ಡಿ.ಕೆ.ಶಿವಕುಮಾರ್ ಬದಲು ಎಂ.ಬಿ.ಪಾಟೀಲ್ ಹೆಸರನ್ನ ರೇಸಿಗೆ ಬಿಟ್ಟ ಸಿದ್ದರಾಮಯ್ಯ; ಡಿ.ಕೆ.ಶಿ ಅವರು ಕೆಪಿಸಿಸಿ ಅಧ್ಯಕ್ಷರಾದರೆ ಸಿದ್ದರಾಮಯ್ಯನಿಗೆ ಸಮಸ್ಯೆ ಏನು.?

0
123

ರಾಜ್ಯ ಕಾಂಗ್ರೆಸ್-ನಲ್ಲಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದ ಬಹು ಮುಖ್ಯವಾಗಿದೆ. ಅದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ. ಡಿ.ಕೆ.ಶಿ ಹೆಸರು ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರ ಸ್ಪಷ್ಟ. ಅದಕ್ಕಾಗಿ ದೆಹಲಿಗೆ ಬರುವುದು ಬೇಡ ಎಂದು ಎಐಸಿಸಿ ಹಿರಿಯ ನಾಯಕರೊಬ್ಬರು ಡಿಕೆಶಿಗೆ ಸ್ಪಷ್ಟ ಪಡಿಸಿದ್ದಾರೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಡಿಕೆಶಿ ಹೈಕಮಾಂಡ್ ಭೇಟಿಗೆ ತೆರಳದಿರಲು ತೀರ್ಮಾನಿಸಿ ಪ್ರವಾಸ ರದ್ದು ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಮೂಳುವಾಗಿದ್ದಾರೆ ಎನ್ನಲಾಗುತ್ತಿದೆ.

ಹೌದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಬದಲು ಎಂ.ಬಿ.ಪಾಟೀಲ್ ರ ಹೆಸರನ್ನ ರೇಸಿಗೆ ಬಿಟ್ಟು ಸಿದ್ದರಾಮಯ್ಯ ದಾಳ ಉರುಳಿಸಿದ್ದಾರೆ. ಡಿಕೆಶಿಯನ್ನ ಕಟ್ಟಿ ಹಾಕಬೇಕಾದರೆ ಎಂ.ಬಿ.ಪಾಟೀಲ್ ಸೂಕ್ತ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ. ಆದ್ದರಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ ಎಂಬಿಪಿ ಹೆಸರನ್ನ ರೇಸಿಗೆ ತಂದು ದಾಳ ಉರುಳಿಸಿ, ಅದಕ್ಕೆ ತಮ್ಮದೇ ಆದ ಲಾಜಿಕ್ ಒಂದನ್ನ ಎಐಸಿಸಿ ನಾಯಕರ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಂತೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಡಿಕೆ ಹಿಡಿತದಲ್ಲಿರುತ್ತದೆ. ಅದೇ ತಮ್ಮ ಬೆಂಬಲಿಗ ಎಂ.ಬಿ.ಪಾಟೀಲ್ ಅಧ್ಯಕ್ಷರಾದರೆ ಪಕ್ಷದ ಹಿಡಿತ ಪರೋಕ್ಷವಾಗಿ ಸಿದ್ದರಾಮಯ್ಯ ಕೈಯಲ್ಲಿರುತ್ತದೆ.

ಇನ್ನು ಒಕ್ಕಲಿಗ ಸಮುದಾಯದ ಡಿಕೆಶಿಗೆ ಪಟ್ಟ ತಪ್ಪಿಸಿದರೆ ಅಷ್ಟೆ ಪ್ರಭಾವಿ ಸಮುದಾಯವಾದ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿ ಎನ್ನುವ ಮೂಲಕ ಎಂಬಿ ಪಾಟೀಲ್ ಹೆಸರನ್ನ ಮುನ್ನಲೆಗೆ ತರಬಹುದು. ಒಕ್ಕಲಿಗ ಸಮುದಾಯ ಡಿಕೆಶಿಗಿಂತ ದೇವೇಗೌಡರ ಜೊತೆಗೆ ಹೆಚ್ಚು ನಿಲ್ಲುತ್ತದೆ. ಆದ್ದರಿಂದ ಡಿಕೆಶಿಗೆ ಪಟ್ಟ ಕಟ್ಟಿದರೆ ಅಷ್ಟು ದೊಡ್ಡ ಮಟ್ಟದ ಪ್ರಯೋಜನ ಆಗಲ್ಲ ಅನ್ನುವುದು ಸಿದ್ದರಾಮಯ್ಯ ಲಾಜಿಕ್ ಎಂದು ತಿಳಿದು ಬಂದಿದೆ. ಇತ್ತ ಸಿಎಂ ಯಡಿಯೂರಪ್ಪ ಅವಧಿ ಮುಗಿದ ನಂತರ ಲಿಂಗಾಯತರು ಬಿಜೆಪಿಯಿಂದ ದೂರಾಗಬಹುದು. ಆಗ ಲಿಂಗಾಯತ ಸಮುದಾಯವನ್ನ ಕಾಂಗ್ರೆಸ್ ನತ್ತ ಸೆಳೆಯಲು ಎಂ.ಬಿ.ಪಾಟೀಲ್ ಸೂಕ್ತ ಅನ್ನೋದು ಸಿದ್ದರಾಮಯ್ಯ ವಾದವಾಗಿದ್ದು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯ ಕೈ ನಾಯಕರ ಜೊತೆ ಇಂದೇ ಮಾತುಕತೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲೇ 60 ಜನರೊಂದಿಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ದೆಹಲಿ ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. . ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ನಾಯಕನ ಸ್ಥಾನದ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸಿದ್ದರಾಮಯ್ಯ ದೆಹಲಿಗೆ ತಲುಪಿದ್ದು ಅವರಿಗಿಂತಲೂ ಮೊದಲೇ ಸಿದ್ದರಾಮಯ್ಯ ಬೆಂಬಲಿತ 60 ಮುಖಂಡರುಗಳು ದೆಹಲಿ ತಲುಪಿದ್ದಾರೆ. ಹೀಗೆ 60 ಬೆಂಬಲಿಗರ ಲಾಬಿ ಮೂಲಕ ವಿಪಕ್ಷ ಹಾಗೂ ಸಿಎಲ್ ಪಿ ಎರಡು ನಾಯಕನ ಸ್ಥಾನವನ್ನ ತಾವೇ ಪಡೆಯುವುದು ಸಿದ್ದರಾಮಯ್ಯ ಗುರಿ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತಮ್ಮ ಆಪ್ತರಿಗೆ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ.