ತುಂಬಾ ದುಡ್ಡು ಕೊಟ್ಟು ಪಿಜ್ಜಾವನ್ನು ಯಾಕೆ ಅಂಗಡಿಯಲ್ಲಿ ತಿನ್ನುತ್ತಿರಾ? ಸುಲಭವಾಗಿ ಮನೆಯಲ್ಲೇ ಮಾಡಿ!!

0
1160

ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಇಷ್ಟ ಪಡದವರು ಯಾರಿದಾರೆ? ಮಕ್ಕಳಂತೂ ತುಂಬಾ ಇಷ್ಟ ಪಟ್ಟು ತಿಂತಾರೆ. ಮನೆಯಲ್ಲಿ ಸರಳವಾಗಿ ಪಿಜ್ಜಾ ಮಾಡುವ ವಿಧಾನ ಇಲ್ಲಿದೆ ಅದೂ ಕೂಡ ಮೈಕ್ರೋವೇವ್ ಒವನ್ ಇಲ್ಲದೇ

ಬೇಕಾಗುವ ಸಾಮಗ್ರಿ :

* ಪಿಜ್ಜಾ ಬೇಸ್

 • ಮೈದಾಹಿಟ್ಟು – 3/4 ಬಟ್ಟಲು
 • ಗೋದಿಹಿಟ್ಟು – 1/4 ಬಟ್ಟಲು
 • ಯೀಸ್ಟ್ – 1 ಚಮಚ (ಒಂದು ಗಂಟೆ ಮುಂಚೆ ನೀರಿನಲ್ಲಿ ನೆನೆಸಿಡಿ)
 • ಅಡುಗೆ ಸೋಡಾ – 1/4 ಚಮಚ
 • ಉಪ್ಪು – ರುಚಿಗೆ
 • ಎಣ್ಣೆ – 1 ಚಮಚ

ಟಾಪಿಂಗ್ ಗೆ

 • ಚೌಕಾಕಾರವಾಗಿ ಹೆಚ್ಚಿದ ಈರುಳ್ಳಿ – 1 ಬಟ್ಟಲು
 • ಬೀಜ ತೆಗೆದು ಚೌಕಾಕಾರವಾಗಿ ಹೆಚ್ಚಿದ ಟೊಮೆಟೊ – 1 ಬಟ್ಟಲು
 • ಪನೀರ್ ಕ್ಯೂಬ್ಸ್ – 1 ಬಟ್ಟಲು
 • ತುರಿದ ಚೀಸ್ – 1 ಬಟ್ಟಲು
 • ಉದ್ದುದ್ದ ಹೆಚ್ಚಿದ ಬೇಬಿ ಕಾರ್ನ್ – 1 ಬಟ್ಟಲು (ನಿಮ್ಮ ಇಷ್ಟದ ಯಾವ ತರಕಾರಿ ಬೇಕಾದರೂ ಹಾಕಬಹುದು)
 • ಟೊಮೆಟೊ ಸಾಸ್
 • ಗ್ರೀನ್ ಚಿಲಿ ಸಾಸ್
 • ಒರಿಗೇನೊ
 • ಮಿಕ್ಸ್ಡ್ ಹರ್ಬ್ಸ್
 • ಉಪ್ಪು ರುಚಿಗೆ
 • ಬೆಣ್ಣೆ – 1 ಚಮಚ

ವಿಧಾನ :

ಮೊದಲಿಗೆ ಮೈದಾಹಿಟ್ಟು, ಗೋದಿಹಿಟ್ಟು, ಅಡುಗೆ ಸೋಡಾ, ಉಪ್ಪು ಜರಡಿ ಹಿಡಿದು ಚನ್ನಾಗಿ ಕಲೆತ ನಂತರ ಎಣ್ಣೆ, ನೆನೆಸಿಟ್ಟ ಯೀಸ್ಟ್ ಹಾಕಿ ಒಬ್ಬಟ್ಟಿನ ಹದಕ್ಕೆ ಸ್ವಲ್ಪ ಮೃದುವಾಗಿ ಕಲಸಿ ಒದ್ದೆ ಬಟ್ಟೆ ಹೊದಿಸಿ 2 ಗಂಟೆ ನೆನೆಯಲು ಬಿಡಿ. 2 ಗಂಟೆ ನಂತರ ಅದು ಚನ್ನಾಗಿ ಉಬ್ಬಿರಬೇಕು.

ಒಂದು ಫ್ರೈಯಿಂಗ್ ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿ ಕ್ರಮವಾಗಿ ಒಂದೊಂದೇ ತರಕಾರಿಗಳನ್ನು ಹಾಕಿ ಕೈಯಾಡಿಸಿ ಮುಚ್ಚಿಡಿ. ಜಾಸ್ತಿ ಬೇಯಿಸಬೇಡಿ.

ಈಗ ಉಪ್ಪು, ಒರಿಗೇನೊ, ಮಿಕ್ಸ್ಡ್ ಹರ್ಬ್ಸ್, 1 ಚಮಚ ಟೊಮೆಟೊ ಸಾಸ್, 1 ಚಮಚ ಗ್ರೀನ್ ಚಿಲಿ ಸಾಸ್ ಹಾಕಿ ಪೂರ್ತಿ ಉರಿಯಲ್ಲಿ ಬೇಗ ಬೇಗ ಸಾಸ್ ಆವಿಯಾಗಿ ಬೆರೆಯುವವರೆಗೆ ಕೈಯಾಡಿಸಿ. ಮುಚ್ಚಬೇಡಿ ಕಲಸಿದ ಹಿಟ್ಟನ್ನು ನಿಂಬೆ ಗಾತ್ರದಷ್ಟು ತಗೆದುಕೊಂಡು ಸ್ವಲ್ಪ ದಪ್ಪವಾಗಿ ಚಿಕ್ಕ ಚಪಾತಿಯ ಅಳತೆಗೆ ಲಟ್ಟಿಸಿಕೊಳ್ಳಿ.

ದೋಸೆ ತವಾ ಬಿಸಿ ಮಾಡಿ ಮಂದ ಉರಿಯಲ್ಲಿ ಒಂದು ಬದಿ ಮಾತ್ರ ಬೇಯಿಸಿ. ಈಗ ಅದನ್ನು ತವಾದಿಂದ ತೆಗೆದು ಬೇಯಿಸಿದ ಭಾಗದ ಮೇಲೆ ಮೊದಲಿಗೆ ಟೊಮೆಟೊ ಸಾಸ್ ಹರಡಿ (ನಿಮಗೆಷ್ಟು ಬೇಕೋ ಅಷ್ಟು), ತಯಾರಿಸಿಟ್ಟ ತರಕಾರಿಗಳನ್ನು ಅಂದವಾಗಿ ಜೋಡಿಸಿ, ತುರಿದ ಚೀಸ್ ಹರಡಿ ಮೇಲೆ ಒರಿಗೇನೊ ಹಾಗೂ ಮಿಕ್ಸ್ಡ್ ಹರ್ಬ್ಸ್ ಉದುರಿಸಿ.

ಈಗ ಬೇಯಿಸದ ಭಾಗವನ್ನು ಕೆಳಗೆ ಮಾಡಿ ಮಂದ ಉರಿಯಲ್ಲಿ ಮುಚ್ಚಿ ಚೀಸ್ ಕರಗುವವರೆಗೆ ಬೇಯಿಸಿದರೆ ಸಾಕು.

ಬಿಸಿ ಬಿಸಿಯಾದ ಪಿಜ್ಜಾ ಸವಿಯಲು ಸಿದ್ಧ.