ಅಪಮಾನಗಳನ್ನೇ ‘ಜಯ’ದ ಮಾಲೆ ಮಾಡಿಕೊಂಡ ‘ಲಲಿತಾ’

0
979

ಮಂಡ್ಯ ಸಮೀಪದ ಮೇಲುಕೋಟೆಯ ಅಪ್ಪಟ ಕನ್ನಡತಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿ ಮಾತ್ರ ಆಗಿ ಉಳಿಯದೇ ಅಭಿಮಾನಿಗಳ ಪಾಲಿಗೆ ‘ಅಮ್ಮ’ ಆಗಿದ್ದು ಸಣ್ಣ ಸಾಧನೆಯೇನಲ್ಲ.

ಮೇಲುಕೋಟೆಯ ಜಯಚಂದ್ರ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾದ ಜಯಲಲಿತಾ ಮೂಲಹೆಸರು ಕೋಮಲವಲ್ಲಿ. ಸೇಂಟ್ ಮಾರ್ಕ್ಸ್ ಶಾಲೆಯ ಪ್ರೌಢ ಶಾಲೆಯಲ್ಲಿ ಓದುವಾಗಲೇ ಅಮ್ಮನ ಒತ್ತಾಯದಿಂದ ನಟನಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಜಯಲಲಿತಾ ಕನ್ನಡದಲ್ಲಿ ೫ ಚಿತ್ರಗಳಲ್ಲಿ ನಟಿಸಿ ಸೈ ಎನಿಕೊಂಡಿದ್ದಾರೆ. ಕಲ್ಯಾಣ್ ಕುಮಾರ್ ಜೊತೆ ೨ ಚಿತ್ರಗಳಲ್ಲಿ ಕಾಣಿಸಿ ಕೊಂಡ ಜಯಲಲಿತಾ, ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಹಿಂತಿರುಗಿ ನೋಡಲೇ ಇಲ್ಲ.

ಎಂ.ಜಿ. ರಾಮಚಂದ್ರನ್ (ಎಂಜಿಆರ್) ಚಿತ್ರಗಳಲ್ಲಿ ಅತಿ ಹೆಚ್ಚು ಅಂದರೆ ಸರಿ ಸುಮಾರು ೨೫ ಚಿತ್ರಗಳಲ್ಲಿ ನಟಿಸಿದ ಜಯಲಲಿತಾ ರಾಜಕೀಯ ಪ್ರವೇಶಕ್ಕೂ ಅವರೇ ಕಾರಣರಾದರು.

ಜಯಲಲಿತಾ ಅವರೇ ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರ ಜೀವನವನ್ನು ಮೂರು ಭಾಗಗಳಾಗಿ ವಿಂಗಡಿ ಸಬಹುದು. ಮೊದಲ ಭಾಗದಲ್ಲಿ ತಾಯಿ ಪ್ರಾಬಲ್ಯ ಪಡೆದರೆ, ಎರಡನೇ ಭಾಗ ಎಂಜಿಆರ್ ಅವರದ್ದು. ಉಳಿದ ಜೀವನ ನನ್ನದೇ ಎಂದಿದ್ದರು.

ಸಿನಿಮಾ ಹಾಗೂ ರಾಜಕೀಯ ಗುರುವಾಗಿದ್ದ ಎಂಜಿಆರ್ ಮೃತಪಟ್ಟಾಗ ಅವರ ಅಂತಿಮ ದರ್ಶನಕ್ಕೆ ತೆರಲಿದಾಗ ಅವರ ಮೊದಲ ಪತ್ನಿ ಹಾಗೂ ಮಕ್ಕಳು ಅವಕಾಶವನ್ನೇ ನೀಡದೆ ಅಪಮಾನಿಸಿದ್ದರು. ಎಂಜಿಆರ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡ್ಟಿದ್ದ ಎರಡೂ ದಿನವೂ ಊಟ- ತಿಂಡಿ ಇಲ್ಲದೇ ಜಾಗವನ್ನೂ ಕದಲಿಸದೆ ಕಾದು ಕುಳಿತಿದ್ದ ಜಯಲಲಿತಾ, ಮೆರವಣಿಗೆ ವೇಳೆ ಕುಟುಂಬದ ಸದಸ್ಯರು ‘ವೇಶ್ಯೆ’ ಎಂದು ಬಹಿರಂಗವಾಗಿಯೇ ಕೂಗಿ ಅಪಮಾನಿಸಿದರೂ ಮೌನವಾಗಿ ಹೆಜ್ಜೆ ಹಾಕಿದ್ದರು.

೧೯೯೧ರಲ್ಲಿ ತಾಯಿ ನಿಧನ ನಂತರ ಸಕ್ರಿಯ ರಾಜಕೀಯಕ್ಕೆ ಧುಮುಕಿದ ಜಯಲಲಿತಾ, ಎಐಎಡಿಎಂಕೆ ಮುಖ್ಯಸ್ಥೆ ಆಗಿದ್ದೂ ಅಲ್ಲದೇ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದರು. ಅಧಿವೇಶನದ ಸಂದರ್ಭದಲ್ಲಿ ಒಂದು ಬಾರಿ ಡಿಎಂಕೆ ಸದಸ್ಯರು ಸೀರೆ ಎಳೆದು ಅಪಮಾನಿಸಿದ್ದರು. ಇಷ್ಟೆಲ್ಲಾ ಅಪಮಾನಗಳ ನಡುವೆಯೂ ತಮಿಳುನಾಡು ಜನತೆ ಜಯಲಲಿತಾ ಅವರ ಕೈಬಿಡಲಿಲ್ಲ. ೬ ಬಾರಿ ಮುಖ್ಯಮಂತ್ರಿ ಆಯ್ಕೆಯಾದರು. ಅದರಲ್ಲೂ ಕಳೆದ ಬಾರಿಯ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಆಯ್ಕೆಯಾಗಿ ಇತಿಹಾಸ ಬರೆದರು.

ಹಗರಣಗಳಿಂದ ಹೈರಾಣ
ದತ್ತುಪುತ್ರ ಸುಧಾಕರ್ ಅವರ ವಿವಾಹವನ್ನು ಅದ್ದೂರಿಯಾಗಿ ನೇರವರೇಸಿದ ನಂತರ ಜಯಲಲಿತಾ ಅಕ್ರಮ ಅಸ್ತಿ ಗಳಿಕೆ ಆರೋಪದಿಂದ ತತ್ತರಿಸಿದರು. ೭೫ ಚಪ್ಪಲಿ, ಲಾರಿಗಟ್ಟಲೆ ಸೀರೆ ಕೆಜಿಗಟ್ಟಲೆ ಚಿನ್ನಾಭರಣಗಳು ವಿರೋಧಿಗಳ ಕಣ್ಣುಕುಕ್ಕಿಸಿದವು. ಬೆಂಗಳೂರಿಗೆ ಕಾಲಿಡೊಲ್ಲ ಎಂದು ಜಯಲಲಿತಾ ಹಠಕ್ಕೆ ಬಿದ್ಸರೂ ಹೈಕೋರ್ಟ್ ಗೆ ಬಂದು ವಿಚಾರಣೆ ಎದುರಿಸು ವಂತಾಯಿತು. ಕೊನೆಗೆ ಕೆಲವು ತಿಂಗಳು ಜೈಲಿನಲ್ಲೂ ಕಳೆಯಬೇಕಾಯಿತು.

ಇಷ್ಟೆಲ್ಲಾ ಅಪಮಾನ, ಅವಮಾನಗಳ ನಡುವೆಯೂ ಜಯಲಲಿತಾ ಮಾಡಿದ ಅಭಿವೃದ್ಧಿ ಕಾಮಗಾರಿಗಳು, ಅಮ್ಮ ಕ್ಯಾಂಟೀನ್, ಅಮ್ಮ ನೀರು ಮುಂತಾದ ಯೊಜನೆ ಗಳು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದವು.
ಜೀವನದುದ್ದಕ್ಕೂ ಎದುರಾದ ಕಠಿಣ ಸವಾಲುಗಳಿಗೆ ಅಂಜದೆ ಅವನ್ನು ಮೆಟ್ಟಿ ನಿಂತ ಜಯಲಲಿತಾ ಸುಮಾರು ೪ ದಶಕಗಳ ರಾಜಕೀಯ ಜೀವನ ಕಂಡಿದ್ದು ಅಚ್ಚರಿಯೆ ಸರಿ.