ಇನ್ನು ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೇವಲ 15 ನಿಮಿಷದಲ್ಲಿ ತಲುಪಬಹುದು ಗೊತ್ತಾ?

0
840

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ದೂರಮಾಡಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರಸಂಪರ್ಕ ಕಲ್ಪಿಸಲು ಒಂದು ಹೊಸ ಯೋಜನೆ ಬಂದಿದೆ, ಅದುವೇ ಹೆಲಿಕಾಪ್ಟರ್, ಇನ್ನು ಮುಂದೆ ನೀವು ಸಿಲಿಕಾನ್ ಸಿಟಿಯಲ್ಲಿ ಹೆಲಿಕಾಪ್ಟರ್ನಲ್ಲಿ ಪಯಣಿಸಬಹುದಂತೆ.

ಹೌದು, KIA ವಿಮಾನ ನಿಲ್ದಾಣಕ್ಕೆ ಹೋಗಲು ಈಗಾಗಲೇ ಹೆಲಿಕಾಪ್ಟರ್ಗಳನ್ನು ನಿಯೋಗಿಸುವ ಕಾರ್ಯ ನಡೆದಿದೆ. ಇದಕ್ಕೆಂದೇ ಎಲೆಕ್ಟ್ರಾನಿಕ್ಸ್ ಸಿಟಿ ಹೆಲಿಪ್ಯಾಡ್ ಸಿದ್ಧವಾಗಿದೆ, ಇನ್ನು ನೀವು ಇಲ್ಲಿಂದ ವಿಮಾನ ನಿಲ್ದಾಣಕ್ಕೆ ಅಥವಾ ಹಿಂದಕ್ಕೆ ಮರುಳಲು 3,000 ರೂ ನೀಡಿದರೆ ನಿಮಗೆ ಹೆಲಿಕಾಪ್ಟರ್ ಸೇವೆ ಒದಗಿಸುತ್ತದೆ.

ಇನ್ನು ಕೇವಲ ಒಂದು ವಾರದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಚಾಪರ್ ಸೇವೆಗಾಗಿ ಏರ್ ಟಿಕೆಟ್ಗಳ ಮಾರಾಟವು ಬಿಡುಗಡೆ ಗೊಳ್ಳಲಿದೆ. ತುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಸೇವೆಯನ್ನು ಒದಗಿಸಲಿದೆ.

ಸಂಸ್ಥೆಯ ನಾಯಕರಾದ ನಾಯರ್ ಅವರು ಮಾತನಾಡಿ ಬಳಕೆದಾರರಿಗೆ ಟಿಕೆಟ್ ಬುಕ್ ಮಾಡಲು ಮೊಬೈಲ್ ಅಪ್ಲಿಕೇಶನ್ನನ್ನು ಅಭಿವೃದ್ಧಿಪಡಿಸಿದ್ದೇವೆ, ಕೇವಲ 2,500 ರಿಂದ 3,000 ರೂ. ಏರ್ ಟಿಕೆಟ್ ನ ಬೆಲೆ ಇರಲಿದ್ದು, ಉದ್ಯಾನ ನಗರಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆರಂಭದಲ್ಲಿ, ಹೆಲಿಕಾಪ್ಟರ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹೆಲಿಪ್ಯಾಡ್ಗಳನ್ನು ಬಳಸಿಕೊಳ್ಳುತ್ತದೆ. KIA ದಲ್ಲಿನ ಹೆಲಿಪ್ಯಾಡ್ ಸ್ವಲ್ಪ ಹಿಂದೆಯೇ ಸಿದ್ಧವಾಗಿದ್ದರೂ ಎಲೆಕ್ಟ್ರಾನಿಕ್ಸ್ ಸಿಟಿಯ ಹೆಲಿಪ್ಯಾಡ್ ಈಗ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್ 1 ನಲ್ಲಿರುವ ಹೆಲಿಪ್ಯಾಡ್ ನೆಲ ಮಟ್ಟದಲ್ಲಿದೆ ಮತ್ತು ಮುಂಬರುವ ಮೆಟ್ರೊ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದೆ ಎಂದು ನಾಯರ್ ಹೇಳಿದರು. ಹೆಲಿಪ್ಯಾಡ್ ಬಳಕೆದಾರರು ಸುಲಭವಾಗಿ ಪ್ರವೇಶಿಸಬಹುದು ಮತ್ತು ನಾವು IIIT ಆವರಣದ ಸಮೀಪದಲ್ಲಿ ಒಂದು ಬಸ್ ಟರ್ಮಿನಸ್ ಮತ್ತು ಮುಂಬರುವ ಮೆಟ್ರೋ ಸ್ಟೇಶನ್ ಗೆ 1.5 ಕಿ.ಮೀ ದೂರದಲ್ಲಿ ಒಂದು ಜಾಗವನ್ನು ಆಯ್ಕೆ ಮಾಡಿದ್ದೇವೆ ಎಂದರು.

ನಗರದಲ್ಲಿ ವಿವಿಧ ರೀತಿಯ ಸ್ಥಳಗಳನ್ನು ಮತ್ತು ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಹೆಲಿ ಟ್ಯಾಕ್ಸಿ ಸೇವೆಯನ್ನು ನೀಡುತ್ತೇವೆ ಎಂದು ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಆಗಸ್ಟ್-ನಲ್ಲಿ ಘೋಷಿಸಿದ್ದರು. ಇನ್ನು ಈ ಸೇವೆ ಪ್ರಾರಂಭವಾದರೆ ಎಲೆಕ್ಟ್ರಾನಿಕ್ ಸಿಟಿಯಿಂದ KIA ವಿಮಾನ ನಿಲ್ದಾಣಕ್ಕೆ ಕೇವಲ 15 ನಿಮಿಷದಲ್ಲಿ ತಲುಪಬಹುದಾಗಿದೆ.