ಆಧಾಯ ತೆರಿಗೆ ರಿಟರ್ನ್ಸ್‌ ಮಾಡೋದು ಹೇಗೆ ಎಂಬ ಗೊಂದಲವಿದೆಯೇ ಹಾಗಿದ್ದರೆ ಇದನ್ನು ಓದಿ ರಿಲ್ಯಾಕ್ಸ್ ಆಗಿರಿ…!

0
1167

ಆದಾಯ ತೆರಿಗೆ ರಿಟರ್ನ್ಸ್‌ ಮಾಡೋದು ಹೇಗೆ..?

ಐಟಿ ರಿಟರ್ನ್ಸ್ ಫೈಲ್ ಮಾಡೋದು ಅಂದ್ರೆ ಅದೊಂದು ದೊಡ್ಡ ತಲೆನೋವುನ ಕೆಲಸ. ಆದರೆ ಈಗ ಆದಾಯ ತೆರಿಗೆ ಕಟ್ಟಲು ಅನೇಕ ಸುಲಭ ವಿಧಾನಗಳಿವೆ. ಈಗಂತೂ ಆದಾಯ ತೆರಿಗೆ ಕಟ್ಟುವ ಅರ್ಜಿ ಅತ್ಯಂತ ಸರಳವಾಗಿದೆ. ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ಐಟಿ ರಿಟರ್ನ್ಸ್ ಮಾಡುವಾಗ ಸರಿಯಾದ ದಾಖಲೆಗಳನ್ನು ಕೊಂಡೊಯ್ಯದಿದ್ದರೆ ಕಷ್ಟ ಕಷ್ಟ.

ಮೊದಲು ರಿಜಿಸ್ಟರ್ ಮಾಡಿಕೊಳ್ಳಿ.
ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಇ-ಫೈಲಿಂಗ್ ಮಾಡಲು ಮೊದಲು ಆದಾಯ ತೆರಿಗೆ ಇಲಾಖೆಯ ಆನ್‌ಲೈನ್‌ ತೆರಿಗೆ ಪಾವತಿ ವೆಬ್‌ಸೈಟ್‌ (incometaxindiaefiling.gov.in) ನಲ್ಲಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು. ನಿಮ್ಮ ಕಾಯಂ ಖಾತೆ ಸಂಖ್ಯೆ -ಪಾನ್, ಹೆಸರು, ಹುಟ್ಟಿದ ದಿನಾಂಕ ನಮೂದಿಸಿ ಒಂದು ಪಾಸ್‌ವರ್ಡ್‌ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಪಾನ್ ಸಂಖ್ಯೆಯೇ ನಿಮ್ಮ ಯೂಸರ್ ಐಡಿ ಆಗಿರುತ್ತದೆ.

ನೀವು ಹೇಗೆ ಇ-ಫೈಲ್ ಮಾಡುವಿರಿ ಎಂಬುದನ್ನು ಆರಿಸಿಕೊಳ್ಳಿ.
ಆದಾಯ ತೆರಿಗೆ ರಿಟರ್ನ್ಸ್‌ ಇ-ಫೈಲಿಂಗ್ ಮಾಡಲು ಎರಡು ವಿಧಾನಗಳಿವೆ. ಮೊದಲನೆಯದು ಡೌನ್‌ಲೋಡ್ ವಿಭಾಗಕ್ಕೆ ಹೋಗಿ ಅಗತ್ಯವಿರುವ ನಮೂನೆ (Form) ಡೌನ್‌ಲೋಡ್ ಮಾಡಿಕೊಳ್ಳಿ. ಅದನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಕೊಳ್ಳಿ. ನಂತರ ಎಲ್ಲ ವಿವರಗಳನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡಿ. ಬಳಿಕ ಪುನಃ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ. ಇನ್ನೊಂದು ವಿಧಾನವೆಂದರೆ- ಆನ್‌ಲೈನ್‌ನಲ್ಲೇ ನಮೂನೆಯನ್ನು ಆಯ್ಕೆ ಮಾಡಿ ಕ್ವಿಕ್‌ ಫೈಲ್ ಆಯ್ಕೆಯನ್ನು ಬಳಸಿಕೊಳ್ಳುವುದು.

ಅಗತ್ಯವಿರುವ ಫಾರ್ಮ್‌ ಆಯ್ದುಕೊಳ್ಳಿ.

  • ಐಟಿಆರ್‌-1: ವೇತನದಾರ, ಪಿಂಚಣಿದಾರ ಅಥವಾ ಆಸ್ತಿಯಿಂದ ಅಥವಾ ಲಾಟರಿ ಹೊರತಾದ ಯಾವುದೇ ಮೂಲದಿಂದ ಆದಾಯ ಪಡೆಯುವ ವ್ಯಕ್ತಿ.
  • ಐಟಿಆರ್‌-2: ಬಂಡವಾಳ ಹೂಡಿ ಆದಾಯ ಪಡೆಯುವ ವ್ಯಕ್ತಿಗಳಿಗೆ ಈ ನಮೂನೆ. ಐಟಿಆರ್‌ 2ಎ ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ, ಆದರೆ ಬಂಡವಾಳ ಹೂಡಿ ಲಾಭ ಪಡೆಯುವ ವ್ಯಕ್ತಿಗಳಿಗೆ.
  • ಐಟಿಆರ್ 3, 4 ಮತ್ತು 4 ಎಸ್‌: ವೃತ್ತಿಪರರು ಮತ್ತು ಉದ್ಯಮದ ಮಾಲೀಕರಿಗೆ.

ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ನಿಮ್ಮ ಪಾನ್ ಸಂಖ್ಯೆ, ಫಾರ್ಮ್‌ 16, ಬಡ್ಡಿಯ ದಾಖಲೆಗಳು, ಟಿಡಿಎಸ್‌ ಸರ್ಟಿಫಿಕೇಟ್‌ಗಳು, ಹೂಡಿಕೆ ವಿವರಗಳು, ವಿಮೆ ಮತ್ತು ಗೃಹಸಾಲದ ವಿವರಗಳು ಸುಲಭವಾಗಿ ಕೈಗೆ ಸಿಗುವಂತೆ ಇಟ್ಟುಕೊಳ್ಳಿ. ಫಾರ್ಮ್‌ 2ಎಎಸ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಅದರಲ್ಲಿ ನಿಮ್ಮ ಪಾನ್‌ಗೆ ಸಲ್ಲಿಸಿದ ತೆರಿಗೆಯ ಸಾರಾಂಶವಿರುತ್ತದೆ. ನಂತರ ನೀವು ಇನ್ನೂ ಪಾವತಿಸಬೇಕಾದ ತೆರಿಗೆಗಳೇನಾದರೂ ಇವೆಯೆ ಎಂಬುದನ್ನು ಪರೀಕ್ಷಿಸಿದ ಬಳಿಕ ಫಾರ್ಮ್‌ 2ಎಎಸ್‌ ತುಂಬ ಬೇಕು.

ವಾರ್ಷಿಕ 50 ಲಕ್ಷಕ್ಕೂ ಮೀರಿದ ಆದಾಯವಿದ್ದರೆ ಈ ವರ್ಷ ನೀವು AL ಅಥವಾ assets or liabilities ಎಂಬ ಹೆಚ್ಚುವರಿ ಕಾಲಂ ಅನ್ನು ತುಂಬಿಸ ಬೇಕಾಗುತ್ತದೆ. ನೀವು ನಿಮ್ಮ ಆಸ್ತಿಗಳು ಮತ್ತು ಋಣಗಳ ಮೌಲ್ಯವನ್ನು ಬಹಿರಂಗಪಡಿಸಬೇಕಾಗುತ್ತದೆ. ಆಸ್ತಿಗಳನ್ನು ವೆಚ್ಚದ ರೂಪದಲ್ಲಿ ಪ್ರಕಟಿಸಬೇಕಾಗುತ್ತದೆ.

ಫಾರ್ಮ್‌ ಭರ್ತಿ ಮಾಡಿ, ಅಪ್‌ಲೋಡ್ ಮಾಡಿ.
ನೀವು ಆಫ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಲು ಬಯಸಿದ್ದರೆ, ಫಾರ್ಮ್‌ ಡೌನ್‌ಲೋಡ್‌ ಮಾಡಿ ಎಲ್ಲ ವಿವರ ತುಂಬಿದ ಬಳಿಕ generate XML ಗುಂಡಿಯನ್ನು ಕ್ಲಿಕ್‌ ಮಾಡಿ. ನಂತರ ಪುನಃ ವೆಬ್‌ಸೈಟ್‌ಗೆ ಹೋಗಿ ‘upload XML’ ಬಟನ್ ಒತ್ತಿ. ಮೊದಲು ಲಾಗಿನ್‌ ಆಗಿ ಡೆಸ್ಕ್‌ಟಾಪ್‌ನಲ್ಲಿ ಸೇವ್‌ ಮಾಡಿದ XML ಫೈಲನ್ನು ಅಪ್‌ಲೋಡ್‌ ಮಾಡಿ, ನಂತರ ಸಬ್‌ಮಿಟ್‌ ಒತ್ತಿ.

ಐಟಿಆರ್‌-V ಪರಿಶೀಲಿಸಿ.
ನಿಮ್ಮ ಐಟಿಆರ್ ಫಾರ್ಮ್‌ ಸಲ್ಲಿಸಿದ ಬಳಿಕ ರಸೀದಿ ಸಂಖ್ಯೆ ರಚನೆಯಾಗುತ್ತದೆ. ಡಿಜಿಟಲ್ ಸಹಿ ಬಳಸಿ ರಿಟರ್ನ್ಸ್‌ ಸಲ್ಲಿಸಿದ್ದರೆ, ಈ ಸಂಖ್ಯೆಯನ್ನು ನೀವು ಜೋಪಾನವಾಗಿ ಕಾಯ್ದಿರಿಸಿಕೊಳ್ಳಬೇಕಾಗುತ್ತದೆ. ಡಿಜಿಟಲ್ ಸಹಿ ಇಲ್ಲದೆ ರಿಟರ್ನ್ಸ್‌ ಸಲ್ಲಿಸಿದ್ದರೆ ಐಟಿಆರ್-V ರಚನೆಯಾಗುತ್ತದೆ ಮತ್ತು ನಿಮ್ಮ ರಿಜಿಸ್ಟರ್ಡ್‌ ಇ-ಮೇಲ್ ವಿಳಾಸಕ್ಕೆ ರವಾನೆಯಾಗುತ್ತದೆ.

ನಿಮ್ಮ ಐಟಿಆರ್‌-V ಅನ್ನು ವೆರಿಫೈ ಮಾಡದಿದ್ದರೆ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಅಪೂರ್ಣವಾಗುತ್ತದೆ. ನೀವು ವಿದ್ಯುನ್ಮಾನ ಮಾದರಿಯಲ್ಲಿ ಅದನ್ನು ಪರಿಶೀಲಿಸಬಹುದು ಅಥವಾ ಐಟಿಆರ್‌- V ಗೆ ಸಹಿ ಹಾಕಿ ರಿಟರ್ನ್ಸ್‌ ಸಲ್ಲಿಸಿದ 120 ದಿನಗಳ ಒಳಗೆ ಬೆಂಗಳೂರಿನ ಪ್ರೋಸೆಸಿಂಗ್‌ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ.