ಕೇವಲ 5 ರೂ. ನಿಂದ ದಿನಗೂಲಿ ಕೆಲಸ ಆರಂಭಿಸಿದ ಅನಾಥ ಹುಡುಗಿ ಜ್ಯೋತಿ ರೆಡ್ಡಿ ಪ್ರಸ್ತುತ 15 ಮಿಲಿಯನ್ ಡಾಲರ್ ಲಾಭವುಳ್ಳ ಕಂಪನಿಯ ಒಡತಿ..!

0
3276

ಬರಿಗಾಲಿನಲ್ಲಿ ಓಡುತ್ತ ಶಾಲೆಗೇ ಹೋಗುತ್ತಿದ್ದ ಹುಡುಗಿ ಈಗ ಮರ್ಸಿಡಿಸ್ ಬೆಂಝ್ ಕಾರನ್ನು ಓಡಿಸುತ್ತಿದ್ದಾಳೆ, ಮತ್ತು ಸಾಫ್ಟವೇರ್ ಕಂಪೆನಿಯ 15 ಮಿಲಿಯನ್ ಡಾಲರ್ ನ ವಹಿವಾಟು ನಡೆಸುತ್ತಿದ್ದಾರೆ. ಸಾಧಿಸುವ ದೃಢ ಮನಸ್ಸು ಮತ್ತು ಛಲವಿದ್ದರೆ ಉನ್ನತವಾದುದನ್ನು ಸಾಧಿಸಬಹುದು ಎಂಬುದಕ್ಕೆ ಇವರೊಂದು ಉದಾಹರಣೆ. ಬಡತನದ ಬೇಗೆಯಲ್ಲಿ ಬೆಂದು,  ಪೆಟ್ಟು ಬಿದ್ದ ಕಲ್ಲು ಶಿಲೆಯಾದಂತೆಯೇ, ಜೀವನದಲ್ಲಿ ಬರುವಂತಹ ಅಡೆತಡೆಗಳನ್ನು ಮೀರಿ ಸಾಧನೆಮಾಡಿದ ಅದೆಷ್ಟೋ ಮಹಿಳೆಯರಿದ್ದಾರೆ. ಅದರಲ್ಲಿ ಜ್ಯೋತಿ ರೆಡ್ಡಿ ಕೂಡ ಒಬ್ಬರು.

source: nripulse.com

1970 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದ ವರಂಗಲ್ ನ ಹನುಮಕೊಂಡ ಮಂಡಲದ ನರಸಿಂಹುಲ ಗುಡ್ಡದ ಅತೀ ಬಡಕುಟುಂಬದಲ್ಲಿ ಎರಡನೇ ಮಗಳಾಗಿ ಜನಿಸಿದ ಡಿ. ಅನಿಲ ಜ್ಯೋತಿ ರೆಡ್ಡಿ (ಜ್ಯೋತಿ ರೆಡ್ಡಿ) ಅವರ ಜೀವನದ ಕಥೆ ನಮ್ಮ ನಿಮ್ಮೆಲ್ಲರಿಗೆ ಆದರ್ಶ.

source: im.rediff.com

ತಮ್ಮ ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥಾಶ್ರಮದ ಪಾಲಾದ ಜ್ಯೋತಿ ರೆಡ್ಡಿ ಹಾಗೋ ಹೀಗೂ ಹತ್ತನೇ ತರಗತಿಯನ್ನು ಪೂರೈಸಿದಳು. ನಂತರ ಹಿರಿಯರ ಬಲವಂತದಿಂದಾಗಿ ತನ್ನ 16 ರ ಹರೆಯದಲ್ಲಿ ಮದುವೆಯಾದರು. ನಂತರ 2 ಮಕ್ಕಳಿಗೆ ಜನ್ಮ ನೀಡುತ್ತಾರೆ. ಪತಿ ಇದ್ದರೂ ಇಲ್ಲದಂತೆ ಅನ್ನುವ ಪರಿಸ್ಥಿತಿ ಅವಳದು. ಮಕ್ಕಳನ್ನು ಸಾಕಲು 5 ರೂ. ದಿನಗೂಲಿ ಸಂಬಳಕ್ಕೆ ಕೆಲಸ ಮಾಡತೊಡಗಿದರು. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಮುಂದೆ ಸಾಗುವ ಮನೋಧೈರ್ಯದಿಂದ ಜೀವನವನ್ನು ಸವಾಲಾಗಿ ಸ್ವೀಕರಿಸಿ . 1988-89 ರಲ್ಲಿ ನೆಹರೂ ಯುವ ಕೇಂದ್ರದ ವಯೋಜನ ವಿದ್ಯಾಲಯದಲ್ಲಿ ನೈಟ್ ಸ್ಕೂಲ್ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆವಾಗ ಅವರಿಗೆ ಸಿಗುತ್ತಿದ್ದದ್ದು ಮಾಸಿಕ 120/- ರೂ. ಸಂಬಳ. ಇಷ್ಟರಲ್ಲಿ ತನ್ನ ಮತ್ತು ಇಬ್ಬರ ಮಕ್ಕಳ ಜೀವನ ಸಾಗಿಸುತ್ತಿದ್ದರು. 1989-90 ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವೃತ್ತಿಗೆ ಸೇರಿದರು. ಆವಾಗಿನ ಸಂಬಳ 190/- ರೂ. ಇಷ್ಟಕ್ಕೆ ಸುಮ್ಮನಾಗದ ಜ್ಯೋತಿ ರೆಡ್ಡಿ ದುಡಿಯಬೇಕು ದುಡಿದು ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ಕಟ್ಟಿ ಕೊಡಬೇಕು ಎನ್ನುವ ಉದ್ದೇಶದಿಂದ ರಾತ್ರಿ ಸಮಯ ಮನೆಯಲ್ಲಿ ಕೂತು ಪೆಟಿಕೋಟ್ ಹೊಲಿದು ಅದನ್ನು ಮಾರಿ ಜೀವನ ಕಳೆದರು.

source: bignewslive.com

ಇಷ್ಟೆಲ್ಲ ಕಷ್ಟಪಡುತ್ತಿದ್ದ ಜ್ಯೋತಿ ರೆಡ್ಡಿ ಮುಂದಿನ ದಿನಗಳಲ್ಲಿ ಗಂಡನ ಕಿರುಕುಳಕ್ಕೆ ಬಲಿಯಾಗಿ ಅವನಿಂದ ಬೇರ್ಪಟ್ಟು ಇಬ್ಬರು ಮಕ್ಕಳ ಜೊತೆ ಮೈಲಾರನ್ ಗ್ರಾಮದಿಂದ ಹನುಮಕೊಂಡ ಪೇಟೆಗೆ ವಾಸ್ತವ್ಯ ಬದಲಾಯಿಸಿದರು. ಅಲ್ಲಿ ಜ್ಯೋತಿ ರೆಡ್ಡಿ ಟೈಪ್ ರೈಟಿಂಗ್ ಕಲಿಯುತ್ತಾರೆ. ಕ್ರಾಫ್ಟ್ ವರ್ಕ್ ಕಲಿಯುತ್ತಾರೆ. ಹೀಗೆ ಕಷ್ಟ ಪಟ್ಟು 1991-94 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ವಿದ್ಯಾಲಯದಲ್ಲಿ ಬಿ.ಎ. ಪದವಿ ಮಾಡುತ್ತಾರೆ. ಇವೆಲ್ಲವೂ ತನ್ನ ಹೊಟ್ಟೆಪಾಡಿನ ಕೆಲಸದ ಜೊತೆ ಜೊತೆಯಲ್ಲಿ ನಡೆಯುತ್ತದೆ. 1999 ರಲ್ಲಿ ಕಕಾಟಿಯಾ ಯೂನಿವರ್ಸಿಟಿಯಲ್ಲಿ “ಸಮಾಜಸೇವೆ” ವಿಷಯದಲ್ಲಿ ಪಿ.ಎಚ್.ಡಿ. ಮಾಡಿ ಸ್ನಾತ್ತಕೋತ್ತರ ಪದವಿ ಪಡೆಯುತ್ತಾರೆ. ಆವಾಗ ಇವರಿಗೆ ಸ್ಪೆಷಲ್ ಟೀಚರ್ ಕೆಲಸ ಸಿಗುತ್ತದೆ. ಮಾಸಿಕ ಸಂಬಳ ಕೇವಲ 398/- ರೂ. ಅವರು ಈ ಕೆಲಸಕ್ಕಾಗಿ 70 ಕಿ.ಮೀ. ದೂರದ ಅಮೀನ್ ಪೇಟೆಯ ಶಾಲೆಗೆ ದಿನನಿತ್ಯ ಕೆಲಸಕ್ಕೆ ಹೋಗಬೇಕಾಗಿತ್ತು.

source: fridaymagazine.ae

ಹೀಗೆ ಪ್ರಯಾಣದ ವೇಳೆ ಬಸ್ ನಲ್ಲಿರುವ ಸಹ ಪ್ರಯಾಣಿಕರಿಗೆ ಸೀರೆ, ವಸ್ತ್ರಗಳನ್ನು ಮಾರಿ ಅದರಿಂದ ಬರುವ ಲಾಭದಿಂದ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು. ನಂತರ ಅವರ ವೃತ್ತಿ ಖಾಯಂ ಆಗುತ್ತದೆ. ತನ್ನೂರ ಶಾಲೆಯಲ್ಲಿ 2,750/- ರೂ. ಸಂಬಳಕ್ಕೆ ದುಡಿಯುತ್ತಾರೆ. ಬಳಿಕ ಸರಕಾರಿ ಶಿಕ್ಷಕಿಯಾಗುವ ಮೂಲಕ ಅವರ ಮಾಸಿಕ ಸಂಬಳ 6,000/- ಕ್ಕೇರುತ್ತದೆ. 1996-2000 ದಲ್ಲಿ ಭಡ್ತಿ ಪಡೆದು 16,000/- ರೂ. ಸಂಬಳಕ್ಕೆ ದುಡಿಯುತ್ತಾರೆ. ಹೀಗೇ ಜೀವನದ ಒಂದೊಂದೇ ಮೆಟ್ಟಿಲೇರಿದ ಜ್ಯೋತಿ ರೆಡ್ಡಿ 2000 ನೇ ಇಸವಿ ಮಹತ್ತರ ತಿರುವನ್ನು ಕಾಡುಕೊಳ್ಳುತ್ತಾರೆ.

source: tamil.theweekendleader.com

ಅಮೆರಿಕಾದಿಂದ ತನ್ನ ಸಂಬಂಧಿ ಮಹಿಳೆ ಒಬ್ಬರು ಊರಿಗೆ ಬಂದಾಗ ಅವರ ಮಾತಿನ ಮೇಲೆ ಪ್ರಭಾವಿತರಾಗಿ ಅಮೆರಿಕಕ್ಕೆ ಹೋಗಿ ಉದ್ಯೋಗ ಮಾಡುವ ಆಸೆ ಹುಟ್ಟುತ್ತದೆ. ಅಮೆರಿಕಾದ ಕೆಲಸದ ಆಸೆಯಿಂದ ಜ್ಯೋತಿ ರೆಡ್ಡಿ ಮಾಡುತ್ತಿದ್ದ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಹೈದರಾಬಾದಿನಲ್ಲಿ ಸಾಫ್ಟ್ ವೇರ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ. ನಂತರ ಮಕ್ಕಳನ್ನು ಹಾಸ್ಟೆಲ್ ಗೆ ದಾಖಲಿಸಿ ಜ್ಯೋತಿ ರೆಡ್ಡಿ ಅಮೆರಿಕದ ವಿಮಾನ ಏರುತ್ತಾರೆ. ಪ್ರಾರಂಭದಲ್ಲಿ ದಿನನಿತ್ಯ 60 ಯುಎಸ್ ಡಾಲರ್ ಗೆ 12 ಗಂಟೆ ದುಡಿಯುತ್ತಾರೆ. ಅಮೆರಿಕಾದ ಗುಜರಾತಿ ಕುಟುಂಬದ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯ ಹೂಡುತ್ತಾರೆ. ಅಮೆರಿಕದಲ್ಲಿ ಗ್ಯಾಸ್ ಸ್ಟೇಷನ್ ಕೆಲಸ, ಗೋಡಾನ್ ನಲ್ಲಿ ಲೋಡ್/ಅನ್ ಲೋಡ್ ಕೆಲಸ, ಬೇಬಿ ಸಿಟ್ಟಿಂಗ್ ನಲ್ಲಿ ವೃತ್ತಿ, ವೀಡಿಯೋ ಶಾಪ್ ನಲ್ಲಿ ಶಾಪ್ ಕೀಪರ್ ಕೆಲಸ ಮಾಡುತ್ತಾರೆ. ಇದರ ಮದ್ಯೆ ಒಂದೆರಡು ಕಂಪೆನಿಯಿಂದ ಉದ್ಯೋಗದ ಆಫರ್ ಬಂದರೂ ಅದಕ್ಕೆ ಸೇರದ ಜ್ಯೋತಿ ಸಣ್ಣಪುಟ್ಟ ಕೆಲಸದಲ್ಲೇ ತೃಪ್ತಿಪಡುತ್ತಾರೆ.

source: charityworld.com

ಅಷ್ಟು ದಿನದಿಂದ ದುಡಿದು ಕೂಡಿಟ್ಟ ಹಣದಿಂದ 2001 ಅಕ್ಟೋಬರ್ ನಲ್ಲಿ ಅಮೆರಿಕದಲ್ಲಿ ಸಣ್ಣಮಟ್ಟದಲ್ಲಿ ತನ್ನ ಸ್ವಂತ ಉದ್ಯಮ “ಕೀ ಸಾಫ್ಟವೇರ್ ಸೊಲ್ಯುಷನ್ಸ್” ಕಂಪೆನಿಯನ್ನು ಸ್ಪಷ್ಟವಾಗಿ ಇಂಗ್ಲೀಷ್ ಮಾತನಾಡಲೂ ಬರದಿದ್ದಿದ್ದರು ಎದೆಗುಂದದೆ ಪ್ರಾರಂಭಿಸುತ್ತಾರೆ. ಅಂದು ಶುರುಮಾಡಿದ ಕಂಪನಿ ಇಂದು 15 ಮಿಲಿಯನ್ ಡಾಲರ್ ನ ವಹಿವಾಟು ನಡೆಸುತ್ತಿದೆ. ಜ್ಯೋತಿ ರೆಡ್ಡಿ ಆ ಕಂಪೆನಿಯ ಅಧ್ಯಕ್ಷೆ ಮತ್ತು ಸಿ.ಇ.ಓ. ಅರ್ಥಾತ್ ಬಹುಕೋಟಿ ಒಡೆತನದ ಕೀ ಸಾಫ್ಟವೇರ್ ಸೊಲ್ಯುಷನ್ಸ್ ನ ಏಕೈಕ ಒಡತಿ!

source: truesuccessstory.com

ಪ್ರಸ್ತುತ ಜ್ಯೋತಿ ರೆಡ್ಡಿ ಇಬ್ಬರು ಮಕ್ಕಳು ಮದುವೆಯಾಗಿದ್ದಾರೆ ಮತ್ತು ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮ್ಮನ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾರೆ. ಇಡೀ ಕುಟುಂಬವು ಫೀನಿಕ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಅದಲ್ಲದೆ ಯು ಎಸ ನಲ್ಲಿ ನಾಲ್ಕು ಮನೆಗಳನ್ನು ಮತ್ತು ಹೈದರಾಬಾದ್ ನ ಕೊಂಪಾಲ್ಲಿಯಲ್ಲಿ ಒಂದು ಮಹಲು ಅನ್ನು ಹೊಂದಿದ್ದಾರೆ. ಎಷ್ಟೆಲ್ಲ ಸಾಧಿಸಿದ ಜ್ಯೋತಿ ರೆಡ್ಡಿ ಪ್ರಸ್ತುತ ಮಿಲಿಯನ್ ಡಾಲರ್ ಒಡತಿಯಾದರೂ ತಾವು ಹುಟ್ಟಿದ ಊರಿನ ಮೇಲೆ ಅಭಿಮಾನವಿದೆ. ಪ್ರತಿ ವರ್ಷ ಅವರ ಹುಟ್ಟುಹಬ್ಬ ಹಾಗೂ ಇತರ ಸಂದರ್ಭದಲ್ಲಿ ಹುಟ್ಟೂರಿಗೆ ಬರುತ್ತಾರೆ.

source: nripulse.com

ತಮ್ಮ ಜೊತೆ ಜೊತೆಗೆ ತನ್ನ ಊರಿನ ಅಭಿವೃದ್ಧಿಗೂ ಕೂಡ ಸಹಾಯ ಮಾಡುತ್ತಿದ್ದಾರೆ. ತಮ್ಮ ಊರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. 220 ಸದಸ್ಯರನ್ನೊಳಗೊಂಡ ಬುದ್ಧಿ ಮಾಂದ್ಯರ ಸೇವಾ ಮಕ್ಕಳ ಕೇಂದ್ರವನ್ನು ನಡೆಸುತ್ತಿದ್ದಾರೆ. ಉತ್ತರ ಅಮೆರಿಕ ತೆಲುಗು ಅಸೋಸಿಯೇಷನ್ ನ ಚೆಯರ್ ಪರ್ಸನ್, ಅರಿಝೋನಾ ಇಸ್ಕಾನ್ ದೇವಸ್ಥಾನದ ಲೈಫ್ ಮೆಂಬರ್ ಹೀಗೇ ಆಂಧ್ರಪ್ರದೇಶದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ಜ್ಯೋತಿ ರೆಡ್ಡಿ ಅವರದ್ದು ದೊಡ್ಡ ಹೆಸರಿದೆ. “ಲೀಡ್ ಇಂಡಿಯಾ 2020” ಯ (ಅಮೆರಿಕ ಚಾಪ್ಟರ್) ಆಂಧ್ರಪ್ರದೇಶ ರಾಜ್ಯದ ಕೋ ಆರ್ಡಿನೇಟರ್ ಆಗಿಯೂ ಅನಿಲ ಜ್ಯೋತಿ ರೆಡ್ಡಿ ಪ್ರಸಿದ್ಧಿ ಪಡೆದಿದ್ದಾರೆ.

source: ficciflo.com

ಎಂತಹದೆ ಕಷ್ಟದ ಸಂದರ್ಭಗಳಲ್ಲಿ ಧೈರ್ಯ, ಛಲ, ಕೆಲಸದ ಮೇಲಿರುವ ಶ್ರದ್ಧೆ ಒಬ್ಬ ವ್ಯಕ್ತಿಯನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು ಸಾಧ್ಯ ಎನ್ನುವುದಕ್ಕೆ ನಮ್ಮ ಮುಂದೆ ನಿದರ್ಶನವಾಗಿ ನಿಂತಿರುವವರು ಜ್ಯೋತಿ ರೆಡ್ಡಿ. ಇವರ ಜೀವನದ ಕಥೆ ಪ್ರತಿಯೊಬ್ಬರಿಗೂ ಮಾದರಿ. ತನ್ನ ಜೀವನದಲ್ಲಿ ಜ್ಯೋತಿ ಬೆಳಗಿಸಿ ಬಡವರ ಬಾಳಿಗೂ ಬೆಳಕಾದ ಜ್ಯೋತಿ ರೆಡ್ಡಿಗೆ ಹ್ಯಾಟ್ಸಾಫ್..!