ಕ್ಯಾನ್ಸರ್ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಮಹಿಳೆಯರಿಗೆ ಸ್ಫೂರ್ತಿ ಈ ಬಯೊಮೆಡಿಕಲ್ ಸಂಶೋಧಕಿ ಕಮಲ್ ರನಾದಿವೆ.

0
644

ಕಮಲ್ ಜೈಸಿಂಗ್ ರನಾದಿವೆ ಭಾರತೀಯ ಬಯೋಮೆಡಿಕಲ್ ಸಂಶೋಧಕಿ. ಕ್ಯಾನ್ಸರ್ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿ ಪ್ರಸಿದ್ಧರಾದವರು. ಕ್ಯಾನ್ಸರ್ ಮತ್ತು ಸೋಂಕುಗಳ(ವೈರಸ್) ನಡುವೆ ಇರುವ ಕೊಂಡಿಗಳ ಕುರಿತು ಸಂಶೋಧನೆ ಮಾಡಿದ್ದಾರೆ. ಭಾರತೀಯ ಮಹಿಳಾ ವಿಜ್ಞಾನ ಸಂಘದ ಸ್ಥಾಪಕ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ(ಐ.ಸಿ.ಆರ್.ಸಿ) ದೇಶದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಸ್ಥಾಪಿಸಿದವರು.

1902ರ ನವೆಂಬರ್ 8ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ತಂದೆ ದತ್ತಾತ್ತೇಯ ಸಮರ್ಥ್ ಮತ್ತು ತಾಯಿ ಶಾಂತಾಬಾಯಿ ದಿನಕರ್ ಸಮರ್ಥ್. ಫರ್ಗೂಸನ್ ಕಾಲೇಜಿನಲ್ಲಿ ತಂದೆ ಜೀವಶಾಸ್ತ್ರಜ್ಞರಾಗಿದ್ದರು. ಕಮಲ್ ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಹುಜರ್ಪಾಗಾದಲ್ಲಿ ಪೂರ್ಣಗೊಳಿಸಿದರು. ಮಗಳನ್ನು ವೈದ್ಯೆಯನ್ನಾಗಿ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದವರು. ನಂತರ ಸೈಟೊಜೆನೆಟಿಕ್ಸ್ ವಿಷಯದಲ್ಲಿ ಎಂ.ಎಸ್ಸಿ ಪದವಿ ಪಡೆದರು. ವಿವಾಹದ ನಂತರ ಮುಂಬಯಿಯ ಟಾಟಾ ಮೆಮೊರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಜೊತೆಗೆ ಡಾ. ವಿ.ಆರ್. ಖಾನೋಲ್ಕರ್‍ರವರ ಮಾರ್ಗದರ್ಶನದಲ್ಲಿ ಪಿ.ಎಚ್‍ಡಿ ಪದವಿಯನ್ನೂ ಪಡೆದರು.

ಖಾನೋಲ್ಕರ್‍ರವರ ನೇತೃತ್ವದಿಂದ ಅಮೆರಿಕಾದಲ್ಲಿ ತಮ್ಮ ಫೆಲೋಶಿಪ್‍ಅನ್ನು ಪೂರ್ಣಗೊಳಿಸಿದರು. ಅಂಗಾಂಶ ಕೃಷಿ ವಿಷಯದಲ್ಲಿ ಪೋಸ್ಟ್-ಡಾಕ್ಟರಲ್ ಫೆಲೋಷಿಪ್‍ಅನ್ನು ಅಂಗಾಂಶ ಕೃಷಿ ವಿಷಯದಲ್ಲಿ ಸಂಶೋಧನೆ ಮಾಡಿದರು. ಜಾರ್ಜ್ ಗೇರವರ ಜೊತೆ ಕೆಲಸ ಮಾಡುವ ಅವಕಾಶವನ್ನೂ ಪಡೆದಿದ್ದರು. ಭಾರತಕ್ಕೆ ಮರಳಿದ ಕಮಲ್‍ರವರು ಐಸಿಆರ್‍ಸಿಯಲ್ಲಿ ಹಿರಿಯ ಸಂಶೋಧನಾ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಾಂಬೆಯಲ್ಲಿ ಜೀವಶಾಸ್ತ್ರ ಮತ್ತು ಅಂಗಾಂಶ ಕೃಷಿ ಪ್ರಯೋಗಾಲ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ಯಾನ್ಸರ್ ಜೀವಕೋಶ, ಜೀವವಿಜ್ಞಾನ ಮತ್ತು ಪ್ರತಿರಕ್ಷಣಾ ಕ್ಷೇತ್ರದಲ್ಲಿ ಸಂಶೋಧನಾ ಘಟಕಗಳನ್ನು ಸ್ಥಾಪಿಸುವ ಇಚ್ಛೆ ಹೊಂದಿದ್ದರು. ಲ್ಯುಕೇಮಿಯಾ, ಸ್ತನಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ರೋಗಗಳಿಗೆ ಕಾರಣ ಹುಡುಕುವ ಉದ್ದೇಶ ಹೊಂದಿದ್ದರು.

ಕ್ಯಾನ್ಸರ್ ಪ್ರಭಾವಕ್ಕೆ ಒಳಪಡಬಹುದಾದ ಲಿಂಕ್, ಹಾರ್ಮೋನ್‍ಗಳು ಮತ್ತು ಗಡ್ಡೆಯ ವೈರಸ್ ಸಂಬಂಧ ಸ್ಥಾಪಿಸಿದ್ದು ಕಮಲ್‍ರ ಮತ್ತೊಂದು ಗಮನಾರ್ಹ ಸಾಧನೆ. ಕುಷ್ಠರೋಗಕ್ಕೆ ಲಸಿಕೆ ಕಂಡುಹಿಡಿದರು. ಇಷ್ಟೆಲ್ಲ ಸಾಧನೆಯೊಂದಿಗೆ ಕ್ಯಾನ್ಸರ್ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಮಹಿಳೆಯರಿಗೆ ಸ್ಫೂರ್ತಿಯಾದರು. ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ ತಮ್ಮ `ಕಂಪ್ಯಾರಿಟಿವ್ ಮಾರ್ಫಾಲಜಿ ಆಫ್ ಮಾಮರಿ ಗ್ಲಾಂಡ್ಸ್ ಆರ್ಫ ಫೋರ್ ಸ್ಟ್ರೇನ್ಸ್ ಆಫ್ ಮೈಸ್ ವೇರಿಯಿಂಗ್ ಇನ್ ದೇರ್ ಸಸೆಪ್ಟಿಬಿಲಿಟಿ ಟು ಬ್ರೆಸ್ಟ್ ಕ್ಯಾನ್ಸರ್’ ಕರಿತ ಸಂಶೋಧನಾ ವರದಿ ನೀಡಿದರು. ಕುಷ್ಠರೋಗ ಹಾಗೂ ಕ್ಯಾನ್ಸರ್‍ಗೆ ಸಂಬಂಧಿಸಿದಂತೆ ಸುಮಾರು 200ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ವೈದ್ಯಕೀಯ ಕ್ಷೇತ್ರದ ಮಹತ್ಸಾಧನೆಗಾಗಿ 1989ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.