ಗಂಡು ಮಕ್ಕಳೇ ತಂದೆ ತಾಯಿ ಹತ್ರ ಧಿಮಾಕು ಮಾಡುದ್ರೆ ಮನೆ ಇಂದ ಹೊರಗೆ ಹೋಗ್ತೀರಾ…

0
15552

ನವದೆಹಲಿ: ತಂದೆ, ತಾಯಿಯ ಒಪ್ಪಿಗೆ ಇಲ್ಲದೇ ಅವರ ಮನೆಯಲ್ಲಿರಲು ಮಕ್ಕಳಿಗೆ ಹಕ್ಕಿಲ್ಲ ಎಂದು ದೆಹಲಿ ಹೈಕೋರ್ಟ್ ನಿನ್ನೆ ಮಹತ್ವದ ತೀರ್ಪು ಹೊರಡಿಸಿದೆ.

ಪೋಷಕರು ತಾವೇ ಕಟ್ಟಿಕೊಂಡಿರುವ ಮನೆಯಲ್ಲಿ ಗಂಡು ಮಕ್ಕಳಿಗೆ ಇರಲು ಕಾನೂನಾತ್ಮಕ ಹಕ್ಕಿಲ್ಲ. ಮಕ್ಕಳು ಮದುವೆ ಆದರೂ ಆಗದೇ ಇದ್ದರೂ ಇದು ಅನ್ವಯಿಸುತ್ತದೆ. ಪೋಷಕರು ಅವಕಾಶ ನೀಡಿದ್ರೆ ಮಾತ್ರ ಮನೆಯಲ್ಲಿರಬಹುದು ಎಂದು ನ್ಯಾಯಮೂರ್ತಿ ಪ್ರತಿಭಾ ರಾಣಿ ಮಹತ್ವದ ತೀರ್ಪು ನೀಡಿದ್ದಾರೆ. ಸಂಬಂಧ ಸೌಹಾರ್ದಯುತವಾಗಿರುವರೆಗೆ ಪೋಷಕರು ತಮ್ಮ ಮಕ್ಕಳನ್ನು ಜೊತೆಗಿಟ್ಟುಕೊಳ್ಳಬಹುದು. ಆದರೆ, ಆ ಕಾರಣಕ್ಕೆ ತಮ್ಮ ಬದುಕಿನುದ್ದಕ್ಕೂ ಅವರು ಮಕ್ಕಳನ್ನು ಸಹಿಸಿಕೊಳ್ಳಬೇಕು ಎಂದೇನಿಲ್ಲ ಎಂದು ಕೋರ್ಟ್‌ ಹೇಳಿದೆ.

ದೆಹಲಿಯಲ್ಲಿ ಒಬ್ಬ ಪೋಷಕರನ್ನು ಮನೆ ಖಾಲಿ ಮಾಡಿಸಲು ಮಗನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ರಾಣಿ. ಮನೆಯು ಪೋಷಕರ ಸ್ವಯಾರ್ಜಿತ ಆಸ್ತಿಯಾಗಿದ್ದರೆ, ವಿವಾಹಿತ ಅಥವಾ ಅವಿವಾಹಿತ ಮಗ ಕೇವಲ ಅನುಕಂಪದ ಮೇಲೆ ಮಾತ್ರ ಅವರೊಂದಿಗೆ ವಾಸಿಸಬಹುದು. ಅದೂ ಪೋಷಕರ ಒಪ್ಪಿಗೆ ಇದ್ದರೆ ಮಾತ್ರ. ಇಲ್ಲ ಎಂದರೆ ಮಕ್ಕಳು ಮನೆಯಿಂದ ಖಾಲಿ ಮಾಡಬೇಕೆಂದು ಆದೇಶ ನೀಡಿದ್ದಾರೆ.

ತಮ್ಮ ಇಬ್ಬರು ಗಂಡು ಮಕ್ಕಳು ಹಾಗೂ ಸೊಸೆಯಂದಿರು ನಮ್ಮ ಜೀವನವನ್ನು ನರಕವನ್ನಾಗಿಸಿದ್ದಾರೆ ಎಂದು ಹಿರಿಯ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ 2007 ರಲ್ಲಿ ಹಾಗೂ 2012 ರಲ್ಲಿ ಮನೆ ಬಿಡುವಂತೆ ಮಕ್ಕಳಿಗೆ ನೋಟಿಸ್ ಕೂಡ ನೀಡಲಾಗಿತ್ತು. ಟ್ರಯಲ್ ಕೋರ್ಟ್ ಕೂಡ ಹಿರಿಯ ದಂಪತಿಗಳ ಪರ ನಿಂತು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓರ್ವ ಮಗ ಹಾಗೂ ಸೊಸೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಹೈಕೋರ್ಟ್ ಕೂಡ ದಂಪತಿ ಬೆನ್ನಿಗೆ ನಿಂತು ಮಹತ್ವದ ಆದೇಶ ನೀಡಿದೆ. ಆಸ್ತಿ ಖರೀದಿಗೆ ತಮ್ಮ ಪೋಷಕರಿಗೆ ತಾವೂ ಕೂಡ ಸಹಾಯ ಮಾಡಿದ್ದೇವೆ ಎಂದು ಮಗ ಹಾಗೂ ಸೊಸೆ ವಾದಿಸಿದ್ದರು. ಆದರೆ ಅದನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ರಾಣಿ ಆದೇಶಿಸಿದ್ದಾರೆ.