ರೆಡ್ಡಿ ಮಾಸ್ಟರ್ ಪ್ಲಾನ್: ಕೈ ಬಿಟ್ಟು ಕಮಲ ಹಿಡಿದ ಎನ್.ವೈ.ಗೋಪಾಲಕೃಷ್ಣ..!

0
539

ಹೊಸ ನೀರು ಬಂದಾಗ ಹಳೆ ನೀರು ಕಾಣುವುದಿಲ್ಲ ಅನ್ನೋ ಮಾತೀಗ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೇಳಿ ಮಾಡಿಸಿದಂತಿದೆ. 2014ರಲ್ಲಿ ನಡೆದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮರು ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಕರೆತಂದು, ಗೆಲ್ಲಿಸಲಾಯ್ತು. ಈ ಸಲ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತವನ್ನು ಗೋಪಾಲಕೃಷ್ಣ ಹೊಂದಿದ್ದರು. ಆದರೆ ಕಾಂಗ್ರೆಸ್ನಿಂದ ಡಾ.ಯೋಗೇಶ್ಗೆ ಟಿಕೆಟ್ ನೀಡಲಾಗಿದೆ. ಇನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲೂ ಟಿಕೆಟ್ ನೀಡದೇ ಗೋಪಾಲಕೃಷ್ಣ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿತು.. ಇದನ್ನೇ ಗಾಳವಾಗಿ ಬಳಸಿಕೊಂಡ ಜನಾರ್ಧನ ರೆಡ್ಡಿ, ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಒಡೆಯುವಂತಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಕೂಡ್ಲಿಗಿ ಕ್ಷೇತ್ರಕ್ಕೂ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದ ಬಿಜೆಪಿ ಕಣ್ಣಿಗೆ ಎನ್.ವೈ.ಗೋಪಾಲಕೃಷ್ಣ ಕಂಡಿದ್ದಾರೆ. ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಬಿಜೆಪಿ ಮುಖಂಡರು, ಎನ್.ವೈ. ಸೋದರರ ಮೂಲಕ ಮೂರು ಸೂತ್ರ ಉರುಳಿಸಲು ಮುಂದಾಗಿದ್ದಾರೆ. ಟಿಕೆಟ್ ಕೈತಪ್ಪಿದ್ದೇ ತಡ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಬೆಂಗಳೂರಿಗೆ ಕರೆದೊಯ್ದಿರುವ ಸಂಸದ ಬಿ.ಶ್ರೀರಾಮುಲು ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ತರಾತುರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೆ ಸಿದ್ಧತೆ ನಡೆದಿದೆ.

ಎನ್.ವೈ.ಗೋಪಾಲಕೃಷ್ಣ ಅವರ ಬೆಂಬಲಿಗರೂ ಬಿಜೆಪಿ ಸೇರ್ಪಡೆಗೆ ಜೈ ಎಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಳ್ಳಾರಿ ಗ್ರಾಮೀಣದಲ್ಲಿ ಹಿಡಿತ ಹೊಂದಿರುವ ಎನ್.ವೈ.ಗೋಪಾಲಕೃಷ್ಣ ಅವರಿಂದ ಬಿಜೆಪಿ ಲಾಭದ ಲೆಕ್ಕಾಚಾರ ಹೊಂದಿದೆ. ಇತ್ತ ಕೂಡ್ಲಿಗಿಯಲ್ಲಿ ಅವರನ್ನೇ ಅಭ್ಯರ್ಥಿ ಮಾಡುತ್ತಿರುವುದರಿಂದ ಆ ಕ್ಷೇತ್ರದಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಈಗ ಕೂಡ್ಲಿಗಿಯ ನಾಗೇಂದ್ರ ಬಾಬು ಅವರು ಒಂದು ಕಾಲದಲ್ಲಿ ಸಂಸದ ಬಿ.ಶ್ರೀರಾಮುಲು ಅವರ ಪರಮಾಪ್ತರು. ಆದರೆ, ಅವರು ಇತ್ತೀಚೆಗೆ ಶ್ರೀ ರಾಮುಲು ಸೇರಿ ರೆಡ್ಡಿ ಬಳಗ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆದರೆ, ಎನ್.ವೈ.ಗೋಪಾಲಕೃಷ್ಣ ಮಾತ್ರ ಶ್ರೀರಾಮುಲು ಸೇರಿ ರೆಡ್ಡಿ ಬಳಗಕ್ಕೆ ಇದುವರೆಗೂ ಪರಮ ಎದುರಾಳಿಯಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಎನ್.ವೈ.ಗೋಪಾಲಕೃಷ್ಣ, ಲೋಕಸಭೆ ಚುನಾವಣೆಯಲ್ಲಿ ಅವರ ಸೋದರ ಎನ್.ವೈ.ಹನುಮಂತಪ್ಪ ಅವರೇ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಅವರ ಬಳಗದ ವಿರುದ್ಧ ಚುನಾವಣೆಯಲ್ಲಿ ತೊಡೆತಟ್ಟುತ್ತಿದ್ದರು. ಆದರೆ, ಈಗ ರಾಜಕೀಯ ಸ್ಥಿತ್ಯಂತರದ ಫಲವಾಗಿ ಎದುರಾಳಿಯಾಗಿದ್ದವರೇ ಶ್ರೀರಾಮುಲು ಅವರಿಗೆ ಆಪ್ತರಾಗಿದ್ದರೆ, ಆಪ್ತರಾಗಿದ್ದವರು ಎದುರಾಳಿಯಾಗಿದ್ದಾರೆ.