ಐತಿಹಾಸಿಕ ಸಾಧನೆ :15 ವರ್ಷಗಳ ನಂತರ ವಿಶ್ವಕಪ್ ಹಾಕಿ ಗೆದ್ದ ಜ್ಯೂನಿಯರ್ಸ್

0
619

ಲಕ್ನೋ: ಹದಿನೈದು ವರ್ಷಗಳ ನಂತರ ವಿಶ್ವಕಪ್ ಹಾಕಿಯಲ್ಲಿ ಭಾರತ ಹೊಸ ಭಾಷ್ಯ ಬರೆದಿದೆ. ಬೆಲ್ಜಿಯಂ ತಂಡವನ್ನು ಫೈನಲ್ ನಲ್ಲಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಿಕ್ಕಿರಿದು ತುಂಬಿದ್ದ ಮೇಜರ್ ಧ್ಯಾನ್ ಚಂದ್ ಮೈದಾನದಲ್ಲಿ ಭಾನುವಾರ (ಡಿ 18) ನಡೆದ ಜಿದ್ದಾಜಿದ್ದಿನ ಫೈನಲ್ ನಲ್ಲಿ ಬೆಲ್ಜಿಯಂ ತಂಡವನ್ನು 2-1 ಅಂತರದಿಂದ ಸೋಲಿಸಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

2001ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್ ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಚೊಚ್ಚಲ ಪ್ರಶಸ್ತಿ ಗಳಿಸಿದ್ದ ಭಾರತ, 2016ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿದೆ.

ಮೊದಲಾರ್ಧದಲ್ಲಿ ಅತ್ಯಾಕರ್ಷಕ ಎರಡು ಗೋಲು ಗಳಿಸುವ ಮೂಲಕ, ಭಾರತದ ಕಿರಿಯರು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಪಂದ್ಯದ 8ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಮತ್ತು 22ನೇ ನಿಮಿಷದಲ್ಲಿ ಸಿಮ್ರನ್ಜೀತ್ ಸಿಂಗ್ ಗೋಲು ಹೊಡೆದರು.

ಬೆಲ್ಜಿಯಂ ತಂಡದ ರೊಲೆಂಟ್ ಓಲ್ಟಮನ್ಸ್ ಪೆನಾಲ್ಟಿ ಕಾರ್ನರ್ ಮೂಲಕ ಪಂದ್ಯದ 70ನೇ ನಿಮಿಷದಲ್ಲಿ ಗೋಲು ಹೊಡೆದರು. ಕೆನಡಾ (4-0), ಇಂಗ್ಲೆಂಡ್ (5-3), ದಕ್ಷಿಣ ಆಫ್ರಿಕಾ (2-1), ಸ್ಪೇನ್ ಮತ್ತು ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಭಾರತದ ಕಿರಿಯರು ಫೈನಲ್ ತಲುಪಿದ್ದರು.

ವಿಶ್ವಕಪ್ ಗೆದ್ದ ಹರ್ಜಿತ್ ಸಿಂಗ್ ಸಾರಥ್ಯದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 15ವರ್ಷಗಳ ನಂತರ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಕಿರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು.