ನಿಮಗೆ ಗೊತ್ತೆ…. ಅರಿವಳಿಕೆ (Anaesthesia) ಇತಿಹಾಸ?

0
1614

1846 ನೇ ಇಸವಿಯ ಅಕ್ಟೋಬರ್ 16, ಅಮೇರಿಕಾದ ಬಾಸ್ಟನ್ ನಗರದ ವಿಚಾರದಲ್ಲಿ ಅದು ಒಂದು ಸಾಧಾರಣ ಮುಂಜಾನೆ ಆಗಿರಲಿಲ್ಲ. ಮ್ಯಾಸಚ್ಯುಸೆಟ್ಸ್ ಜನರಲ್ ಹಾಸ್ಪಿಟಲ್‍ನ ಶಸ್ತ್ರಚಿಕಿತ್ಸಾ ವಿಭಾಗದ ಆ್ಯಂಫಿ ಥಿಯೇಟರ್ ಕೊಠಡಿ ಕುತೂಹಲಭರಿತ ವೈದ್ಯವೃಂದದಿಂದ ಕಿಕ್ಕಿರಿದು ತುಂಬಿತ್ತು. ಸುಮಾರು ಹತ್ತು ಗಂಟೆಗೆ ಬಾಸ್ಟನ್ ನಗರದ ಪ್ರಖ್ಯಾತ ದಂತ ವೈದ್ಯ ಡಾ. ವಿಲಿಯಂ ಮಾರ್ಟನ್ ಒಂದು ಗಾಜಿನ ಬುರುಡೆಯನ್ನು ಕೈಯಲ್ಲಿ ಹಿಡಿದು ಶಸ್ತ್ರಚಿಕಿತ್ಸಾ ಕೊಠಡಿ ಪ್ರವೇಶಿಸಿದ. ಅಲ್ಲಿ ಮಲಗಿದ್ದ ರೋಗಿ ಎಡ್ವರ್ಡ್ ಅಬಾಟ್‍ನಿಗೆ ಗಾಜಿನ ಶೀಶೆಯಿಂದ ಹೊರಬರುವ ಆವಿಯನ್ನು ಉಸಿರೆಳೆದು ಕೊಳ್ಳಲು ಹೇಳಲಾಯಿತು. ಆವಿಯನ್ನು ಎಳೆದುಕೊಂಡ ಕೆಲವೇ ನಿಮಿಷಗಳಲ್ಲಿ ಎಡ್ವರ್ಡ್ ಅಬಾಟ್ ಅರೆ ನಿದ್ರಾವಸ್ಥೆಗೆ ಜಾರಿದ. ಕೂಡಲೆ ಆತನ ಕುತ್ತಿಗೆಯಲ್ಲಿ ಊದಿಕೊಂಡು ವಿಕಾರವಾಗಿದ್ದ ರಕ್ತನಾಳವನ್ನು ಶಸ್ತ್ರಚಿಕಿತ್ಸಕರು ಬೇರ್ಪಡಿಸಿ, ಕತ್ತರಿಸಿ ತೆಗೆದು ಹಾಕಿದರು. ಚರ್ಮದ ಗಾಯಕ್ಕೆ ಎರಡು ಹೊಲಿಗೆಯೂ ಬಿತ್ತು. ಅಚ್ಚರಿಯಿಂದ ಸ್ತಬ್ಧರಾಗಿ ನೋಡುತ್ತಿದ್ದ ವೈದ್ಯ ಸಮುದಾಯಕ್ಕೆ, ಕೆಲಸಮಯದ ನಂತರ ಎಚ್ಚರಗೊಂಡ ಎಡ್ವರ್ಡ್ ಅಬಾಟ್ ಹೇಳಿದ್ದಿಷ್ಟು- ‘ನನಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದುದರ ಸಂಪೂರ್ಣ ಅರಿವು ಇತ್ತು. ಆದರೆ ಎಳ್ಳಷ್ಟೂ ನೋವಾಗಲಿಲ್ಲ!’.

ಉಗಮವಾಯಿತು ಅರಿವಳಿಕೆ ಶಾಸ್ತ್ರ ವೈದ್ಯಕೀಯ ಜಗತ್ತಿಗೆ, ಮಾನವ ಕುಲದ ಆರೋಗ್ಯ ರಕ್ಷಣೆಗೆ ಈ ಮಹಾನ್ ದಿನದ ಕೊಡುಗೆ ಅಂತಿಂಥದ್ದಲ್ಲ. ಈಥರ್ ಎಂಬ ರಾಸಾಯನಿಕದ ಆವಿಯ ಸೇವನೆಯಿಂದ ನೋವು ರಹಿತ ಶಸ್ತ್ರಚಿಕಿತ್ಸೆಯ ಸಾಧ್ಯತೆಯ ಮಹಾಪರಿಧಿಯನ್ನೇ ತೆರೆದಿಟ್ಟ ದಿನಾ ಅದು. ಅನಸ್ತೇಷಿಯಾ ಅಥವಾ ಅರಿವಳಿಕೆ ಶಾಸ್ತ್ರದ ಉಗಮವಾಗಿದ್ದೇ ಅಂದು!

ತಿಳಿದಿರಲೇಬೇಕಾದ ಸಂಗತಿ

ಮುಖ್ಯವಾಗಿ ಎಲ್ಲರೂ ಅರಿಯಬೇಕಾದ ವಿಷಯವೆಂದರೆ ಅರಿವಳಿಕೆ ನೀಡುವ ಪ್ರಕ್ರಿಯೆಯಲ್ಲಿ ರೋಗಿಗೆ ಆಗಬಹುದಾದ ಅಪಾಯದ ಸಾಧ್ಯತೆ. ಇದನ್ನು ಅನಸ್ತೇಷಿಯಾ ರಿಸ್ಕ್ ಎನ್ನುತ್ತಾರೆ. ಇತ್ತೀಚಿನ ವಿಧಾನಗಳು ಅತ್ಯಂತ ಸುರಕ್ಷಿತವಾಗಿದ್ದರೂ ಕೆಲವೊಮ್ಮೆ ರೋಗಿಯ ದೇಹದ ಪ್ರತಿಕೂಲ ಪರಿಸ್ಥಿತಿ, ದೀರ್ಘಾವಧಿಯಿಂದ ಇರುವ ವ್ಯಾಧಿಗಳು, ಅರಿವಳಿಕೆ ರಾಸಾಯನಿಕಗಳಿಗೆ ಅಪರೂಪಕ್ಕೆ ಆಗುವ ಅಸಹಜ ಪರಿಣಾಮಗಳು ರೋಗಿಯ ಪರಿಸ್ಥಿತಿಯನ್ನು ಬಿಗಡಾಯಿಸಬಹುದು. ಆದರೆ ಬಹಳಷ್ಟು ಸಮಯದಲ್ಲಿ ಈ ರಿಸ್ಕ್ ಅನ್ನು ಮನಗಂಡು ಅರಿವಳಿಕೆ ತಜ್ಞರು ಈ ಸಂಗತಿಯನ್ನು ರೋಗಿಗೆ ಅಥವಾ ಅವರ ಸಂಬಂಧಿಕರಿಗೆ ಮನವರಿಕೆ ಮಾಡಿಕೊಡುತ್ತಾರೆ. ಪ್ರಾಣ ಉಳಿಸುವ ಶಸ್ತ್ರಚಿಕಿತ್ಸೆಗಳಲ್ಲಿ ಈ ರಿಸ್ಕ್ ಗಣನೀಯವಾಗಿದ್ದರೂ, ಕೆಲವೊಮ್ಮೆ ಸಂಬಂಧಿಕರಿಗೆ ಶಸ್ತ್ರಚಿಕಿತ್ಸೆಗೆ ಮುನ್ನವೇ ತಿಳಿ ಹೇಳಿ, ಅವರ ಒಪ್ಪಿಗೆ ಪಡೆದು ಮುಂದುವರೆಯಬೇಕಾಗುತ್ತದೆ.

Also read: ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಲೋಳೆಸರದ ಉಪಯುಕ್ತತೆಗಳು