ಸೂಕ್ತ ಪೌಷ್ಟಿಕಾಂಶಗಳಿಗೆ ಮಾಂಸಾಹಾರ ಸೇವನೆ ಮಾಡಲೇಬೇಕೆಂದೇನಿಲ್ಲ, ಸಸ್ಯಹಾರಿಗಳಿಗೆ ವರದಾನ ಈ ಅಣಬೆ!!

0
1281

ಅಣಬೆ ಅಥವಾ ನಾಯಿಕೊಡೆ ಸಾಮಾನ್ಯವಾಗಿ ನೆಲದ ಮೇಲುಗಡೆ ಮಣ್ಣಿನ ಮೇಲೆ ಅಥವಾ ಅದರ ಆಹಾರ ಮೂಲದ ಮೇಲೆ ಫಲಬಿಡುವ ಶಿಲೀಂಧ್ರದ ತಿರುಳಿನಿಂದ ಕೂಡಿದ, ಬೀಜಕಗಳನ್ನು ಹೊರುವ ಹಣ್ಣಿನಂಥ ಕಾಯ. ಅಣಬೆ ಪದವನ್ನು ಬಹುತೇಕ ಕಾಂಡ ಶಿರಹೊದಿಕೆ ಕೆಳಭಾಗದ ಮೇಲೆ ಕಿವಿರುಗಳನ್ನು ಹೊಂದಿರುವ ಶಿಲೀಂಧ್ರಗಳಿಗೆ ಅನ್ವಯಿಸಲಾಗುತ್ತದೆ.

ಈ ಕಿವಿರುಗಳು ನೆಲ ಅಥವಾ ಅದರ ನಿವಾಸಿ ಮೇಲ್ಮೆ ಮೇಲೆ ಹರಡಲು ಶಿಲೀಂಧ್ರಕ್ಕೆ ಸಹಾಯ ಮಾಡುವ ಸೂಕ್ಷ್ಮ ಬೀಜಕಗಳನ್ನು ಉತ್ಪಾದಿಸುತ್ತವೆ. ಅಗ್ಯಾರಿಕೇಲಿಸ್ ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿವೆ.ಇದರಲ್ಲಿ ಸುಮಾರು 125 ಜಾತಿಗಳೂ 4000 ಪ್ರಭೇಧಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಇವು ಹೆಚ್ಚು ತೇವಾಂಶ ಮತ್ತು ಆದ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ. ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ವೀಕ್ಷಿಸಬಹುದು.

ಅಣಬೆಯಿಂದ ಆರೋಗ್ಯಕ್ಕೆ ಉಪಯೋಗಗಳು:

ಅಣಬೆಯ ಬಹಳ ರುಚಿಕರವಾಗಿದ್ದು, ಮೊಟ್ಟೆ ಮಾಂಸಗಳ ರುಚಿಯನ್ನು ಮೀರಿಸಬಲ್ಲವು. ಆದ್ದರಿಂದಲೇ ರೋಮನ್ ದೇಶದ ಜನರು ಅಣಬೆಗಳನ್ನು ದೇವರ ಆಹಾರವೆಂದು ವರ್ಣಿಸಿದ್ದಾರೆ. ಚೀಣಿಯರು ಅಣಬೆಯ ತಿಂಡಿಗಳು ಆರೋಗ್ಯ ಮತ್ತು ಹರ್ಷದಾಯಕವೆಂದು ಬಣ್ಣಿಸಿದ್ದಾರೆ. ಹೀಗೆ ಅಣಬೆಯಿಂದ ತಯಾರಿಸಿದ ತಿಂಡಿಗಳು ರುಚಿಕರ ಮಾತ್ರವೇ ಅಲ್ಲ ಅವು ಪುಷ್ಟಿದಾಯಕವೂ ಹೌದು. ಅಣಬೆಗಳಲ್ಲಿ ನಮ್ಮ ಶರೀರಕ್ಕೆ ಅವಶ್ಯಕವಾದ ಪ್ರೋಟೀನುಗಳು, ಅಮೈನೋ, ಆಮ್ಲಗಳು ಅಲಾನಿನ್, ಲೈಸಿನ್, ಲೂಸಿನ್, ವೇಲಿನ, ಮಿಥಿಯಾನಿನ್, ಗ್ಲೈಸಿನ್, ಆಸ್ಪಾರ್ಟಿಕ್ ಆಮ್ಲ, ಗ್ಲುಟಾಮಿಕ್ ಆಮ್ಲ ಮುಂತಾದವು. ಜೀವಸತ್ವಗಳಾದ, ರೈಬೋ, ಫ್ಲೇವಿನ್, ನಿಯಾಸಿನ್, ಥೈಯಾಮಿನ್, ಪೆಂಟ್ಥೋನಿಕ್ ಆಮ್ಲ, ಬಯೋಟಿನ್, ಆಸ್ಕಾರ್ಬಿಕ್ ಆಮ್ಲ, ನಿಕೋಟಿನಿಕ್ ಆಮ್ಲ ಹಾಗೂ ಖನಿಜಾಂಶಗಳಾದ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಂಗಳು ಅಧಿಕ ಪ್ರಮಾಣದಲ್ಲಿವೆ. ಅಣಬೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಿಹಿಮೂತ್ರ ಮತ್ತು ಹೃದ್ರೋಗಿಗಗಳಿಗೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.

ಬೇರೆ ಬೇರೆ ಉದ್ದಿಮೆಗಳಲ್ಲಿ ಅಣಬೆಯ ಪ್ರಾಮುಖ್ಯತೆ:

ಅಣಬೆಗಳು ಕೇವಲ ಆಹಾರ ಪದಾರ್ಥಗಳಿಗೆ ಮೀಸಲಾಗಿರದೆ, ಬೇರೆ ಬೇರೆ ಉದ್ದಿಮೆಗಳಲ್ಲಿ ಅದರದೇ ಆದ ಪ್ರಾಮುಖ್ಯತೆಯನ್ನು ಪಡೆದಿವೆ. ಚಿತ್ರಕಾರರಿಗೆ ಅವು ಸೌಂದರ್ಯದ ವಸ್ತುಗಳಾಗಿವೆ. ಗಿಡಮೂಲಿಕೆಗಳಂತೆ ಅಣಬೆಗಳನ್ನು ಔಷಧಿಯ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ವಾಸ್ತು ಶಿಲ್ಪಿಗಳಿಗೆ ಅವು ಮಾದರಿಗಳಾಗಿದ್ದು, ಅಣಬೆಗಳ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೆರವಾಗಿವೆ. ಅಕ್ಕಸಾಲಿಗಳು ಒಡವೆಗಳನ್ನು ಸಹ ಅಣಬೆಗಳ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ವಸ್ತ್ರವಿನ್ಯಾಸಕಾರರು ಅಣಬೆಗಳ ಚಿತ್ರಗಳನ್ನು ಬಟ್ಟೆಗಳ ಮೇಲೆ ಹೆಚ್ಚು ಮಾಡಿರುವುದನ್ನು ಕಾಣಬಹುದು.

ಅಣಬೆಗಳ ವಿಧಗಳು:

ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಆದರೆ, ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ತರಕಾರಿಗಳಾಗಿವೆ. ಮಳೆಗಾಲದ ದಿನಗಳಲ್ಲಿ ಕಾಡುಮೇಡುಗಳು ಮತ್ತು ಹೊಲಗದ್ದೆಗಳ ಬದುಗಳಲ್ಲಿ ಬೆಳೆಯುವ ಖಾದ್ಯ ಅಣಬೆಗಳನ್ನು ಪತ್ತೆ ಹಚ್ಚಿ ತಂದು ತರಕಾರಿಗಳಂತೆ ಉಪಯೋಗಿಸುತ್ತಾರೆ. ಇಂತಹ ಅಣಬೆಯ ವಿಸ್ಮಯ ರೂಪವನ್ನು ಪ್ರಕೃತಿಯಲ್ಲಿ ನೋಡಲು ಬಹಳ ಸುಂದರ. ಆದರೆ, ಇಂತಹ ಅಣಬೆಗಳು ವಿಷಕಾರಕಗಳೆಂಬುದನ್ನು ಮರೆಯಬಾರದು. ಏಕೆಂದರೆ, ಬಹುತೇಕ ಸುಂದರ ಅಣಬೆಗಳು ವಿಷ ಅಣಬೆಗಳ ಗುಂಪಿಗೆ ಸೇರಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಬೆಳೆಯುವ ಅಣಬೆಗಳನ್ನು, ತಿನ್ನಲು ಯೋಗ್ಯ ಎಂದು ತಿಳಿಯದೆ ಉಪಯೋಗಿಸ ಬಾರದು. ಕೆಲವೊಂದು ವರ್ಣ ರಂಜಿತ ಅಣಬೆಗಳಾದ ಬೋಲಿಟಸ್, ಪ್ಲೋರೋಟಸ್, ಇಯಸ್ ಅಣಬೆಗಳು ಬಣ್ಣ ಹೊಂದಿದ್ದು ತಿನ್ನಲು ಯೋಗ್ಯವಾಗಿವೆ.