹುಮಾನ ನೀಡಬೇಕಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಹೌದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟ (ನಿಷ್ಕ್ರಿಯಗೊಳಿಸಿದ) ಪ್ರಕ್ರಿಯೆ ಗಮನಿಸಿದರೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಅಣಕು ಪ್ರದರ್ಶನ ರೀತಿ ಇತ್ತು, ಅನುಮಾನಾಸ್ಪದವಾಗಿ ಪತ್ತೆಯಾದ ಅನಾಥ ಬ್ಯಾಗ್ ಒಳಗೆ ಇದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಇದ್ದಿದ್ದು ಬಾಂಬ್ ಅಲ್ಲ ಬದಲಾಗಿ ಪಟಾಕಿ ತಯಾರಿಸಲು ಬಳಸುವ ಪೌಡರ್ ಮತ್ತು ಕೆಲವು ವಯರ್ ಗಳಿದ್ದವು ಇದನ್ನು ನಿಷ್ಕ್ರಿಯಗೊಳಿಸಲು ಬೆಳಗ್ಗೆಯಿಂದ ಸಂಜೆಯವರೆಗೂ ಹರಸಾಹಸ ನಡೆಸಿದರು. ಅಲ್ಲದೇ ಇದಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ರೀತಿ ಬಾಂಬ್ ನಿಷ್ಕ್ರಿಯ ಮಾಡಿದ್ದು, ಇದೇ ಮೊದಲು. ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮಂಗಳೂರಿನಲ್ಲಿಬಾಂಬ್‌ ಇಟ್ಟಿದ್ದು ಯಾರು ಎಂಬುದನ್ನು ಪತ್ತೆಹಚ್ಚುವುದು ಕಷ್ಟವಲ್ಲ. ಪೊಲೀಸರು ವಿಳಂಬ ಮಾಡಬಾರದು ಆ ಜಾಗದಲ್ಲಿ ಸಿಸಿ ಕ್ಯಾಮೆರಾ ಇರುತ್ತದೆ. ಪೊಲೀಸರು ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು. ನನಗೆ ಕೆಲವು ಪೊಲೀಸರ ಬಗ್ಗೆ ಅನುಮಾನವಿದೆ. ಸರಕಾರ ಮತ್ತು ಪೊಲೀಸರು ಸಮಾಜ ಒಡೆಯುವ ಕೆಲಸ ಮಾಡಬಾರದು. ಸಮಾಜದಲ್ಲಿ ಅಪನಂಬಿಕೆ ಉಂಟಾಗಬಾರದು. ಈಗಾಗಲೇ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಿಮಗೆ ಅಧಿಕಾರ ಇದೆ. ದೇಶದಲ್ಲಿ ಹಲವು ಸಮಸ್ಯೆ ಇದೆ. ಯಾವುದಾದರೂ ತನಿಖೆ ಮಾಡಿಕೊಳ್ಳಿ. ಜನರ ವಿಶ್ವಾಸ, ನಂಬಿಕೆ ಕಳೆಯುವ ಕೆಲಸ ಮಾಡಬೇಡಿ. ಪೊಲೀಸರು ಸಂಶಯಾತ್ಮಕ ಹೇಳಿಕೆ ನೀಡಬೇಡಿ. ಪೊಲೀಸರು 15 ದಿನ ಸಮಯ ತೆಗೆದುಕೊಂಡು ಬೇರೆ ಕತೆ ಸೃಷ್ಟಿ ಮಾಡಬಾರದು ಎಂದರು.

ಬಾಂಬ್​ ಮೂಲಕ ರಾಜ್ಯದ ಜನರಲ್ಲಿ ಸುಖಾ ಸುಮ್ಮನೆ ಆತಂಕದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಈ ರೀತಿ ಭಯದ ಸೃಷ್ಟಿಸಬೇಡಿ ಎಂದು ಈಗಾಗಲೇ ಸರ್ಕಾರಕ್ಕೂ ಕೂಡ ತಿಳಿಸಿದ್ದೇನೆ. ಸಮುದಾಯ, ಧರ್ಮದ ಮಧ್ಯೆ ಸಾಮರಸ್ಯ ಹಾಳುಮಾಡಬೇಡಿ. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾರನ್ನೋ ಮೆಚ್ಚಿಸಲು ನೀವು ಕೆಲಸ ಮಾಡಬೇಡಿ. ಇದು ಆರ್​ಎಸ್​ಎಸ್​​ ಕಂಪನಿಯ ಸರ್ಕಾರವಲ್ಲ. ಅಧಿಕಾರಿಗಳು ಮುಲಾಜಿಲ್ಲದೆ ಕೆಲಸ ಮಾಡಿ, ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಜನರನ್ನ ದಾರಿ ತಪ್ಪಿಸುವ ಪ್ರಹಸನವಾಗಬಾರದು ಎಂದರು.

ನಿನ್ನೆಯ ಪ್ರಹಸನದ ಬಗ್ಗೆ ಜನರ ಮುಂದೆ ಸತ್ಯ ತಿಳಿಸಬೇಕು. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ನಡೆಸಿರುವ ಅನುಮಾನವಿದೆ. ಕರಾವಳಿಯಲ್ಲಿ ಪದೇ ಪದೇ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಭಯ ಭೀತರನ್ನಾಗಿ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ಸಂಘಟನೆ ಹುನ್ನಾರ ನಡೆಸಿರುವ ಸಾಧ್ಯತೆ ಇದೆ. ಇದರಿಂದ ಕರಾವಳಿ ಆರ್ಥಿಕತೆ ಮೇಲೆ ಕೂಡ ಕುಂಠಿತ ಪರಿಣಾಮ ಬೀರಲಿದೆ. ಈ ಪ್ರಯತ್ನವನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

Also read: ಬಿಗ್ ಬ್ರೇಕಿಂಗ್; ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಇಂಡಿಗೋ ವಿಮಾನದಲ್ಲೂ ಬಾಂಬ್ ಇದೇ ಎನ್ನುವ ಬೆದರಿಕೆ ಕರೆ.!