ಜಿಎಸ್‌ಟಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ (ಜಿಎಸ್‌ಟಿಎನ್‌) ಗಡುವು ವಿಸ್ತರಣೆ

0
423

ನವದೆಹಲಿ: ದೇಶದಾದ್ಯಂತ ಜಾರಿಗೆ ಬರಲಿರುವ ಹೊಸ ತೆರಿಗೆ ವ್ಯವಸ್ಥೆ ಜಿಎಸ್‌ಟಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗೆ (ಜಿಎಸ್‌ಟಿಎನ್‌) ವರ್ತಕರು ನೋಂದಣಿ ಗಡುವನ್ನು ಏಪ್ರಿಲ್‌ ತಿಂಗಳಾಂತ್ಯದವರೆಗೆ ವಿಸ್ತರಿಸಲಾಗಿದೆ.

ಇದುವರೆಗೆ ಶೇ 60ರಷ್ಟು ತೆರಿಗೆದಾರರು ಹೊಸ ವ್ಯವಸ್ಥೆಗೆ ಬದಲಾಗಲು ನೋಂದಣಿ ಮಾಡಿಕೊಂಡಿದ್ದಾರೆ. ಜಿಎಸ್‌ಟಿ ಜಾಲಕ್ಕೆ ಇದುವರೆಗೆ 80 ಲಕ್ಷದಷ್ಟು ಅಬಕಾರಿ, ಸೇವಾ ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪಾವತಿದಾರರು ನೋಂದಾಯಿಸಿಕೊಂಡಿದ್ದಾರೆ.

ವ್ಯಾಟ್‌ ಪಾವತಿಸುವವರಲ್ಲಿ ಶೇ 74ರಷ್ಟು ಜನರು ‘ಜಿಎಸ್‌ಟಿಎನ್‌’ ಅಂತರ್ಜಾಲ ತಾಣದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಡಿ, ₹10 ರಿಂದ ₹20 ಲಕ್ಷದಷ್ಟು ವಾರ್ಷಿಕ ವಹಿವಾಟು ನಡೆಸುವವರು ನೋಂದಾಯಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

ಅಬಕಾರಿ, ಸೇವಾ ಮತ್ತು ವ್ಯಾಟ್‌ ತೆರಿಗೆದಾರರ ಪೈಕಿ ಶೇ 54ರಷ್ಟು ತೆರಿಗೆ ಪಾವತಿದಾರರು ವಾರ್ಷಿಕ ₹20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುತ್ತಿದ್ದಾರೆ ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ ಆಧಿಯಾ ಹೇಳಿದ್ದಾರೆ. ತೆರಿಗೆ ಮರು ಪಾವತಿ ಬಯಸುವವರೂ ‘ಜಿಎಸ್‌ಟಿಎನ್‌’ನಲ್ಲಿ  ಹೆಸರು ನೋಂದಾಯಿಸಬೇಕಾಗುತ್ತದೆ.