ಎಲ್ಲ ಕಾಲಕ್ಕೂ ಸಲ್ಲುವ ಪ್ರವಾಸ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ

0
1040

ನಮ್ಮ ನಾಡಿನ ಒಂದು ಅಪರೂಪವಾದ ಗಿರಿಧಾಮನಿದು. ಹೆಸರೇ ಸೂಚಿಸುವಂತೆ ವರ್ಷದ ಬಹುತೇಕ ಸಮಯ ಮಂಜು – ಮೊಡಗಳಿಂದ ಆವೃತ್ತವಾಗಿರುತ್ತದೆ. ಕೆಲವು ವೇಳೆ ಎದುರಿಗೇ ಕೆಲವೇ ಅಡಿಗಳಷ್ಟು ದೂರದಲ್ಲಿ ನಿಂತಿರುವವರೂ ಕಾಣುವುದಿಲ್ಲ, ಅಷ್ಟು ದಟ್ಟವಾಗಿರುತ್ತದೆ ಮಂಜಿನ ರಾಶಿ. ಈ ವಾತಾವರಣಲ್ಲಿ ಓಡಾಡುವುದೇ ಒಂದು ರೋಮಾಂಚಕರ ಅನುಭವ. ಇನ್ನು ಇಲ್ಲಿಂದ ನೋಡಿದರೆ ಸುತ್ತಲೂ ಕಾಣುವ ವನಸಿರಿಯಿಂದಾ ವೃತ್ತಾವಾದ ಬೆಟ್ಟಗಳ ಪ್ರದೇಶವೂ ಮನಸ್ಸಿಗೆ ಆಹ್ಲಾದ ವನ್ನುಂಟು ಮಾಡುತ್ತದೆ. ಬೆಟ್ಟದ ಮೇಲೆ ಹಲವು ಶತಮಾನಗಳ ಹಿಂದಿನ ಗೋಪಾಲಸ್ವಾಮಿ ಗುಡಿ ಇದೆ. ಹಿಮದಿಂದಾ ವೃತ್ತವಾಗಿರುವುದರಿಂದ ಹಿಮವದ್ ಗೋಪಾಲಸ್ವಾಮಿ ಎಂದೇ ಇದಕ್ಕೆ ಹೆಸರು.

ಸುಮಾರು 3 ಅಡಿ ಎತ್ತರದ ವಿಗ್ರಹವೂ ಆಕರ್ಷಕವಾಗಿದೆ. ಈ ಮೂರ್ತಿಯಿರುವ ಗರ್ಭ ಗುಡಿಯ ಪ್ರವೇಶದ್ವಾರದ ಮೇಲೆ ನೀರು ಜಿನುಗುತ್ತಿರುತ್ತದೆ. ಇಲ್ಲಿನ ಆರ್ಚಕರು ಮಂಗಳಾರತಿಯ ನಂತರ ಈ ತೊಟ್ಟಿಕ್ಕುವ ನೀರನ್ನೇ ಭಕ್ತರ ಮೇಲೆ ಪ್ರೋಕ್ಷಿಸುತ್ತಾರೆ. ಈ ಹನಿಗಳು ಮೈಮೇಲೆ ಬೀಳುವುದು ಶುಭಕರವೆಂದೇ ಇಲ್ಲಿಗೆ ಬರುವ ಭಕ್ತರ ನಂಬಿಕೆ. ಸಮುದ್ರ ಮಟ್ಟದಿಂದ ಸುಮಾರು 4500 ಅಡಿ ಎತ್ತರವಿರುವ ಈ ಬೆಟ್ಟವನ್ನು ಸುಮಾರು 5 ಕಿ.ಮೀ. ನಡೆದು ಹತ್ತಬಹುದು. ಗುಂಡ್ಲುಪೇಟೆ ಕಡೆಯಿಂದ 18ಕಿ.ಮೀ ಸಾಗಿದರೂ ಇಲ್ಲಿಗೆ ತಲುಪಬಹುದು. ಗುಡಿಯವರಗೂ ವಾಹನಗಳು ಹೋಗಲು ರಸ್ತೆ ಇದೆ. ಈ ವಾತಾವರಣವನ್ನು ಸವಿಯಲು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು, ಇದು ಚಾರಣರಿಗೂ ಪ್ರಿಯವಾದ ಸ್ಥಳ, ಅಷ್ಟೇನು ಕಡಿದಾಗಿಲ್ಲದ ಹಾಗೂ ವಿವಿಧ ಜಾತಿಯ ಗಿಡಮರಗಳಿಂದ ಕೂಡಿದ ಬೆಟ್ಟದಲ್ಲಿ ಓಡಾಡಿದಾಗ ಉಂಟಾಗುವ ಅನುಭವ ವಿಶೇಷವಾಗಿರುತ್ತದೆ. ದೃಶ್ಯ ಮಾಧ್ಯಮಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ.