ಅನಿವಾಸಿ ಕನ್ನಡಿಗರಿಗೆ ಕನ್ನಡ ಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲಿನ ಕಾಳಜಿ ಹೆಚ್ಚು

0
1432

ಬೆಂಗಳೂರು: ಕನ್ನಡ ಬಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಅನಿವಾಸಿ ಕನ್ನಡಿಗರಿಗೆ ಇರುವಷ್ಟು ಕಾಳಜಿ ಕರ್ನಾಟಕದಲ್ಲೇ ಇರುವವರಲ್ಲಿ ಇಲ್ಲದಿರುವುದು ಬೇಸರ ತಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ.

kannada bhashe
ನಾವಿಕೋತ್ಸವ 2016

ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ (ನಾವಿಕ) ಶನಿವಾರ ಸಂಯುಕ್ತವಾಗಿ ಆಯೋಜಿಸಿದ್ದ ‘ನಾವಿಕೋತ್ಸವ 2016’ ಎರಡು ದಿನಗಳ ಸಾಂಸ್ಕೃತಿಕ ಹಾಗೂ ಸಾಹಿತ್ಯ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ. ರಾಜ್ಯದಲ್ಲೂ ಕನ್ನಡ ಹಚ್ಚಹಸಿರಾಗಿರಬೇಕು ಎಂಬ ಆಸೆಯೊಂದಿಗೆ ನಾವಿಕೋತ್ಸವವನ್ನು ಆಚರಿಸುತ್ತಿರುವುದನ್ನು ಹನುಮಂತಯ್ಯ ಶ್ಲಾಘಿಸಿದರು.

ನಾವಿಕದ ಯುವಸೂಚಿ ಎಂಬ ಯೋಜನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಚಾಲನೆ ನೀಡಿದರು. ಉತ್ತರ ಅಮೆರಿಕದಲ್ಲಿ ಕೆಲಸ ಹಾಗೂ ವಿದ್ಯಾಭ್ಯಾಸಕ್ಕಾಗಿ ಹೋಗುವವರಿಗೆ ಸಹಾಯವಾಗುವಂತೆ ಈ ಯೋಜನೆ ಸಿದ್ಧಪಡಿಸಲಾಗಿದೆ ಎಂದು ನಾವಿಕದ ಅಧ್ಯಕ್ಷೆ ಡಾ. ರೇಣುಕಾ ರಾಮಪ್ಪ ತಿಳಿಸಿದರು. ನಾವಿಕೋತ್ಸವ ಸಂಚಾಲಕರಾದ ಡಾ. ಸ್ವರ್ಣ ಲೋಕೇಶ್, ಯಶವಂತ ಸರದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಸಿಂಗಾಪುರ ಸಿಂಗಾರ ಕನ್ನಡ ಸಂಘದ ನೃತ್ಯ, ಧಾರವಾಡದ ಸಿದ್ಧಾರೂಢ ಹೂಗಾರ್ ನೇತೃತ್ವದ ತಂಡದ ಮಲ್ಲಗಂಬ ಹಾಗೂ ಬೆಂಗಳೂರು ಸುಪರ್ಣಾ ವೆಂಕಟೇಶ್ ದಿಗ್ದರ್ಶನದಲ್ಲಿ ಅಂಧರ ನೃತ್ಯ ಹಾಗೂ ಕತ್ತಿವರಸೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ನಾನೇ ‘ಸ್ಟ್ಯಾಂಡ್ ಬೈ ಸಿಎಂ’

ನಾವಿಕೋತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಬೇಕಿತ್ತು. ಕಾರಣಾಂತರಗಳಿಂದ ಗೈರುಹಾಜರಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಸಿಎಂ ಬರದಿದ್ದರೆ ನಾನೇ ಸ್ಟ್ಯಾಂಡ್ ಬೈ ಇರುತ್ತೇನೆ. ಜುಬ್ಬಾ ಹಾಕಿರುತ್ತೇನೆ. ಹಂಗೇ ಹೋಗಿ ಉದ್ಘಾಟನೆಯನ್ನೂ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಬಿಕ್ಕಟ್ಟಿನ ಸಮಯದಲ್ಲಿ ಸಂತೋಷದ ಕಾರ್ಯಕ್ರಮ ಏಕೆ ಬೇಕು ಎಂದು ಸಿದ್ದರಾಮಯ್ಯ ಬರದಿರುವುದಕ್ಕೆ ಕಾರಣವಿರಬಹುದು ಎಂದು ಹೇಳಿದರು.

ಇಂದು ಮೆರವಣಿಗೆ

ಭಾನುವಾರ (ಜು.17) ಬೆಳಗ್ಗೆ 9.30ಕ್ಕೆ ರಾಜ್ಯದ ವಿವಿಧ ತಂಡಗಳಿಂದ ಡೊಳ್ಳು ಕುಣಿತ, ಗಾರುಡಿ ಗೊಂಬೆ ನೃತ್ಯ ಮತ್ತು ಕಹಳೆ ಜೊತೆಗೆ ಕನ್ನಡ ಮೆರವಣಿಗೆ ಸಂಭ್ರಮ ನಡೆಯಲಿದೆ. ನಂತರ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಅನಿವಾಸಿ ಕನ್ನಡಿಗರು ಹಾಗೂ ಸರ್ಕಾರದ ಪ್ರತಿನಿಧಿಗಳೊಂದಿಗೆ ಬಂಡವಾಳ ಹೂಡಿಕೆ ವಿಚಾರವಾಗಿ ಸಮಾವೇಶ ನಡೆಯಲಿದೆ. ಸಂಜೆ ಸಂಗೀತ ಕಾರ್ಯಕ್ರಮ ಹಾಗೂ ಭಕ್ತಪ್ರಹ್ಲಾದ ಕಿರು ನಾಟಕ ಪ್ರದರ್ಶನವಿದೆ.

Source: vijayavani