ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವ ತುಳಸಿ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ..

0
1848

ಹಿಂದೂ ಧರ್ಮವು “ತುಳಸಿ” ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ” ಪವಿತ್ರ ತುಳಸಿ” ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು.

ತುಳಸಿಯೆಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ತುಳಸಿ ಮತ್ತು ಶ್ರೀಕೃಷ್ಣನ ವಿವಾಹವಾಗುವುದು ಎಂದರೆ ಈಶ್ವರನಿಗೆ ಜೀವದಲ್ಲಿರುವ ‘ಪಾವಿತ್ರ್ಯ’ ಎಂಬ ಗುಣವು ಅತಿಯಾಗಿ ಪ್ರಿಯವಾಗಿರುವುದು. ಇದರ ಪ್ರತೀಕವೆಂದು ಶ್ರೀಕೃಷ್ಣನು ‘ವೈಜಯಂತಿ ಮಾಲೆಯನ್ನು’ ಧರಿಸಿರುತ್ತಾನೆ. ಈ ದಿನದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ.

ತುಳಸಿ ಪೂಜೆ ಮಾಡುವ ವಿಧಾನ

ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಲಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಲಸಿ ವಿವಾಹವನ್ನು ಮಾಡುವರು.

ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸ್ವಚ್ಛಗೊಳಿಸಬೇಕು. ತುಳಸಿ ಗಿಡವನ್ನು ನೆಟ್ಟಿದ ಮಡಕೆ ಅಥವಾ ವೃಂದಾವನಕ್ಕೆ ಬಿಳಿ ಬಣ್ಣವನ್ನು ಹಚ್ಚಬೇಕು. ಈಶ್ವರನ ಕಡೆಯಿಂದ ಪ್ರಕ್ಷೇಪಿಸುವ ಶಕ್ತಿಯನ್ನು ಬಿಳಿ ಬಣ್ಣವು ತನ್ನತ್ತ ಆಕರ್ಷಿಸುತ್ತದೆ. ತುಳಸಿಯ ಸುತ್ತ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ನಂತರ ಭಾವಪೂರ್ಣವಾಗಿ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ತುಳಸಿಯ ಗಿಡದಿಂದ ಹೆಚ್ಚು ಪ್ರಮಾಣದಲ್ಲಿ ಕೃಷ್ಣ ತತ್ವವು ಕಾರ್ಯರತವಾಗಿರುತ್ತದೆ. ಆದುದರಿಂದ ಈ ದಿನ ಶ್ರೀ ಕೃಷ್ಣನ ನಾಮವನ್ನು ಜಪಿಸಬೇಕು. ತುಳಸಿ ಕಟ್ಟೆಯ ಸುತ್ತಲೂ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುತ್ತದೆ. ಸಂಜೆ ತುಳಸಿ ಮಹಿಮೆ ಸಾರುವ ಗೀತೆಗಳನ್ನು ಹಾಡುವ ಮೂಲಕ ತುಳಸಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಅಕ್ಕಪಕ್ಕದ ಮುತ್ತೈದಿಯರನ್ನು ಪೂಜೆಗೆ ಕರೆದು ಉಡಿ ತುಂಬುತ್ತಾರೆ.