ಮತ್ತೆ ಮುಳುಗಿದ ಉತ್ತರ ಕರ್ನಾಟಕ; ರಾಜ್ಯದ ಹಲವೆಡೆ ಭಾರೀ ಮಳೆ, ಕರಾವಳಿಯಲ್ಲಿ ರೆಡ್​ ಆಲರ್ಟ್​​.!

0
217

ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ನಷ್ಟವಾಗಿದ್ದು, ಜನರು ಇದರಿಂದ ಅಲ್ಪ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಭಾರಿ ಮಳೆ ಶುರಿಯುತ್ತಿದೆ. ಬೆಳಗಾಂ ಜಿಲ್ಲೆಯಲ್ಲಿ ಹಲವು ಹಳ್ಳಿಗಳಲ್ಲಿ ನೀರು ತುಂಬಿದ್ದು ಸಂತ್ರಸ್ತರು ಬೇರೆ ಕಡೆಗೆ ಹೋಗುತ್ತಿದ್ದಾರೆ. ಈ ಮೊದಲು ಮನೆ ಬಿಟ್ಟು ಊಟಕ್ಕೂ ಗತಿ ಇಲ್ಲದೆ ನೋವು ಅನುಭವಿಸಿದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ. ಮುಧೋಳ-ಮಂಟೂರು ರಸ್ತೆ ಬಳಿ ಇರುವ ಕೋಳಿ ಫಾರ್ಮ್ ಗೆ ನೀರು ನುಗ್ಗಿದ್ದು, ನೀರಿನಲ್ಲಿ ಮುಳುಗಿ ಮೂರು ಸಾವಿರಕ್ಕೂ ಹೆಚ್ಚು ಕೋಳಿ ಸಾವನ್ನಪ್ಪಿವೆ.

ಹೌದು ವಾಯುಭಾರ ಕುಸಿತ, ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದ ಉತ್ತರ ಒಳನಾಡು ಮಧ್ಯೆ ಕಡಿಮೆ ಒತ್ತಡದ ತಗ್ಗು (ಟ್ರಫ್)ಗಳು ಉಂಟಾಗಿರುವುದು ಹಾಗೂ ಈಶಾನ್ಯ ಮಾರುತಗಳ ಪ್ರವೇಶದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳು ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ 21ರಿಂದ 23ರವರೆಗೆ ಬಹುತೇಕ ಎಲ್ಲ ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಆಗಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಾಗೂ ಬೆಳಗಾವಿಯಲ್ಲಿ 24 ಮತ್ತು 25ರಂದು ಅತಿ ಭಾರೀ ಮಳೆಯ ನಿರೀಕ್ಷೆ ಇದೆ. ಈ ಜಿಲ್ಲೆಗಳಲ್ಲಿ ಕಿತ್ತಳೆ ಬಣ್ಣದ ಮುನ್ನೆಚ್ಚರಿಕೆ ನೀಡಲಾಗಿದೆ. ಒಂದೇ ದಿನದಲ್ಲಿ 115.6ರಿಂದ 204.4 ಮಿ.ಮೀ.ಮಳೆಯಾಗುವ ಸಂಭವ ಇರುವ ಪ್ರದೇಶದಲ್ಲಿ ಈ ಎಚ್ಚರಿಕೆ ನೀಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿದ್ದು, ನಾರಾಯಣಪುರ ಜಲಾಶಯದಿಂದ 1.49 ಲಕ್ಷ ಕ್ಯೂ. ನೀರು ಬಿಡುಗಡೆ ,ಮಾಡಿದ್ದು, ರಾಯಚೂರು ಜಿಲ್ಲೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.,
ಮಲಪ್ರಭಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ ಅರ್ಥದಷ್ಟು ಕೊಚ್ಚಿಹೋಗಿದ್ದು, ಜನರು ಊರು ತೊರೆಯುತ್ತಿರುವ ದೃಶ್ಯ ಕಂಡು ಬಂದಿದೆ. ಹಾವೇರಿಯಲ್ಲಿ ಮಳೆ ಆರ್ಭಟಕ್ಕೆ ಹೆಗ್ಗೇರಿ ಕೆರೆಯ ಬಳಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಇನ್ನು ಹಿರೇಕೆರೂರ ತಾಲೂಕಿನ ಬಾಳಂಬೀಡದಲ್ಲಿ 1,500 ಕೋಳಿಗಳು ಮಳೆಗೆ ಸಿಲಿಕಿ ಸಾವನ್ನಪ್ಪಿದೆ. ಮಲೆನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾಭದ್ರ ಜಲಾಶಯಕ್ಕೆ ಒಳ ಹರಿವಿನ ನೀರಿನ ಪ್ರಮಾಣ ಹೆಚ್ಚಾಗಿದ್ದು ಜಲಾಶಯದಿಂದ 60 ಸಾವಿರ ಕ್ಯೂಸೆಕ್ಸ್​ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ, ಇದರಿಂದ ಹಂಪಿಯ ಸಾಲು ಮಂಟಪ, ಪುರಂದರದಾಸರ ಮಂಟಪ, ರಾಮಲಕ್ಷಣ ದೇವಸ್ಥಾನಕ್ಕೆ ನೀರು ನುಗ್ಗಿದೆ.

ಮಲಪ್ರಭೆ ಪ್ರವಾಹದ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 218 ಬಂದ್ ಆಗಿದ್ದು, ಹುಬ್ಬಳ್ಳಿ ಸೊಲ್ಲಾಪುರ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನವಿಲುತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದ್ದು ಕೊಣ್ಣೂರ ಗ್ರಾಮ ಮುಳಗುವ ಭೀತಿಯಲ್ಲಿದೆ. ಬೆಳಗಾವಿಯ ಗೋಕಾಕ್​ನಗರದಲ್ಲಿ ಭಾರೀ ಮಳೆಗೆ ಬಡೆಕಲ್ಲು ಉರುಳುವ ಸಾಧ್ಯತೆ ಗಿದ್ದು, ಗುಡ್ಡದ ಕೆಳಗೆ ಇಳಿರುವ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊಪ್ಪಳ, ಧಾರವಾಡ, ಗದಗ ಜಿಲ್ಲೆಯಾದ್ಯಂತ ಮಳೆ ಹಿನ್ನೆಲೆ ಬೆಳೆ ನಾಶವಾಗಿದೆ. ನರಗುಂದ-ಸುರಕೋಡ ಗ್ರಾಮದ ಸಂಪರ್ಕ ಬಂದ್ ಬಂದ್​ ಆಗಿದೆ.

ಇತ್ತ ಘಟಪ್ರಭಾ ನದಿತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಮಿರ್ಜಿ-ಮಹಲಿಂಗಪುರ ಮಾರ್ಗದ ಘಟಪ್ರಭಾ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸೇತುವೆ ಮೇಲೆ ಹತ್ತು ಅಡಿಯಷ್ಟು ನೀರು ಹರಿಯುತ್ತಿದೆ. ಘಟಪ್ರಭಾ ನದಿ ನೀರು ಮಿರ್ಜಿ ಗ್ರಾಮಕ್ಕೆ ನುಗ್ಗಿ ಬರುತ್ತಿದ್ದು, ಮತ್ತೆ ಮುಳುಗಡೆ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.