ಧಾರ್ಮಿಕ ಆಚರಣೆಯಾಗಿ ಬಂದಿರುವ ಕೊಬ್ಬರಿ ಹೋರಿ ಬೆದರಿಸುವ ರೋಚಕ ಸ್ಪರ್ಧೆ

0
1414

ಕೊಬ್ಬರಿ ಹೋರಿಗಳ ಶರವೇಗದ ಓಟ, ಕೊಬ್ಬಿದ ಹೋರಿ­ಯನ್ನು ಮಣಿಸಿ, ಧರಿಸಿದ ಕೊಬ್ಬರಿ ಹಾರವನ್ನು ಕಿತ್ತುಕೊಳ್ಳುವ ಸಾಹಸಿಗಳು ಕೇಕೆ. ಇಂತಹ ರೋಮಾಂಚನಗಳ ಕ್ಷಣಗಳನ್ನು ಕಣ್ಮುಂಬಿಕೊಂಡ ಜನರು. ಏನೆಂದು ಯೋಚಿಸುತ್ತಿದ್ದೀರಾ? ಅದೇ ಹೋರಿ­ ಬೆದರಿಸುವ ಸ್ಪರ್ಧೆ. ಮುಖ್ಯವಾಗಿ ಹೋರಿ ಬೆದರಿಸುವ ಸ್ಪರ್ಧೆ ಮಲೆನಾಡಿನಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿ ಕಾಣುತ್ತದೆ. ಧಾರ್ಮಿಕ ಆಚರಣೆಯಾಗಿ ಬಂದಿರುವ ಈ ಹಬ್ಬವು ಸಾಮರಸ್ಯದ ಪ್ರತೀಕವೂ ಆಗಿದೆ.

ದೀಪಗಳ ಹಬ್ಬ ದೀಪಾವಳಿ ಬಲಿಪಾಡ್ಯಮಿ ಸಂಭ್ರಮಕ್ಕೆ ವಿಶಿಷ್ಟ ಪರಂಪರೆ ಇದೆ. ಬಲಿ ಚಕ್ರವರ್ತಿಯ ಪೌರಾಣಿಕ ಕಥನದ ಜತೆಗೆ ಹೋರಿ ಬೆದರಿಸುವ ಆಟ ಕೂಡ ಆಚರಣೆಯಾಗಿ ಬಂದಿದೆ. ರೈತಾಪಿ ಜನರ ಮೆಚ್ಚಿನ ಕ್ರೀಡೆ­ಯಾದ ಹೋರಿ­ ಬೆದರಿಸುವ ಸ್ಪರ್ಧೆಯು ಈಗ ಎಲ್ಲ ವರ್ಗದ ಜನರ ಆಕರ್ಷಣೆಗೆ ಒಳಗಾಗಿದೆ. ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಸ್ಪರ್ಧೆಯ ವೀಕ್ಷಣೆಗೆ ಹೆಚ್ಚಿನ ಪ್ರಮಾಣ­ದಲ್ಲಿ ಆಗಮಿಸುತ್ತಾರೆ.

ಸಿಂಗಾರಗೊಂಡು, ಕೊರಳಲ್ಲಿ ಕೊಬ್ಬರಿ ಮಾಲೆಯನ್ನು ಧರಿಸಿಕೊಂಡ ಕೊಬ್ಬಿದ ಹೋರಿಗಳು ಶರವೇಗದಲ್ಲಿ ಓಡುತ್ತಿದ್ದರೆ, ಅವುಗಳ ಮಾಲೀಕರು ರಣಕೇಕೆ ಹಾಕುತ್ತ ಕುಣಿದು ಕುಪ್ಪಳಿ­ಸುತ್ತಾರೆ. ಇನ್ನು, ಸೊಕ್ಕಿನ ಹೋರಿಗಳನ್ನು ಮಣಿಸಲು ನಿಂತಿದ್ದ ಸಾಹಸಿ ಯುವಕರು ಪ್ರಾಣದ ಹಂಗು ತೊರೆದು ಕೊಬ್ಬರಿ ಹರಿಯುವ ತಂತ್ರಗಾರಿಕೆ ನಿಜಕ್ಕೂ ಬೆರಗು ಹುಟ್ಟಿಸುವಂತದು.

ಬಣ್ಣ, ಬಲೂನು, ಗೆಜ್ಜೆಗಳಿಂದ ಸಿಂಗಾರಗೊಂಡ ಹೋರಿಗಳನ್ನು ಒಂದೊಂದಾಗಿ ಓಟಕ್ಕೆ ಬಿಡಲಾಗುತ್ತದೆ. ಅಖಾಡಕ್ಕೆ ಇಳಿದ ಹೋರಿಗಳ ಮಿಂಚಿನ ವೇಗಕ್ಕೆ ಸರಿದು ದಾರಿ ಕೊಡುತ್ತಾ ಕೊಬ್ಬರಿ ಹರಿಯುವ ಯುವಕರ ತಂಡಗಳು ಕೆಲವೊಂದು ಹೋರಿಗಳ ಕೊರಳಿಗೆ ಕೈಹಾಕಿ ಅವುಗಳನ್ನು ಮಣಿಸಿ ಕೊಬ್ಬರಿ ಹಾರ ವಶಕ್ಕೆ ಪಡೆಯುವಲ್ಲಿ ಸಫಲರಾಗುತ್ತಿದ್ದ ದೃಶ್ಯ ಪ್ರೇಕ್ಷಕರನ್ನು ರೋಮಾಂಚನಕ್ಕೆ ತಳ್ಳುತ್ತದೆ.

 

ಟೈಗರ್, ಮಯೂರ, ವಾಯುಪುತ್ರ, ಗರುಡ, ಜೋಗಿ, ಮಹಾರಾಜಾ, ರಾಜಾಹುಲಿ ಹೀಗೆ ತರಾವರಿ ಹೆಸರಿನ ಹೋರಿಗಳು ತಮ್ಮ ದಿಟ್ಟತನ ಪ್ರದರ್ಶಿಸುವ ಮೂಲಕ ಸ್ಪರ್ಧೆಗೆ ರಂಗು ನೀಡುತ್ತವೆ. ಕೊಂಬಿಗೆ ಆಕರ್ಷಣೀಯವಾಗಿ ಸಿಂಗಾರ ಮಾಡಿದ ಎತ್ತರದ ಹೋರಿಗಳಿಗೆ ‘ಪೀ..ಪೀ…‘ ಎಂದು ಪ್ರೇಕ್ಷಕರು ಹುರಿದುಂಬಿಸುತ್ತಾರೆ.

ಯಾವ ಹೋರಿಯುನ್ನು ಮಣಿಸಲು ಸಾಧ್ಯವಾಗುವುದಿಲ್ಲ ಅಂತಹ ಹೋರಿಗಳಿಗೆ ಬೈಕ್‌, ಚಿನ್ನ, ಟಿ.ವಿ, ಫ್ರಿಡ್ಜ್‌ನಂತಹ ಅನೇಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ ಉತ್ತಮ ಕೊಬ್ಬರಿ ಹರಿಯುವ ಸಾಹಸಿಗಳಿಗೂ ನಗದು ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯು ಹೆಚ್ಚಾಗಿ ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ, ಶಿಗ್ಗಾವಿ, ಧಾರವಾಡ ಮತ್ತಿತರ ಮಲೆನಾಡಿನ ಭಾಗದಲ್ಲಿ ರಾಷ್ಟ್ರಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗಳನ್ನು ಆಯೋಜಿಸುತ್ತ ಬರುತ್ತಿದ್ದು ಹೆಚ್ಚಾಗಿ ಕಂಡುಬರುತ್ತದೆ.