ನೆಗಡಿ ಕೆಮ್ಮು ಸಾಮಾನ್ಯ ಖಾಯಿಲೆ ಇರಬಹುದು, ಎಚ್ಚರ ವಹಿಸದಿದ್ದರೆ ಪ್ರಾಣಕ್ಕೆ ಅಪಾಯಕಾರಿ!!

0
1177

ಮಕ್ಕಳಲ್ಲಿ ನೆಗಡಿ, ಕೆಮ್ಮು, ಗಂಟಲು ಬಾಧೆ ಸಾಮಾನ್ಯ. ಡಾಕ್ಟರ್‍ಗಳು ಅಂತವರಿಗೆ ಆಂಟಿ ಬಯಾಟಿಕ್ಸ್ ಕೊಡುತ್ತಾರೆ. ಇದರಿಂದ ಮಕ್ಕಳು ಒಂದೆರಡು ವಾರಗಳಲ್ಲಿ ಸರಿಹೋಗುತ್ತಾರೆ. ಆದರೆ ಮತ್ತೆದೇ ನೆಗಡಿ ಕೆಮ್ಮು ಲಕ್ಷಣಗಳು ಮರುಕಳಿಸುವುದರಿಂದ ಶಾಲೆಗೆ ಸರಿಯಾಗಿ ಹೋಗಲಾರದೆ, ಕಲಿಕೆಗೆ ತೊಂದರೆಯಾಗುತ್ತದೆ.

ಇಂಥ ಸಂದರ್ಭದಲ್ಲಿ ಮಕ್ಕಳ ಕೆಮ್ಮು-ಕಫ ಪರೀಕ್ಷೆ ಮಾಡಿಸಿ ಅದು ಅಸ್ತಮಾ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಕೆಲವೊಮ್ಮೆ ವೈದ್ಯರು ಇದನ್ನು ಅಲರ್ಜಿ, ಟಾನ್ಸಿಲ್ಸ್, ಜನರಲ್ ವೀಕ್‍ನೆಸ್ ಎಂದು ತಪ್ಪಾಗಿ ಗುರುತಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸುವದಲ್ಲದೆ ಸಿಕ್ಕ ಸಿಕ್ಕ ಮಾತ್ರೆ, ಔಷಧಿಗಳ ಪ್ರಯೋಗ ಮಕ್ಕಳ ಮೇಲೆಬೇಡ.

ನಿಯಂತ್ರಣ ಸಾಧ್ಯ:

ಇದು ಯಾರಿಗೆ? ಯಾವಾಗ? ಏಕೆ? ಎಷ್ಟು? ತೀವ್ರವಾಗಿ ಬರುತ್ತದೆ ಅಥವಾ ಕಾಡುತ್ತದೆ ಎಂದು ಹೇಳಲಾಗದು. ಈ ನಿಟ್ಟಿನಲ್ಲಿ ಸಾಕಷ್ಟು ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿದ್ದರೂ ಜನಸಾಮಾನ್ಯರಲ್ಲಿ ಇದರ ಬಗ್ಗೆ ಇರುವ ಊಹಾಪೋಹಗಳು, ಸಂಶಯಗಳು ಸ್ಥಿರವಾಗಿವೆ. ಇದರ ಅತಿಯಾದ ಬಾಧೆಗೆ ನಿರ್ಲಕ್ಷ್ಯವೇ ಪ್ರಮುಖ ಕಾರಣ.

ಕಾರಣಗಳೇನು?

ವೇಗವಾಗಿ ನಡೆದರೂ, ನಾಲ್ಕು ಮೆಟ್ಟಿಲನ್ನು ಹತ್ತಿದರೂ `ಹುಷ್’ ಎಂದು ಆಯಾಸಪಡುವ ಲಕ್ಷಣಗಳು ಅಸ್ತಮಾದ್ದೇ ಆದರೂ ಅದರಲ್ಲಿ ವೈವಿಧ್ಯತೆಯಿದೆ. ಇವುಗಳನ್ನು `ಫೇನೋ ಟೈಪ್ಸ್’ ಎನ್ನುತ್ತಾರೆ. ಕೆಲವರಿಗೆ ಕೆಲವು ಋತುಮಾನಗಳಲ್ಲಿ ಅಸ್ತಮಾ ತುಂಬಾ ಪೀಡಿಸುತ್ತದಾದರೂ ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ.

ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ ಪರಿಸರದಿಂದಲೂ ಬರಲು ಸಾಧ್ಯವಿದೆ. ಉದಾಹರಣೆಗೆ ಗಣಿ, ಗುಡ್ಡಗಾಡು, ತೀರಪ್ರದೇಶ, ಕಲುಷಿತ ಪ್ರದೇಶಗಳಲ್ಲಿ ಕೆಲಸ ಮಾಡುವವರನ್ನು ಅಸ್ತಮಾ ಹೆಚ್ಚಾಗಿ ಕಾಡಿಸುತ್ತದೆ. ಇನ್ನಷ್ಟು ಕಾರಣಗಳೆಂದರೆ ಎನ್‍ಕೂಲ್‍ಗಳು, ಅತಿ ತಣ್ಣನೆಯ ತಂಪು ಪೇಯಗಳ ಸೇವನೆ, ಮನೆಯಲ್ಲಿ ಧೂಳು, ಕಸ, ಮಣ್ಣು, ಸಮುದ್ರ ಆಹಾರ ಇತ್ಯಾದಿಗಳೂ ಅಸ್ತಾಮಾಗೆ ಕಾರಣ.

ಜಾಗ್ರತೆಗಳು:

ಉಬ್ಬಸ ಬಾರದಂತೆ ಸಾಕಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸುವುದು ಅವಶ್ಯಕ. ಧೂಳು, ಕಲುಷಿತ ವಾತಾವರಣದಿಂದ ಮುಕ್ತರಾಗುವುದು, ಆಹಾರ ಪದಾರ್ಥಗಳ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ. ತಂಬಾಕು ಸೇವನೆ, ಬೀಡಿ, ಸಿಗರೇಟು, ಚುಟ್ಟ, ಭಂಗಿಯಂತ ದುಶ್ಚಟಗಳಿಂದ ದೂರವಿರಬೇಕು. ಮಲಗುವ ಕೋಣೆ (ಬೆಡ್‍ರೂಂ)ನ್ನು ಸ್ಟೋರ್ಸ್ ರೂಂನಂತೆ ಬಳಸಬಾರದು.

ತಂದೆ-ತಾಯಿಯರಲ್ಲಿ ಯಾರಿಗಾದರೂ ಧೂಮಪಾನದ ಅಭ್ಯಾಸವಿದ್ದರೆ ಮಕ್ಕಳಿಗೆ ಬೇಗ ಅಸ್ತಮಾ ಸಾಧ್ಯತೆ ಹೆಚ್ಚು. ಕ್ರಿಮಿನಾಶಕಗಳ ವಾಸನೆ, ನೊಣ, ಸೊಳ್ಳೆ ಕಾಯಿಲ್ಸ್, ಊದುಬತ್ತಿಯ ಹೊಗೆ, ಘಾಟು ವಾಸನೆ ಅಸ್ತಮಾಕ್ಕೆ ಪ್ರೇರಕ ಅಂಶಗಳು. ವ್ಯಾಯಾಮ ಮಾಡುವಾಗ ದೀರ್ಘವಾಗಿ ಉಸಿರಾಡುತ್ತಿರಬೇಕು. ಹಗುರಾದ ವ್ಯಾಯಾಮ ಕಡ್ಡಾಯವಾಗಿ ಮಾಡಬೇಕು. ಬೆಚ್ಚನೆ ವಾತಾವರಣದಲ್ಲಿ ಇರುವುದು ಒಳ್ಳೆಯದು.