ಆಕರ್ಷಕ ಜಾಹಿರಾತುಗಳಿಗೆ ಮರುಳಾಗಿ ಜಂಕ್-ಫುಡ್ ಕೊಡುವ ಪೋಷಕರೇ ಎಚ್ಚರ!! ನಿಮ್ಮ ಕೈಯ್ಯಾರೆ ಮಕ್ಕಳಿಗೆ ವಿಷ ಹಾಕುತ್ತಿದ್ದೀರಿ!!

0
908

ಪಾರ್ಕ್-ಗಳ ಬಳಿ, ಮ್ಯೂಸಿಯಂಗಳ ಬಳಿ, ಶಾಲೆಗಳ ಬಳಿ – ಹೀಗೆ ಮಕ್ಕಳು ಹೆಚ್ಚಾಗಿ ಓಡಾಡುವ ಎಲ್ಲ ಸ್ಥಳಗಳಲ್ಲಿ ಆಕರ್ಷಕ ಬಣ್ಣದ ಪ್ಯಾಕುಗಳಲ್ಲಿ ತಿನಿಸುಗಳನ್ನು ಮಾರುತ್ತಾರೆ. ಎಲ್ಲೆಲ್ಲೂ ಅವುಗಳ ಜಾಹೀರಾತು ಹಾಕಿ ಮಕ್ಕಳನ್ನು ಆಕರ್ಷಿಸಲು ಯತ್ನಿಸುತ್ತಾರೆ. ಆ ತಿನಿಸುಗಳಲ್ಲಿ ಏನಿದೆ ನಿಮಗೆ ಗೊತ್ತೆ? ಅಂತಹ ತಿಂಡಿಗಳಲ್ಲಿ ಯಾವಯಾವ ಪೌಷ್ಟಿಕಾಂಶಗಳಿರಬಹುದು ಎಂಬುದನ್ನು ಪತ್ತೆಹಚ್ಚಲು ಕೆಲವು ವರ್ಷಗಳ ಹಿಂದೆ ಬ್ರಿಟನ್ ದೇಶದಲ್ಲಿ ಒಂದು ದೊಡ್ಡ ಅಧ್ಯಯನವನ್ನು ನಡೆಸಲಾಯಿತು. ಮಕ್ಕಳು ಹೆಚ್ಚಾಗಿ ಓಡಾಡುವ 220 ಬೇರೆಬೇರೆ ಸ್ಥಳಗಳಿಂದ 327 ಬಗೆಯ ತಿನಿಸುಗಳನ್ನು ಸಂಗ್ರಹಿಸಲಾಯಿತು. ಅವುಗಳಲ್ಲಿ ಏನೇನಿದೆ ಎಂದು ಪರೀಕ್ಷಿಸಲಾಯಿತು. ಆ ಪರೀಕ್ಷೆಯ ಫಳಿತಾಂಶ ಏನು ಗೊತ್ತೆ?

327 ತಿನಿಸುಗಳ ಪೈಕಿ ಒಂದು ತಿಂಡಿಯಲ್ಲೂ ಮಕ್ಕಳ ಶರೀರಕ್ಕೆ ಆವಶ್ಯಕವೆಂದು ಶಿಫಾರಸು ಮಾಡುವ ಒಂದು ಪೌಷ್ಟಿಕಾಂಶವೂ ಇರಲಿಲ್ಲ! ಅವುಗಳಲ್ಲಿ ಇದ್ದುದು ಕೇವಲ ಕೊಬ್ಬು. ಸಕ್ಕರೆ, ಹಾಗೂ ಉಪ್ಪಿನ ಅಂಶಗಳು ಮಾತ್ರ. ಕೆಲವು ತಿಂಡಿಗಳಲ್ಲಂತೂ ಕೊಬ್ಬು, ಸಕ್ಕರೆ ಹಾಗೂ ಉಪ್ಪು ಮಿತಿಮೀರಿದ ಪ್ರಮಾಣದಲ್ಲಿ ಇದ್ದವು. ಭಾರತದಲ್ಲೂ ಅಂಗಡಿಗಳಲ್ಲಿ ಸಿಗುವ ಹಲವು ಬಗೆಯ ಪ್ಯಾಕೇಜ್ಡ್ ತಿನಿಸುಗಳಲ್ಲಿ ಇರುವುದು ಈ ಮೂರು ಅಂಶಗಳೇ. ಈ ಆಂಶಗಳು ಶರೀರದ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೃದಯ ಹಾಗೂ ರಕ್ತನಾಳಗಳ ಸಮಸ್ಯೆ ಸೃಷ್ಟಿಸುತ್ತವೆ. ಸಕ್ಕರೆ ಕಾಯಿಲೆಗೂ ಕಾರಣವಾಗುತ್ತವೆ. ಇವುಗಳ ಜೊತೆಗೆ ಬಣ್ಣ, ವಾಸನೆ ಹಾಗೂ ರುಚಿ ನೀಡಲು ಬಳಸುವ ಹಲವು ವಿಷಮಯವಾದ ರಾಸಾಯನಿಕಗಳು ಶರೀರದ ಒಳಗಿನ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಅದನ್ನು ಹದಗೆಡಿಸುತ್ತವೆ.

ಸಾಫ್ಟ್ ಡ್ರಿಂಕ್ಸ್, ಚಾಕೊಲೇಟ್ಸ್, ಚಿಪ್ಸ್, ಬಿಸ್ಕೆಟ್ಸ್, ಕುಕೀಸ್ ಇತ್ಯಾದಿ ತಿನಿಸುಗಳನ್ನು `ಜಂಕ್ ಫೂಡ್ಸ್’ ಎನ್ನುತ್ತಾರೆ. ಅವುಗಳನ್ನು ಹೆಚ್ಚಾಗಿ ಸೇವಿಸುವ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ದಪ್ಪವಾಗಿ ಕಾಣುತ್ತಾರೆ. ಆದರೆ ಅವರ ಆರೋಗ್ಯ ಉತ್ತಮವಾಗಿದೆ ಎಂದುಕೊಳ್ಳಬಾರದು. ಈಗ ಮಕ್ಕಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ (ಡಯಾಬಿಟೀಸ್), ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಜಂಕ್ ತಿನಿಸುಗಳು ಮಕ್ಕಳನ್ನು ರೋಗಿಗಳನ್ನಾಗಿ ಪರಿವರ್ತಿಸುತ್ತಿವೆ. ಹೀಗಾಗಿ ನೀವು ಯಾವುದೇ ಕಂಪೆನಿಗಳ ಜಾಹೀರಾತುಗಳಿಗೆ ಮರುಳಾಗಬಾರದು. ನಾವು ತಿನ್ನುತ್ತಿರುವ ತಿನಿಸುಗಳು ಸುರಕ್ಷಿತವೇ ಅಲ್ಲವೇ ಎಂಬ ಬಗ್ಗೆ ಬಲ್ಲವರಿಂದ ತಿಳಿದುಕೊಳ್ಳಬೇಕು. ಸರಿಯಾದ ಮಾಹಿತಿ ದೊರೆಯದಿದ್ದರೆ ಅಂತಹ ತಿನಿಸುಗಳನ್ನು ತಿನ್ನಲೇಬಾರದು. ತಿಳಿಯಿತೆ?

Also Read: ಹೆಣ್ಣು ಮಕ್ಕಳು ಹೆಚ್ಚಾಗಿ ತಂದೆಯನ್ನು ಇಷ್ಟಪಡುವುದಕ್ಕೆ ಇಲ್ಲಿವೆ ನೋಡಿ ಪ್ರಮುಖ ಕಾರಣಗಳು..!