ಆಯುರ್ವೇದದ ಮಹೌಷಧಿ ತ್ರಿಫಲದ ಒಂದು ಅಂಶವಾಗಿರುವ ಅಳಲೆಕಾಯಿಯ ಔಷಧೀಯ ಗುಣಗಳು..!!

0
1837

ಆಯುರ್ವೇದದಲ್ಲಿ ತ್ರಿಫಲ ಚೂರ್ಣಕ್ಕೆ ಮಹತ್ತರವಾದ ಸ್ಥಾನವಿದೆ. ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು ಮತ್ತು ತಾರೆಕಾಯಿಗಳ ಮಿಶ್ರಣವೇ ಈ ತ್ರಿಫಲ ಚೂರ್ಣವು. ಇದರ ಸೇವನೆಯು ವಾತ, ಪಿತ್ತ, ಕಫಗಳ ದೋಷವನ್ನು ನಿಯಂತ್ರಿಸಿ ಆರೋಗ್ಯ ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ.

ತ್ರಿಫಲದ ಒಂದು ಭಾಗವಾಗಿರುವ ಅಳಲೆಕಾಯಿಯು ಮುಪ್ಪನ್ನು ಗೆಲ್ಲುವ, ಯೌವನವನ್ನು ಕಾಪಾಡುವ, ತ್ರಿದೋಷಗಳನ್ನು ಪರಿಹರಿಸುವ ಹಾಗು ಹೃದಯಕ್ಕೆ ಶಕ್ತಿ ನೀಡುವ ಗುಣಗಳನ್ನು ಹೊಂದಿವೆ.

೧) ಕಣ್ಣಿನ ಸಮಸ್ಯೆಗಳಿಗೆ:
ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಸುರಿಯುವುದನ್ನು ನಿಲ್ಲಿಸಲು ಚೆನ್ನಾಗಿ ಬಲಿತಿರುವ ದಪ್ಪವಾದ ಅಳಲೆಕಾಯಿಯನ್ನ ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣುಗಳಿಗೆ ಹಚ್ಚಬೇಕು.

೨) ಮೂಲವ್ಯಾಧಿ ನಿವಾರಣೆಗೆ:
ಚಿತ್ರಮೂಲ,ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ ೧೦ ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿ ಮಾಡಿ ಶೇಖರಿಸಿ. ೧೦ ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ ೨ ಚಮಚದಷ್ಟು ಸೇವಿಸಿದ್ದಲ್ಲಿ ಮೂಲದ ಮೊಳೆಗಳು ಕ್ರಮವಾಗಿ ಕರಗಿ ಉರಿ ಶಮನವಾಗುವುದು.

೩) ತಲೆನೋವು ನಿವಾರಣೆಗೆ:
ತ್ರಿಫಲ ಚೂರ್ಣ,ಶುಂಠಿ,ಧನಿಯಾ, ವಾಯುವಿಳಂಗಗಳ ಸಮತೂಕ ಚೂರ್ಣ ಮಾಡುವುದು. ಇದರಲ್ಲಿ ೨೦ ಗ್ರಾಂನಷ್ಟು ಚೂರ್ಣವನ್ನು ನೀರಿಗೆ ಹಾಕಿ ಅರ್ಧಭಾಗವಾದ ಮೇಲೆ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡು ಬಾರಿ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

೪) ಕಣ್ಣು ಕತ್ತಲೆಗೆ:
೧೦ ಗ್ರಾಂ ತ್ರಿಫಲ ಚೂರ್ಣವನ್ನು ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಿಗ್ಗೆ ನೆಕ್ಕಿದ್ದಲ್ಲಿ ಕಣ್ಣು ಕತ್ತಲಿಡುವುದು ಹತೋಟಿಗೆ ಬರುತ್ತದೆ.

೫) ಪಿತ್ತದ ಕೆಮ್ಮು ತಗ್ಗಿಸಲು:
ಜೇಷ್ಠ ಮಧು, ಅಳಲೆಕಾಯಿ,ನೆಲ್ಲಿ ಚೆಟ್ಟು ಸಮಭಾಗ ಚೂರ್ಣಿಸಿ, ಒಂದು ಹೊತ್ತಿಗೆ ಅರ್ಧ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದು.

೬) ಸ್ತ್ರೀಯರ ಶ್ವೇತ ಪದರ ನಿವಾರಣೆಗೆ:
೧೦ ಗ್ರಾಂ ಅಳಲೆಕಾಯಿಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಬೇಕು.

೭) ಕಿರುನಾಲಿಗೆ ಬೀಳುವುದರ ಹತೋಟಿಗೆ:
ಅಳಲೆಕಾಯಿಯ ಸಿಪ್ಪೆಯ ವಸ್ತ್ರಾಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುತ್ತಿದ್ದರೆ ಸಮಸ್ಯೆ ಗುಣವಾಗುತ್ತದೆ.

೮) ಗುಲ್ಮ ಮತ್ತು ಹೊಟ್ಟೆಯೊಳಗಿನ ಗಂಟುಗಳ ನಿವಾರಣೆಗೆ:
ಅಳಲೆಕಾಯಿಯ ಸಿಪ್ಪೆಯ ನಯವಾದ ಚೂರ್ಣ ೧೦ ಗ್ರಾಂ ಅನ್ನು ಒಂದು ಬಟ್ಟಲು ಕಬ್ಬಿಣ ರಸದಲ್ಲಿ ಕದಡಿ ದಿನಕ್ಕೆರಡು ಬಾರಿ ಸೇವಿಸಬೇಕು.

೯) ಕುಡಿಯುವ ನೀರು ಬದಲಾವಣೆಯಾಗಿ ದೋಷಗಳು ಉಂಟಾಗಿದ್ದರೆ :
ಅಳಲೆಕಾಯಿ ಸಿಪ್ಪೆ, ಶುಂಠಿ ಮತ್ತು ಜೀರಿಗೆಯ ಸಮತೂಕ ಅರೆದು ಪುಡಿ ಮಾಡಿಟ್ಟುಕೊಂಡು ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ನೆಕ್ಕುವುದು.