ನಿರುದ್ಯೋಗದಿಂದ ಭಿಕ್ಷೆ ಬೇಡುತ್ತಿದ್ದಾರೆ ಸ್ನಾತಕೋತರ, ಪದವಿ ಓದಿದ ವಿದ್ಯಾವಂತರು…

0
201

ಅದೆಷ್ಟೋ ಜನ ವಿದ್ಯಾವಂತರು ಕೆಲಸ ಸಿಗದೆ ಪರದಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇನ್ನು ಈ ಕೊರೋನಾ ವೈರಸ್ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ವಿದ್ಯಾವಂತರಿಗೆ, ಕೆಲಸ ಮಾಡುವ ಆಸೆ ಇರುವವರಿಗೆ ಉದ್ಯೋಗವಿಲ್ಲದೇ, ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದರೆ ಗತಿಯೇನು?

ಹೌದು, ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಸ್ನಾತಕೋತ್ತರ ಪದವೀಧರರು ಮತ್ತು ಮೂವರು ಪದವೀಧರರು ಜೈಪುರದ ಬೀದಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೊಂದರ ವೇಳೆ ಪತ್ತೆ ಆದ 1,162 ಭಿಕ್ಷುಕರ ಪೈಕಿ 193 ಮಂದಿ ಓದು-ಬರಹವನ್ನು ಕಲಿತವರು. ಅದರಲ್ಲೂ ಐದು ಮಂದಿ ಪದವಿಯನ್ನು ಪಡೆದವರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಜೈಪುರದಲ್ಲಿ ಪೊಲೀಸರು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಜೈಪುರದಲ್ಲಿರುವ 1,162 ಮಂದಿ ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತರ ಮತ್ತು ಮೂವರು ಪದವೀಧರರು ಇರುವುದು ಪತ್ತೆಯಾಗಿದೆ. ನಗರದಲ್ಲಿ ಯಾವುದೇ ಕೆಲಸ ಸಿಗದೇ ಇದ್ದ ಕಾರಣ ಅನಿವಾರ್ಯವಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ ಎಂದು ಈ ಯುವಕರು ಅಳಲು ತೋಡಿಕೊಂಡಿದ್ದಾರೆ.

1,162 ಭಿಕ್ಷುಕರಲ್ಲಿ 825 ಭಿಕ್ಷುಕರು ಅನಕ್ಷರಸ್ಥರು, 39 ಜನ ಅಕ್ಷರಸ್ಥರು ಹಾಗೂ 193 ಮಂದಿ ಶಾಲೆಗೆ ಹೋಗಿದ್ದವರಾಗಿದ್ದಾರೆ. ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರಿದ್ದಾರೆ. ಇವರಿಗೆಲ್ಲಾ ಕೆಲಸ ಕೊಟ್ಟರೆ ಈಗಲೂ ಮಾಡಲು ಸಿದ್ಧ ಎಂದಿದ್ದಾರೆ. ಕೆಲಸ ಕೊಟ್ಟರೆ ಈಗಲೂ ಮಾಡಲು ಸಿದ್ಧರಿದ್ದಾರಂತೆ.

ಜೈಪುರ ಸಿಟಿಯನ್ನು ಸಂಪೂರ್ಣವಾಗಿ ಭಿಕ್ಷುಕರಿಂದ ಮುಕ್ತಗೊಳಿಸಲು, ಅವರಿಗೆ ಅಗತ್ಯವಿರುವ ಸ್ಕಿಲ್ಗಳನ್ನು ನೀಡಿ ಅವರಿಗೆ ಉದ್ಯೋಗ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ವೆ ಮಾಡಲಾಯಿತು. ‘ನಾನು 25 ವರ್ಷದ ಹಿಂದೆ ಡಿಗ್ರಿ ತೆಗೆದುಕೊಂಡಿದ್ದೇನೆ. ಕೆಲಸಕ್ಕಾಗಿ ಜೈಪುರಕ್ಕೆ ಬಂದೆ. ಎಷ್ಟೋ ದಿನಗಳಾದರೂ ಕೆಲಸ ಸಿಗಲಿಲ್ಲ. ಹೊಟ್ಟೆಗೆ ಅನ್ನವಿಲ್ಲ, ಮಲಗಲು ಜಾಗವಿಲ್ಲ ಎನ್ನುವ ಸ್ಥಿತಿ. ಕೊನೆಗೆ ದಾರಿಯಿಲ್ಲದೇ ಭಿಕ್ಷೆ ಬೇಡಲು ಶುರು ಮಾಡಿದೆ’ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ.

ಇನ್ನು ಅಕ್ಷರಸ್ಥ ಐದು ಜನ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ. ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

Also read: ಶೌಚಾಲಯದ ಒಳಗೆ ಏನೇನಿದೆ ಎನ್ನುವುದೆಲ್ಲಾ ಹೊರಗಿನಿಂದ ಲೇ ನೋಡಬಹುದು: ಇದು ಟ್ರಾನ್ಸ್’ಪರೆಂಟ್ ಪಬ್ಲಿಕ್ ಟಾಯ್ಲೆಟ್