ತುರ್ತು ಸಂದರ್ಭದಲ್ಲಿ ಮಧ್ಯಮ ವರ್ಗದ ಜನರಿಗೂ ಎಟುಕುತ್ತೆ ಈ ಹೆಲಿಕಾಪ್ಟರ್ ಆಂಬುಲೆನ್ಸ್!!!

0
1467

ಕರ್ನಾಟಕಕ್ಕೆ ಬಂದಿದೆ ಹೆಲಿಕಾಪ್ಟರ್ ಆಂಬುಲೆನ್ಸ್

ಬೈಕ್ ಆ್ಯಂಬುಲೆನ್ಸ್ ಸೇವೆ ಆರಂಭಿಸಿ ಖ್ಯಾತಿ ಗಳಿಸಿದ್ದ ರಾಜ್ಯದಲ್ಲಿ ಖಾಸಗಿ ಕಂಪನಿಯೊಂದು ಇದೀಗ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಿದೆ.
ಏವಿಯೇಟರ್ಸ್ ಏರ್ ರೆಸ್ಕ್ವೂ ಎಂಬ ಖಾಸಗಿ ಕಂಪನಿ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಸೇವೆ ಆರಂಭಿಸುವ ಮೂಲಕ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಸೇವೆ ಒದಗಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಮೊದಲ ಹಂತವಾಗಿ ಈ ಸೇವೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯಲಿದೆ.

ತುರ್ತು ಸಂದರ್ಭಗಳಲ್ಲಿ ರೋಗಿಯ ಕಡೆಯವರು ಏರ್ ರೆಸ್ಕೂ ಕಂಪನಿ ಪ್ರತಿನಿಧಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೋಗಿಯ ಮಾಹಿತಿ, ಯಾವ ಸ್ಥಳಕ್ಕೆ ಕರೆದೊಯ್ಯಬೇಕು, ಯಾವ ಸಮಯಕ್ಕೆ ಕರೆದುಕೊಂಡು ಹೋಗಬೇಕು ಎಂಬಿತ್ಯಾದಿ ವಿವರ ನೀಡಬೇಕು. ಆಗ ಸಂಸ್ಥೆಯ ಸಿಬ್ಬಂದಿ ರೋಗಿಯನ್ನು ರಸ್ತೆ ಆ್ಯಂಬುಲೆನ್ಸ್ ಮೂಲಕ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಇರುವ ಸ್ಥಳಕ್ಕೆ ಕರೆತಂದು ತುರ್ತು ಚಿಕಿತ್ಸೆಗೆ ಕರೆದೊಯ್ಯುತ್ತಾರೆ.

ವಿಮಾನಗಳ ಆ್ಯಂಬುಲೆನ್ಸ್ ಸೇವೆ ಬಳಕೆ ಮಾಡಿಕೊಳ್ಳಲು ಸಾಮಾನ್ಯವಾಗಿ 1.75 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಸೇವೆಯನ್ನು ಗಂಟೆಗೆ 18 ಸಾವಿರ ರೂ.ಗೆ ಒದಗಿಸಲು ಸಂಸ್ಥೆ ತೀರ್ಮಾನಿಸಿದೆ. ಇದರಿಂದ ಮಧ್ಯಮ ವರ್ಗದ ಜನರು ಕೂಡ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಮತ್ತೂಂದು ವಿಶೇಷವೆಂದರೆ, ಪ್ಯಾಕೇಜ್ ರೂಪದಲ್ಲಿ ತುರ್ತು ಸೇವೆ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ವಾರ್ಷಿಕವಾಗಿ ಒಂಭತ್ತು ಸಾವಿರ ರೂ. ಪಾವತಿ ಮಾಡಿ ನೋಂದಣಿ ಮಾಡಿಕೊಂಡರೆ, ಆ ಕುಟುಂಬ ಇಡೀ ವರ್ಷದಲ್ಲಿ ತುರ್ತು ಸಂದರ್ಭದಲ್ಲಿ ಉಚಿತ ಸೇವೆ ಪಡೆಯಬಹುದಾಗಿದೆ.

ಏರ್ ಆ್ಯಂಬುಲೆನ್ಸ್‍ಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿದ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ. ಈ ಸೇವೆಗಾಗಿ ಮೂರು ಹೊಸ ಏರ್ ಬಸ್ ಹೆಲಿಕಾಪ್ಟರ್-130ನ್ನು ನಿಯೋಜಿಸಲಾಗಿದೆ. ಇದರಲ್ಲಿ ಇಬ್ಬರು ಪೈಲಟ್‍ಗಳು, ಮೂವರು ಪ್ಯಾರಾಮೆಡಿಕಲ್ ಸಿಬ್ಬಂದಿ, ಇಬ್ಬರು ವೈದ್ಯರು, ಒಂದು ಸ್ಟ್ರೆಚರ್, ಆತ್ಯಾಧುನಿಕ ಐಸಿಯು ಇದೆ. ಕಾಪ್ಟರ್‍ನಲ್ಲಿ ಒಂದೇ ಎಂಜಿನ್ ಇರುವುದರಿಂದ ಕಡಿಮೆ ಶಬ್ದವಿರುತ್ತದೆ. ತುರ್ತು ಅಗತ್ಯಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಇದರಲ್ಲಿ ಇರಲಿದ್ದು, ನುರಿತ ವೈದ್ಯರ ಸಲಹೆಯಂತೆ ಏರ್ ಲಿಫ್ಟ್ ಮಾಡಲಾಗುತ್ತದೆ.

ಮೊದಲ ಹಂತದಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಲು ಕಂಪನಿ ತೀರ್ಮಾನಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಸೇವೆ ಒದಗಿಸಲಿದೆ. ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ತಲಾ ಒಂದು ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತವೆ.

ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಯನ್ನು ಸಾಮಾನ್ಯ ಆ್ಯಂಬುಲೆನ್ಸ್‍ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಬಳಿಕ ಹೆಲಿಕಾಪ್ಟರ್ ನಿಲ್ಲುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ರೋಗಿ ಹೆಲಿಕಾಪ್ಟರ್ ಏರಿದ ಕೂಡಲೇ ಅಲ್ಲಿರುವ ತಜ್ಞ ವೈದ್ಯರ ತಂಡ ರೋಗಿ ಮೇಲೆ ನಿಗಾ ಇಡುತ್ತದೆ. ಪೂರ್ವ ನಿಗದಿಯಂತೆ ಚಿಕಿತ್ಸೆಗೆ ದಾಖಲಾಗಬೇಕಾದ ಆಸ್ಪತ್ರೆ ಸಮೀಪ ಹೆಲಿಕಾಪ್ಟರ್ ಇಳಿದು, ಸಾಮಾನ್ಯ ಆ?ಯಂಬುಲೆನ್ಸ್‍ನಲ್ಲಿ ರಸ್ತೆ ಮೂಲಕ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಏರ್ ಆ್ಯಂಬುಲೆನ್ಸ್‍ನಲ್ಲಿ ರೋಗಿ ಹಾಗೂ ಆತನ ಆವಲಂಬಿತರು ಸೇರಿ ಒಟ್ಟು ನಾಲ್ಕು ಮಂದಿ ಪ್ರಯಾಣಕ್ಕೆ ಅವಕಾಶವಿದೆ.

ಕಾಪ್ಟರ್ ಆ್ಯಂಬುಲೆನ್ಸ್ ಬೇಕಾದರೆ 155350ಕ್ಕೆ ಕರೆ ಮಾಡಿ
ಪ್ರಸ್ತುತ ದಕ್ಷಿಣ ಭಾರತದ ರಾಜ್ಯಗಳು ಏರ್ ಆ್ಯಂಬುಲೆನ್ಸ್ ಸೇವೆ ಪಡೆಯಲಿದ್ದು, ಜನವರಿ 1ರಿಂದ ಈ ಸೇವೆಯನ್ನು ಇತರೆ ರಾಜ್ಯಗಳಿಗೂ ವಿಸ್ತರಿಸಲು ಕಂಪನಿ ತೀರ್ಮಾನಿಸಿದೆ. ತುರ್ತು ಅಗತ್ಯ ಇರುವವರು ಹೆಲಿಕಾಪ್ಟರ್ ಬುಕಿಂಗ್ ಕಂಪನಿ ಟೋಲ್ ಸಂಖ್ಯೆ 155350ಕ್ಕೆ ಕರೆ ಮಾಡಬಹುದು.