ಇಂದಿನಿಂದ ಶುರುವಾಯಿತು ಚುನಾವಣಾ ಹಬ್ಬ; ಇವಿಎಂ ಒಡೆದು ಹಾಕಿ ಜೈಲು ಸೇರಿದ ಜನಸೇನಾ ಪಕ್ಷದ ಅಭ್ಯರ್ಥಿ..

0
262

ದೇಶದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಶುರುವಾಗಿದ್ದು ಆಂಧ್ರಪ್ರದೇಶದ 25 ಲೋಕಸಭೆ ಕ್ಷೇತ್ರಗಳಿಗೆ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಎರಡು ಚುನಾವಣೆಗೆ ಒಂದೇ ಸಾರಿ ವೋಟಿಂಗ್ ನಡೆಯುತ್ತಿರುವುದು ವಿಶೇಷವಾಗಿದೆ. ಇದೆ ವೇಳೆ ಆಂಧ್ರದಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂಧನ್ ಗುಪ್ತಾ ಮತಗಟ್ಟೆಯಲ್ಲಿ ಇಟ್ಟಿದ್ದ ಇವಿಎಂ ಮತಯಂತ್ರವನ್ನು ಒಡೆದು ಹಾಕಿ. ಜೈಲು ಸೇರಿದ್ದಾರೆ.

ಏನಿದು ಘಟನೆ?

ಹೌದು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 2019 ರ ಲೋಕಸಭೆ ಚುನಾವಣೆಗೆ ಅಧಿಕೃತ ಪ್ರಾರಂಭ ಸಿಕ್ಕಂತಾಗಿದೆ. ಈ ಮಧ್ಯೆ ಆಂಧ್ರದಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂಧನ್ ಗುಪ್ತಾ ಮತಗಟ್ಟೆಯಲ್ಲಿ ಇಟ್ಟಿದ್ದ ಇವಿಎಂ ಮತಯಂತ್ರವನ್ನು ಒಡೆದು ಹಾಕಿದ್ದಾರೆ. ಗುಂತಕಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗುಪ್ತಾ, ಮತದಾನಕ್ಕೆಂದು ಮತಗಟ್ಟೆಗೆ ಬಂದಾಗ ಮತಯಂತ್ರವನ್ನು ನೆಲಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ. ಅನಂತಪುರ ಜಿಲ್ಲೆಯ ಗುಂತಕಲ್‌ ವಿಧಾನಸಭೆ ಕ್ಷೇತ್ರದ ಗುತ್ತಿ ಮತಗಟ್ಟೆ ಕೇಂದ್ರದಲ್ಲಿ ಮಧುಸೂಧನ್‌ ಗುಪ್ತಾ ಈ ಕೃತ್ಯ ಮಾಡಿದ್ದಾರೆ ಎಂದು ತಿಳಿದಿದ್ದು.

ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಹೆಸರುಗಳು ಇವಿಎಂನಲ್ಲಿ ಸರಿಯಾಗಿ ಕಾಣಿಸುತ್ತಿಲ್ಲವೆಂದು ಆಕ್ರೋಶಗೊಂಡ ಜನಸೇನಾ ಪಕ್ಷದ ಗುಂತಕಲ್‌ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಮಧುಸೂಧನ್‌ ಗುಪ್ತಾ ಚುನಾವಣಾಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಗುಪ್ತಾ ಆರೋಪವನ್ನು ನಿರಾಕರಿಸಿದ ಅಧಿಕಾರಿಗಳು, ಮತ ಹಾಕಿ ತೆರಳುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಮಧುಸೂಧನ್ ಗುಪ್ತಾ, ಇವಿಎಂ ಮಶಿನ್ ನ್ನು ನೆಲಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ.

ಈ ಘಟನೆಗೆ ಮತ್ತೊಂದು ಕಾರಣ ವೆಂದರೆ ಸಾವಿರಾರು ಸಂಖ್ಯೆಯಲ್ಲಿ ಜನ ಮತದಾನ ಮಾಡಲು ಬಂದಿದ್ದಾರೆ. ಆದ್ರೆ ಒಬ್ಬ ಪೊಲೀಸ್ ಸಿಬ್ಬಂದಿಯೂ ಇಲ್ಲದೇ ಜನ ಪರದಾಡಿದ್ದಾರೆ. ಈ ವೇಳೆ ಮಧುಸೂದನ್ ಗುಪ್ತಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು. ಸದ್ಯ ಆಂಧ್ರ ಪ್ರದೇಶದ ಪೊಲೀಸರು ಗುಪ್ತಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಂಧ್ರದ ವಿಜಯನಗರ ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಅಶೋಕ್ ಗಜಪತಿರಾಜು, ವಿಶಾಖಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುರಂದರೇಶ್ವರಿ ಕಣದಲ್ಲಿದ್ದಾರೆ.

ಅಷ್ಟೇ ಅಲ್ಲದೆ ಮತದಾನದ ದಿನ ಬೆಳ್ಳಂಬೆಳಗ್ಗೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಛತ್ತೀಸ್‍ಗಡದ ನಾರಾಯಣಪುರದಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

18 ರಾಜ್ಯಗಳಲ್ಲಿ ಮೊದಲ ಹಂತದ ಮತದಾನ:

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ 18 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಒಟ್ಟು ಒಂದು ಲಕ್ಷದ 66 ಸಾವಿರ ಮತಗಟ್ಟೆಗಳಲ್ಲಿ 1961 ಅಭ್ಯರ್ಥಿಗಳ ಅದೃಷ್ಟವು ಇಂದು ನಿಗದಿಯಾಗಲಿದೆ. ಕ್ಷೇತ್ರವಾರು ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದ್ದು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ನಲ್ಲಿ ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆ, ಉತ್ತಾರಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಏಳರಿಂದ ಸಂಜೆ ಐದು ಗಂಟೆ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಮಣಿಪುರ, ನಾಗಲ್ಯಾಂಡ್, ಮೇಘಾಲಯ ದಲ್ಲಿ ಬೆಳಗ್ಗೆ ಏಳರಿಂದ ಸಂಜೆ ನಾಲ್ಕು ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇದೆ 18 ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.