ಜಯಲಲಿತಾ ಫೋಟೋ ಇಟ್ಟು ರಾಜ್ಯಭಾರ ಮಾಡಿದ ಪನ್ವಿರ್ ಸೆಲ್ವಂ

0
753

ವ್ಯಕ್ತಿ ಆರಾಧನೆಯ ಪರಕಾಷ್ಠೆಯೋ ಅಥವಾ ನೈತಿಕ ಅಂಧಃಪತನವೋ ಗೊತ್ತಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅತಿರೇಕಗಳನ್ನೂ ನೋಡಬೇಕಾದ ಪರಿಸ್ಥಿತಿ ತಮಿಳುನಾಡಿನಲ್ಲಿದೆ ಎಂಬುದೇ ವಿಪರ್ಯಾಸ. ರಾಮನ ಪಾದುಕೆ ಇಟ್ಟು ಭರತ ರಾಜ್ಯಭಾರ ಮಾಡಿದ ಕಥೆ ಕೇಳಿದ್ದೇವೆ. ಆದರೆ ಆಧುನಿಕ ಕಾಲದಲ್ಲಿ ಇಂತಹ ಅಪರೂಪದ ಘಟನೆಗೆ ತಮಿಳುನಾಡು ವಿಧಾನಸಭೆ ಸಾಕ್ಷಿಯಾಯಿತು.

jayalalithaa

ಅನಾರೋಗ್ಯದ ಕಾರಣ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮುಖ್ಯಮಂತ್ರಿ (ಮಾಜಿ?) ಜೆ. ಜಯಲಲಿತಾ ಅನುಪಸ್ಥಿತಿಯಲ್ಲಿ ಬುಧವಾರ ನಡೆದ ತಮಿಳುನಾಡು ಸಚಿವ ಸಂಪುಟ ಸಭೆ ವೇಳೆ ಜಯಲಲಿತಾ ಸಾಮಾನ್ಯವಾಗಿ ಕುಳಿತುಕೊಳ್ಳುವ ಚೇರ್ ಖಾಲಿ ಇರಿಸಿ ಅದರ ಮುಂಭಾಗದಲ್ಲಿ ಅವರ ಭಾವಚಿತ್ರ ಮುಂದಿಟ್ಟು ಸಭೆ ನಡೆಸಲಾಗಿದೆ.

ಜಯಲಲಿತಾ ಅನುಪಸ್ಥಿತಿಯಲ್ಲಿ ರಾಜ್ಯದ ಆಡಳಿತದ ಉಸ್ತುವಾರಿ ಹೊತ್ತಿರುವ ಓ. ಪನ್ನೀರ್‌ಸೆಲ್ವಂ (೬೫) ಸಂಪುಟ ಸಭೆ ವೇಳೆ ಜಯಲಲಿತಾ ಅವರ ಪಕ್ಕದ ಆಸನದಲ್ಲಿ ಆಸೀನರಾಗಿದ್ದರು. ಜಯಲಲಿತಾ ಅವರ ಭಾವಚಿತ್ರ ಹಿಡಿದೇ ಕುಳಿತಿದ್ದ ಅವರು ನಂತರ ಟೇಬಲ್ ಮೇಲೆ ಇರಿಸಿ ಸಭೆ ಮುಂದುವರಿಸಿದರು.

ಪನ್ವಿರ್ ಸೆಲ್ವಂ ಅವರೊಂದಿಗೆ ೮ ಮಂದಿ ಸಚಿವರು ಸಭೆಯಲ್ಲಿ ಹಾಜರಿದ್ದರು. ಕಾವೇರಿ ನದಿ ನೀರು ಹಂಚಿಕೆ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು.