ಜಯಾ ವಿರುದ್ಧ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಜಾ : ರಾಜ್ಯಕ್ಕೆ ನೂರು ಕೋಟಿ ನಷ್ಟ

0
474

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ರಾಜ್ಯದ ಅರ್ಜಿ ವಜಾಗೊಳಿಸಿದ ಸುಪ್ರೀಂ

 

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಿ.ಜಯಲಲಿತಾ ಅವರನ್ನೂ ಕೂಡಾ ಅಪರಾಧಿ ಎಂದು ಘೋಷಿಸಬೇಕೆಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.

ಪ್ರಕರಣದಲ್ಲಿ ಜಯಾ ಅವರನ್ನು ದೋಷಿ ಎಂದು ಘೋಷಿಸದೇ ಹೋದರೆ ನಾವು 100 ಕೋಟಿ ರೂಪಾಯಿ ದಂಡ ವಸೂಲಿ ಮಾಡೋದು ಅಸಾಧ್ಯ ಎಂದು ರಾಜ್ಯ ಸರ್ಕಾರ ವಾದ ಮಂಡಿಸಿತ್ತು.

ಕರ್ನಾಟಕ ಸರ್ಕಾರ ಮಾರ್ಚ್‌ 21ರಂದು ಸುಪ‍್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಜಯಲಲಿತಾ ನಿಧನದ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಟ್ಟ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

 

ಸುಪ್ರೀಂಕೋರ್ಟ್‌ ಈ ಹಿಂದೆ ಜಯಲಲಿತಾ ಅವರು ತಪ್ಪಿತಸ್ಥೆ ಎಂದು ತೀರ್ಪು ನೀಡಿತ್ತು. ಅಲ್ಲದೆ ಈ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ₹100 ಕೋಟಿ ದಂಡ ವಿಧಿಸಲಾಗಿತ್ತು. ಜಯಲಲಿತಾ ನಿಧನದ ಕಾರಣದಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಟ್ಟರೆ ಈ ದಂಡ ವಸೂಲಿ ಪ್ರಕ್ರಿಯೆಗೆ ತೊಡಕಾಗುತ್ತದೆ ಎಂದು ಕರ್ನಾಟಕ ಪರ ವಕೀಲರು ವಾದಿಸಿದ್ದರು.

 

ಪ್ರಕರಣದಲ್ಲಿ ಜಯಲಲಿತಾ ಅವರ ಹೆಸರನ್ನು ಉಳಿಸಿಕೊಂಡರೆ ಅವರ ಆಸ್ತಿಯಿಂದ ದಂಡದ ಹಣ ವಸೂಲಿ ಮಾಡಲು ಅವಕಾಶವಿದೆ. ಹೀಗಾಗಿ ಪ್ರಕರಣದಿಂದ ಅವರ ಹೆಸರನ್ನು ಕೈ ಬಿಡಬಾರದು ಎಂದು ರಾಜ್ಯದ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.