ಜಯಲಲಿತಾ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಚನ್ನೈ ಹೈಕೋರ್ಟ್ ಸೂಚನೆ

0
608

ಚನೈ; ಜಯಲಲಿತಾ ಅವರ ಅನಾರೋಗ್ಯ ಸಂಬಂಧ ಮಾಹಿತಿ ನೀಡುವಂತೆ ಕೋರಿ ಟ್ರಾಫಿಕ್ ರಾಮಸ್ವಾಮಿ ಎಂಬುವವರು ನಿನ್ನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯ, ನಾಳೆಯೊಳಗೆ ಜಯಲಲಿತಾ ಆನಾರೋಗ್ಯದ ಕುರಿತು ಮಾಹಿತಿ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.

ಟ್ರಾಫಿಕ್ ರಾಮಸ್ವಾಮಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ನಾಳೆ ಮಾಹಿತಿ ನೀಡುವಂತೆ ಸೂಚಿಸಿದೆ. ಜಯಲಲಿತಾ ಅವರು ಕಳೆದ 10 ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗದ ಹಿನ್ನೆಲೆಯಲ್ಲಿ ಟ್ರಾಫಿಕ್ ರಾಮಸ್ವಾಮಿಯವರು ಮಾಹಿತಿ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನಾಳೆಯೊಳಗೆ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ. ಜಯಾ ಅವರ ಅನಾರೋಗ್ಯದ ಬಗ್ಗೆ ನಾನಾ ಪುಕಾರಗಳು ತಮಿಳುನಾಡಿನಾದ್ಯಂತ ಹಬ್ಬಿದ್ದವು.

ಜಯಲಲಿತಾ ಅವರಿಗೆ ಹಾಗಾಗಿದೆ, ಹೀಗಾಗಿದೆ ಎಂಬ ವದಂತಿಗಳು ಕೇಳಿಬಂದಿದ್ದವು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟೀಕರಣ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಲಂಡನ್‍ನಿಂದ ವೈದ್ಯರು ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅಪೋಲೋ ಆಸ್ಪತ್ರೆ ಮುಂದೆ ಜಯಾ ಅಭಿಮಾನಿಗಳು ಆತಂಕದಿಂದ ಜಮಾಯಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಹಲವರನ್ನು ಬಂಧಿಸಿದ್ದರು.

ದೇಹದ ನಿರ್ಜಲೀಕರಣ ಹಾಗೂ ತೀವ್ರ ಬಳಲಿಕೆಯಿಂದಾಗಿ ತಮಿಳುನಾಡು ಸಿಎಂ ಜೆ ಜಯಲಲಿತಾ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಜಯಾ ಆಪ್ತರಿಗಷ್ಟೇ ಆಸ್ಪತ್ರೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಆಸ್ಪತ್ರೆ ಸುತ್ತ ಮೂರು ಸುತ್ತಿನ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.