ಐಕ್ಯೂ ವೃದ್ಧಿಸಿಕೊಳ್ಳುವ ಮೊದಲು ಐಕ್ಯೂ ಬಗ್ಗೆ ತಿಳಿದುಕೊಳ್ಳಿ!!

0
1140

Kannada News | kannada Useful Tips

`ಐಕ್ಯೂ’ (ಇಂಟೆಲಿಜೆನ್ಸ್ ಕೋಷಂಟ್)

ಅತಿ ಹೆಚ್ಚು `ಐಕ್ಯೂ’ (ಇಂಟೆಲಿಜೆನ್ಸ್ ಕೋಷಂಟ್ – ಬುದ್ಧಿ ಸೂಚ್ಯಂಕ, ಅಥವಾ ಬುದ್ಧಿಲಬ್ಧ) ಬೇಕು ಎಂಬುದು ಎಲ್ಲರ ಆಸೆ. ಈಗ ಸಂಶೋಧನೆಗಳು `ಐಕ್ಯೂ ಎಂಬುದು ಪರಿಪೂರ್ಣ ಬುದ್ಧಿ ಸೂಚ್ಯಂಕವಲ್ಲ’ ಎಂಬುದನ್ನು ಸಾಬೀತುಪಡಿಸಿವೆಯಾದರೂ `ಅತ್ಯಂತ ತೀಕ್ಷ್ಣಮತಿಗಳಿಗೆ ಮಾತ್ರ ಸದಸ್ಯತ್ವ ನೀಡುವ’ ಅನೇಕ `ಹೈ ಐಕ್ಯೂ ಸೊಸೈಟಿ’ಗಳಿಗೆ ಕೊರತೆಯಿಲ್ಲ. ಈ ಪೈಕಿ `ಮೆನ್ಸಾ ಇಂಟರ್‍ನ್ಯಾಷನಲ್’ ಪ್ರಮುಖವಾದುದು.

ಮೆನ್ಸಾ ನಡೆಸುವ ಐಕ್ಯೂ ಪರೀಕ್ಷೆಯಲ್ಲಿ ಭಾಗವಹಿಸಿ `ಜೀನಿಯಸ್’ ಎನಿಸಿಕೊಳ್ಳುವ ಕ್ರೇಜ್ ಈಗಲೂ ಜನರಲ್ಲಿದೆ. ತಮ್ಮ ಮಕ್ಕಳ ಐಕ್ಯೂ ಪರೀಕ್ಷೆ ಮಾಡಿಸಿ, `ಚೈಲ್ಡ್ ಪ್ರಾಡಿಜಿ’ ಎಂದು ಜಾಗತಿಕ ಮಾಧ್ಯಮಗಳಲ್ಲಿ ರಾರಾಜಿಸಬೇಕು ಎಂಬುದು ಅನೇಕರ ಕನಸು. ಪ್ರತಿವರ್ಷ ಮೆನ್ಸಾ ಪರೀಕ್ಷೆಯಲ್ಲಿ ಮಿಂಚಿದ ಮಕ್ಕಳ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆ. `ಆಲ್ಬರ್ಟ್ ಐನ್‍ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ ಅವರಿಗಿಂತಲೂ ಹೆಚ್ಚು ಐಕ್ಯೂ ದಾಖಲಿಸಿದ ಬಾಲಕಿ!’ ಎಂಬ ಹೆಡ್‍ಲೈನ್ ಯಾರಿಗೆ ಬೇಡ? ಹೀಗಾಗಿ ಮೆನ್ಸಾ ಕ್ರೇಜ್ ಸುಪ್ತವಾಗಿ ಬೆಳೆಯುತ್ತಿದೆ.

ಎಲ್ಲ ವಯಸ್ಸಿನಲ್ಲೂ ಐಕ್ಯೂ ಒಂದೇ ಆಗಿರುತ್ತದೆಯೋ ಅಥವಾ ವಯಸ್ಸಾದಂತೆ ಹೆಚ್ಚು-ಕಡಿಮೆ ಆಗುತ್ತದೆಯೋ ಎಂಬ ಕುರಿತು ಸಂಶೋಧನೆಗಳು ನಡೆಯುತ್ತಿವೆ. `ಪದೇ ಪದೇ ಇನ್‍ಫೆಕ್ಷನ್ (ಸೋಂಕು) ತಗುಲಿ ಆಸ್ಪತ್ರೆ ಸೇರುವವರಿಗೆ ಸರಾಸರಿ 9.44 ಅಂಕಗಳಷ್ಟು ಐಕ್ಯೂ ಕಡಿಮೆಯಾಗುತ್ತದೆ’ ಎಂದು ಈಚೆಗೆ (ಮೇ 2015) ಕೋಪನ್‍ಹೇಗನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಈಚಿನ ವರ್ಷಗಳಲ್ಲಂತೂ ನ್ಯೂರೋ-ಸೈಂಟಿಸ್ಟ್‍ಗಳು `ನ್ಯೂರೋಪ್ಲಾಸ್ಟಿಸಿಟಿ’ ಕುರಿತು ತುಂಬ ಆಸಕ್ತರಾಗಿದ್ದಾರೆ. `ಮೆದುಳಿನ ಸಂರಚನೆ, ಸಾಮಥ್ರ್ಯ ಒಂದೇ ರೀತಿ ಇರಬೇಕೆಂದೇನೂ ಇಲ್ಲ; ಕಾಲ ಕಳೆದಂತೆ ಬುದ್ಧಿ ಹೆಚ್ಚಾಗಲೂಬಹುದು, ಕಡಿಮೆಯಾಗಲೂಬಹುದು’ ಎನ್ನಲಾಗುತ್ತಿದೆ. ಮೆದುಳಿನ ಈ ಬಗೆಯ ಸಂರಚನಾ-ಬದಲಾವಣೆಯ ಶಕ್ತಿಯನ್ನು `ನ್ಯೂರೋಪ್ಲಾಸ್ಟಿಸಿಟಿ’ ಎನ್ನುತ್ತಾರೆ.

ಐಕ್ಯೂವನ್ನು ನಿಖರವಾಗಿ ಅಳೆಯುವುದು ಸಾಧ್ಯವಿಲ್ಲ. ಆದರೂ ವೈದ್ಯಕೀಯ ಉದ್ದೇಶಗಳಿಗಾಗಿ (ಬುದ್ಧಿಮಾಂದ್ಯತೆಯ ತೀವ್ರತೆಯನ್ನು ಗುರುತಿಸಲು) ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಕೆಲವು ಪರೀಕ್ಷಾ ವಿಧಾನಗಳಿವೆ. ಅವುಗಳನ್ನು ಅನುಸರಿಸಿ ಐಕ್ಯೂ ಲೆಕ್ಕಹಾಕಲಾಗುತ್ತದೆ.

ಈ ವಿಧಾನಗಳ ಪ್ರಕಾರ ನೋಡಿದರೆ, ಸಾಮಾನ್ಯವಾಗಿ ಎಲ್ಲರ ಐಕ್ಯೂ 100ರ ಆಸುಪಾಸಿನಲ್ಲಿ ಇರುತ್ತದೆ. 100 ಅಂಕಗಳ ಆಸುಪಾಸಿನ ಐಕ್ಯೂ ಇರುವವರು ವಿಶ್ವದಲ್ಲಿ ಶೇ. 90 ಕ್ಕಿಂತಲೂ ಹೆಚ್ಚು ಮಂದಿ. 90 ಕ್ಕಿಂತಲೂ ಕಡಿಮೆ ಐಕ್ಯೂ ಇರುವವರು ದಡ್ಡರು. 60 ಕ್ಕಿಂತಲೂ ಕಡಿಮೆ ಐಕ್ಯೂ ಇದ್ದರೆ ಬುದ್ಧಿಮಾಂದ್ಯರು. 50 ಕ್ಕಿಂತಲೂ ಕಡಿಮೆ ಐಕ್ಯೂ ಇರುವವರು ಉಸಿರಾಡುವುದನ್ನು ಬಿಟ್ಟರೆ ಬೇರೇನೂ ಸ್ವತಃ ಮಾಡಲಾರದವರು. 100 ಐಕ್ಯೂ ಇರುವ ಮಕ್ಕಳು ತಕ್ಕಮಟ್ಟಿಗೆ ಬುದ್ಧಿವಂತರು. ತರಗತಿಗಳಲ್ಲಿ ಹೇಳಿದ್ದನ್ನು ತಕ್ಷಣ ಗ್ರಹಿಸುವ ಶಕ್ತಿ ಇರುವವರು. ಕಷ್ಟಪಟ್ಟರೆ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ತೆಗೆಯಬಲ್ಲವರು. 120ರ ಆಸುಪಾಸಿನ ಐಕ್ಯೂ ಇರುವವರು ಮೇಧಾವಿಗಳು. 150 ದಾಟಿದವರು `ಜೀನಿಯಸ್’ಗಳು (ಮಹಾಮೇಧಾವಿಗಳು). ಇವರ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ. 1-2ರಷ್ಟು ಅಷ್ಟೇ ಎಂಬುದು ಒಂದು ಅಂದಾಜು.

Also Read: ಮಹಿಳೆಯರೇ ಅಂಗಡಿಗಳಲ್ಲಿ ರಿಚಾರ್ಜ್ ಮಾಡಿಸುತ್ತಿದ್ದರೆ ಜೋಕೆ!!!