ಈ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ, ಅದು ಹೃದಯದ ಸಮಸ್ಯೆ ಇರಬಹುದು…!

0
2148

ಹೃದಯ

ಹೃದಯ ಪ್ರತಿ ನಿಮಿಷಕ್ಕೆ 72 ಬಾರಿ ಹೊಡೆದುಕೊಳ್ಳುತ್ತದೆ. ಇದನ್ನೇ ನಾವು ಕೈ, ಕುತ್ತಿಗೆಯ ಭಾಗಗಳಲ್ಲಿ ನಮ್ಮ ಬೆರಳುಗಳನ್ನು ಇಟ್ಟು ತಿಳಿಯಬಹುದು. ಇದನ್ನೇ ನಾವು ನಾಡಿ ಮಿಡಿತ-ಬಡಿತ ಎನ್ನುತ್ತೇವೆ. ರಕ್ತವನ್ನು ದೇಹದ ಪ್ರತಿ ಅಂಗದ ಪ್ರತಿ ಜೀವಕೋಶಕ್ಕೆ ಕಳುಹಿಸುವ, ಪಂಪ್ ಮಾಡುವ ಕೆಲಸವನ್ನು ಹೃದಯ ಮಾಡುತ್ತದೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗ ಇದಾಗಿದೆ.

ಇಂತಹ ಕೆಲಸ ನಿರ್ವಹಿಸುವ ಹೃದಯದ ಮಾರ್ಗದಲ್ಲಿ ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗೋ/ಇಲ್ಲವೇ ರಕ್ತದ ಹೆಪ್ಪು (clot) ಅಡ್ಡವಾಗಿ ರಕ್ತ ಸಂಚಾರ ನಿಧಾನವಾಗಿ ಕಡಿಮೆಯಾಗಿ ನಿಲ್ಲಬಹುದು. ಯಾವ ಅಂಗಕ್ಕೆ ಹೀಗೆ ರಕ್ತ ಸಂಚಾರ ನಿಲ್ಲುತ್ತದೆ ಉದಾ: ಕೈ-ಕಾಲು, ಮೆದುಳು, ಹೃದಯ… 6 ನಿಮಿಷಕ್ಕಿಂತ ಹೆಚ್ಚಿಗೆ ಇರದಿದ್ದಾಗ ಆ ಅಂಗ ಕಾರ್ಯ ಸ್ಥಗಿತಗೊಳಿಸಿಬಿಡುತ್ತದೆ, ಸಾಯುತ್ತದೆ. ಹೀಗೆ ಕೊಬ್ಬು ಹೆಚ್ಚಾದಾಗ, ವೈದ್ಯರು ರಕ್ತ ತಿಳಿಗೊಳಿಸಿ (anti coagulant) ರಕ್ತ ಸಂಚಾರ ಸರಾಗ ಮಾಡಿಬಿಡುತ್ತಾರೆ. ಹೃದ್ರೋಗಿಗಳಿಗೆ ಸಾಮಾನ್ಯವಾಗಿ ಈ ಔಷಧಿ ನೀಡುತ್ತಾರೆ. ಇಂತಹವರು ಗಾಯ, ತರಚು, ಪೆಟ್ಟುಗಳಿಂದ ದೂರವಿರಬೇಕು. ಇಲ್ಲದಿದ್ದರೆ ರಕ್ತಸ್ರಾವ ಆಗುತ್ತಲೇ ಇರುತ್ತದೆ.

ಹೃದಯ ನೋವಿನ ಸುಳಿವುಗಳು

  

 • ವ್ಯಾಯಾಮ ಮಾಡಿದಾಗ, ಬೇಗ ಬೇಗ ನಡೆದಾಗ, ಆಯಾಸದಲ್ಲಿ ಹೃದಯನೋವು ಕಾಣಿಸಿಕೊಳ್ಳಬಹುದು.
 • ನಿದ್ದೆ, ಗೊರಕೆಯಲ್ಲಿ ಕಾಣಿಸಿಕೊಳ್ಳಬಹುದು.
 • ತುಂಬಾ ಚಳಿಯಲ್ಲಿ ದೇಹವು ಇದ್ದಾಗ ನೋವು (ಹೃದಯದಲ್ಲಿ) ಕಾಣಿಸಿಕೊಳ್ಳಬಹುದು.
 • ಭಾವೋದ್ವೇಗಕ್ಕೆ ಒಳಗಾಗಿ ಕೋಪಾವಿಷ್ಟರಾಗಿ ಬೆವೆತಾಗ, ಮತ್ತು ಹೆಚ್ಚು ಸಂತೋಷವಾದರೂ ಕೂಡ ಹೃದಯನೋವು ಬರಬಹುದು.
 • ವ್ಯಕ್ತಿಯಿಂದ ವ್ಯಕ್ತಿಗೂ ವಯೋಮಾನದನ್ವಯ ಹೃದಯನೋವಿನ ಸ್ವರೂಪ ಬದಲಾವಣೆಗೊಳ್ಳಲೂಬಹುದು.
 • ಹೃದಯ ನೋವು ಬರುವ ಮೊದಲು ವಾಂತಿ, ವಾಕರಿಕೆ, ವಿಪರೀತ ಬೆವರುವುದು, ಬೆನ್ನು ಅಥವಾ ಸೊಂಟನೋವು ಆಗುತ್ತಿರುತ್ತದೆ.
 • ಹೃದಯನೋವು – ಎಡಭುಜ ಎಡತೋಳಿನಲ್ಲಿ ಹರಿಯುತ್ತ ಸಾಗುವುದು. ಆ ಸಂದರ್ಭದಲ್ಲಿ ಕಣ್ಣಿಗೆ ಕತ್ತಲೆಯೂ ಬರಲೂಬಹುದು.

ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು?

 • ಹೃದಯಾಘಾತವಾದಾಗ ಯಾವುದಕ್ಕೂ ವಿಳಂಬ ಹಾಗೂ ನಿರ್ಲಕ್ಷತೆ ಸಲ್ಲದು. ವ್ಯಕ್ತಿಗೆ ವಿಶ್ರಾಂತಿ ನೀಡಿ ಯಾವುದೇ ಮನೆಯ ಉಪಚಾರಗಳನ್ನು ನೀಡದೆ ಕೂಡಲೇ ಆಸ್ಪತ್ರೆಗೆ ಸಾಗಿಸಬೇಕು.
 • ನೀವು ಎಲ್ಲ ವಿವರಗಳನ್ನು ವೈದ್ಯರಿಗೆ ತಿಳಿಸಿದರೆ ಅವರು ಕೂಡಲೇ ನಿರ್ಧಾರಕ್ಕೆ ಬರಲು ಅನಕೂಲವಾಗುವುದು.
 • ಧೂಮಪಾನ, ಮದ್ಯಪಾನ ಬಿಟ್ಟುಬಿಡಬೇಕು. ಕೊಬ್ಬಿನಾಂಶಗಳುಳ್ಳ ಆಹಾರ ತ್ಯಜಿಸಿದರೆ ಉತ್ತಮ.
 • ಹೃದಯಾಘಾತಕ್ಕೆ ಭಯಪಟ್ಟು ರೋಗಿಯು ಮನೋಒತ್ತಡಕ್ಕೆ ಒಳಗಾಗುವುದು ತರವಲ್ಲ. ಮಾನಸಿಕ ನೆಮ್ಮದಿ ತರುವ ಮಾತುಗಳನ್ನಾಡಿ ಅವರಲ್ಲಿ ಧೈರ್ಯ ಸ್ಥೈರ್ಯ ತುಂಬಬೇಕು.
 • ನೋವು ಕಾಣಿಸಿದಾಗ ವ್ಯಾಯಾಮ ಅಥವಾ ಆಯಾಸದ ಕೆಲಸ ಮಾಡಬಾರದು.
 • ರೋಗಿಯ ಮಧುಮೇಹ, ಧೂಮಪಾನ, ಮದ್ಯಪಾನ, ರಕ್ತದ ಏರೋತ್ತಡ ಬೊಜ್ಜು ಮುಂತಾದವುಗಳ ರೋಗಚರಿತ್ರೆಯ ವಿವರಗಳನ್ನು ಡಾಕ್ಟರರ ಬಳಿ ಹೋದಾಗ ಈ ಸಂಗತಿಗಳನ್ನು ತಪ್ಪದೆ ತಿಳಿಸಿ,ಈ ಮೊದಲು ತೆಗೆದುಕೊಳ್ಳುವ ಔಷಧಿಗಳನ್ನು ಹೇಳಿ.
 • ರೋಗಿಯು ಮೂರ್ಛಾವಸ್ಥೆಯಲ್ಲಿದ್ದರೆ, ಹೃದಯ ನೋವು ಬರುವ ಸಮಯ, ದೈನಂದಿನ ಚಟುವಟಿಕೆಗಳ ಕುರಿತು, ಸೇವಿಸುವ ದಿನನಿತ್ಯದ ಆಹಾರ ಹಾಗೂ ಮನಸ್ಥಿತಿ ಕುರಿತು ಹೇಳಿ.
 • ಯಾವುದಕ್ಕೂ ನಿರ್ಲಕ್ಷ್ಯ ಸಲ್ಲದು. ಸ್ವಯಂ ವೈದ್ಯಕೀಯ ಮಾಡಬೇಡಿ.