ಚೆಫ್‌ಗಳಿಗೆ ಭಾರತದ ಆಹಾರ ತಯಾರಿಸುವುದು ದೊಡ್ಡ ಸವಾಲು: ಇರ್ಫಾನ್

0
1012

ವಿದೇಶಗಳಿಗೆ ಹೋಲಿಸಿದರೆ ಭಾರತೀಯ ಖಾದ್ಯ ತಯಾರಿಸುವುದು ‘ಚೆಫ್’ಗಳಿಗೆ ದೊಡ್ಡ ಸವಾಲು. ಒಂದು ಸಣ್ಣ ಬದಲಾವಣೆ ಮಾಡಿದರೂ ಹೊಸ ರುಚಿ. ಸಂಪ್ರದಾಯಿಕ ಆಹಾರ ಬಯಸುವವರು ಸ್ವಲ್ಪ ವ್ಯತ್ಸಾಸ ಆದರೂ ಅಸಮಾಧಾನಗೊಳ್ಳುತ್ತಾರೆ.

ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಬ್ರಿಟಾನಿಯಾ ನ್ಯೂಟ್ರಿಚಾಯ್ಸ್ ಎಸೆಂಶಲ್ಸ್ ಡಯಾಬಿಟಿಕ್ ಮಾಸ್ಟರ್‌ಕ್ಲಾಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿರುವ ಚೆಫ್ ಇರ್ಫಾನ್ ಪಬನಿ ಅವರ ೨೫ ವರ್ಷಗಳ ಅನುಭವದ ಮಾತು.

ಪಾಲಿಟೆಕ್ನಿಕ್‌ನಲ್ಲಿ ಡಿಗ್ರಿ ಪಡೆದಿದ್ದರೂ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಚೆಫ್ ತರಬೇತಿ ಪಡೆದೆ. ನಂತರ ಅಮೆರಿಕ, ಫಿಲಿಪ್ಪೆನ್ಸ್, ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ದೇಶಗಳನ್ನು ಸುತ್ತಿ ಬಂದ ನಂತರ ಮುಂಬೈನಲ್ಲಿ ತಮ್ಮದೇ ಆದ ‘ಸ್ಯಾಸಿ ಸ್ಪೂನ್’ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

ಇರ್ಫಾನ್ ಅವರೊಂದಿಗೆ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ಭಾರತ ಮತ್ತು ವಿದೇಶೀ ಖಾದ್ಯಗಳ ನಡುವಿನ ವ್ಯಾತ್ಯಾಸ ಏನು ?

ಭಾರತದ ಆಹಾರ ತಯಾರಿಸುವುದು ದೊಡ್ಡ ಸವಾಲು. ಇಲ್ಲಿ ಒಂದೊಂದು ಭಾಗಕ್ಕೂ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ. ಬಹುಶಃ ಜಗತ್ತಿನಲ್ಲೇ ವೈವಿಧ್ಯ ಮಯ ತಿನಿಸು ಇರುವ ಏಕೈಕ ದೇಶ ಅನ್ನಬಹುದು.

ಖಾದ್ಯ ತಯಾರಿಸುವ ಸವಾಲು ಹೇಗಿದೆ ?

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದೊಡ್ಡ ಸವಾಲು ಇದೆ. ಒಂದು ಸಣ್ಣ ಪದಾರ್ಥ ಬದಲಾಯಿ ಸಿದರೂ ರುಚಿಯೇ ಬದಲಾಗಿಬಿಡುತ್ತದೆ. ಅದರಲ್ಲೂ ಹೆಚ್ಚಿನ ಜನ ‘ವೆಜ್’ಗೆ ಆದ್ಯತೆ ನೀಡುತ್ತಾರೆ. ತರಕಾರಿಯ ಖಾದ್ಯ ತಯಾರಿಸುವುದೇ ಸವಾಲು. ಆದರೆ ವಿದೇಶಗಳಲ್ಲಿ ಅದರಲ್ಲೂ ಮಾಂಸದ ಅಡುಗೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ.

೨೫ ವರ್ಷಗಳ ಚೆಫ್ ಅನುಭವ ಹೇಗಿದೆ ?

ಚೆಫ್ ವೃತ್ತಿ ದೊಡ್ಡ ಸವಾಲಿನ ವೃತ್ತಿ. ಪ್ರತಿದಿನವೂ ಹೊಸ ಹೊಸ ಸವಾಲು. ವೃತ್ತಿಜೀವನ ಆರಂಭವಾದಾಗಿನಿಂದ ಇವತ್ತಿನವರೆಗೆ ಹೊಸ ಗ್ರಾಹಕ, ಹೊಸ ಖಾದ್ಯ ಹೀಗೆ ನಡೆಯುತ್ತಲೇ ಇರುತ್ತದೆ. ಇದರ ಜೊತೆ ನಮ್ಮದೇ ಪ್ರಯೋಗಗಳು ಇರುತ್ತವೆ.

ಬೆಂಗಳೂರು ಹೇಗಿದೆ ?

ಬೆಂಗಳೂರಿನ ಟ್ರಾಫಿಕ್ ಟೆರಿಫಿಕ್. ಅದರಿಂದ ಹೊರಬರುವುದೇ ದೊಡ್ಡ ಸಮಸ್ಯೆ. ಟ್ರಾಫಿಕ್‌ನಿಂದ ತಪ್ಪಿಸಿಕೊಂಡು ಬಂದ ಹಲವು ಗಂಟೆಗಳ ಕಾಲ ಅದರ ಗುಂಗಿನಿಂದ ಹೊರಬರಲು ಅಸಾಧ್ಯ. ಉಳಿದಂತೆ ಇಲ್ಲಿನ ಜನ, ವಾತಾವರಣ ಎಲ್ಲವೂ ಅದ್ಭುತ.

ಡಯಾಬಿಟಿಸ್ ಅಡುಗೆಯಲ್ಲಿ ಏನಿದೆ ವಿಶೇಷ ?

ಸಾಮಾನ್ಯ ಅಡುಗೆಗೂ ಡಯಾಬಿಟಿಸ್ ಅಡುಗೆಯಲ್ಲೂ ಹೆಚ್ಚಿನ ವ್ಯಾತ್ಯಾಸ ಇರುವುದಿಲ್ಲ. ಕೇವಲ ನಾವು ಬಳಸುವ ಅಕ್ಕಿ ಮತ್ತಿತ್ತರ ಅಂಶಗಳಲ್ಲಿರುತ್ತವೆ. ಉದಾಹರಣೆಗೆ ಅಕ್ಕಿಯನ್ನು ಪಾಲಿಶ್ ಮಾಡದೇ ಇದ್ದರೆ ಅದರಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಆದರೆ ಪ್ರೊಟಿನ್ ಕೂಡ ಹೆಚ್ಚಿರುತ್ತದೆ. ಇವುಗಳ ಆಯ್ಕೆಯತ್ತ ಹೆಚ್ಚು ಗಮನ ಹರಿಸಬೇಕು. ಮಧುಮೇಹಿಗಳು ಈ ನಿಟ್ಟಿನಲ್ಲಿ ಆಹಾರ ಸೇವಿಸುವಾಗ ಅದರತ್ತ ಹೆಚ್ಚು ಎಚ್ಚರಿಕೆ ವಹಿಸಬೇಕು.