ನಾಗರಹಾವು ಚಿತ್ರದ ಪ್ರಿನ್ಸಿಪಾಲ್ ಶ್ಯಾಮರಾಯ; ಸಿ.ಎಚ್​​ ಲೋಕನಾಥ್ ಇನಿಲ್ಲ..

0
252

ಕನ್ನಡದ ಚಿತ್ರರಂಗದ ಖ್ಯಾತ ಹಿರಿಯ ನಟ ನಿಧನ:

ಐದು ದಶಕಗಳ ಕಾಲ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಾಗಿ ಸೇವೆಸಲ್ಲಿಸಿ ಸುಮಾರು 600ಕ್ಕೂ ಅಧಿಕ ಸಿನಿಮಾ, 1000ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಮೇರು ನಟ ಸಿ.ಎಚ್​​ ಲೋಕನಾಥ್​ ಕೊನೆಯುಸಿರೆಳೆದಿದ್ದಾರೆ. ಇವರಿಗೆ 90 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ 12.15ಕ್ಕೆ ನಿಧನರಾಗಿದ್ದು ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ 12 ರಿಂದ 2.30ರವರೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಲೋಕನಾಥರು ಜನಿಸಿದ್ದು ಆಗಸ್ಟ್ 14, 1927 ರಂದು. ಶಿಸ್ತುಬದ್ಧ ಜೀವನದ, ರಂಗಭೂಮಿ, ಚಲನಚಿತ್ರದ ಮೇರು ಕಲಾವಿದರಾದ ಲೋಕನಾಥ್‌ರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಹನುಮಂತಪ್ಪನವರು ಮತ್ತು ತಾಯಿ ಗೌರಮ್ಮನವರು. ಅವರದ್ದು ಜವಳಿ ವಾಣಿಜ್ಯ ವಹಿವಾಟಿನ ಕುಟುಂಬ. ಹೆಣ್ಣು, ಗಂಡು ಮಕ್ಕಳು ಎಂಬ ಭೇದವಿಲ್ಲದೆ ಸಂಜೆಯ ಒಳಗೆ ಮನೆ ಸೇರಬೇಕು ಎಂಬಂತಹ ಕಟ್ಟುಪಾಡಿನ ವಾತಾವರಣವಿದ್ದದು ಅವರ ಕುಟುಂಬ. ಸುಮಾರು 40 ಜನರಿದ್ದ ಸಂಪ್ರದಾಯಸ್ತ ಅವಿಭಕ್ತ ಕುಟುಂಬದಲ್ಲಿ ಬೆಳೆದರು.ಇವರು ಮೂಲತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಲೋಕನಾಥರು ಕುಟುಂಬದ ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು. ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು. ತಬಲಾ ಕಲಿಯಬೇಕೆಂಬ ಆಸೆಗೆ ತಬಲಾ ತಂದಿಟ್ಟುಕೊಂಡಾಗ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಟ್ಟರು.

ರಂಗಭೂಮಿ ಪ್ರವೇಶ:

ಕಲಿಯಬೇಕೆಂದು ಪ್ರಖ್ಯಾತ ಬರಹಗಾರ ಹಾಗೂ ಅಂಗಸೌಷ್ಟವದ ಮೇರು ಆಚಾರ್ಯರಾದ ಕೆ.ವಿ. ಅಯ್ಯರ್ ಬಳಿ ಸೇರಿಕೊಂಡರು. ಬಳಿಕ ಅಲ್ಲಿಂದಲ್ಲೇ ಕೈಲಾಸಂ ಅವರಿಂದಾಗಿ ನಾಟಕರಂಗಕ್ಕೆ ಪ್ರವೇಶ ಮಾಡಿದರು. ಮುಂದೆ 19562 ರಲ್ಲಿ ‘ರವಿ ಕಲಾವಿದರು’ ಸಂಸ್ಥೆ ಸೇರಿ ಅಭಿನಯಿಸಿದ ಮೊದಲ ನಾಟಕ ‘ಬಂಡವಾಳವಿಲ್ಲದ ಬಡಾಯಿ’. ಒಲ್ಲೆನೆಂದರೂ ಬಿಡದೆ ಮತ್ತೊಮ್ಮೆ ಬಣ್ಣ ಹಚ್ಚಿದ್ದು ದಾಶರಥಿ ದೀಕ್ಷಿತರ ‘ಅಳಿಯ ದೇವರು’ ನಾಟಕದಲ್ಲಿ ಎನ್ನುತ್ತಿದೆ ಇತಿಹಾಸ.
ಹೀಗೆ ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ ಲೋಕನಾಥರು ರಕ್ತಾಕ್ಷಿ, ವಿಗಡ ವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಖ್ಯಾತಿ ಗಳಿಸಿದರು. ಮರಾಠಿ ನಾಟಕಗಳ ಅನುವಾದವಾದ ‘ತನುವು ನಿನ್ನದೆ ಮನವು ನಿನ್ನದೆ (ನೂರಾರು ಪ್ರದರ್ಶನ ಕಂಡ ನಾಟಕ)’, ‘ನಾನೇನು ಹೇಳಬೇಕು’, ‘ಹಂಚುಬೆಳದಿಂಗಳು’ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ಬಿ.ವಿ. ಕಾರಂತರ ನಿರ್ದೇಶನದ ಗೋಸ್ಟ್‌, ಈಡಿಪಸ್‌, ನಾಗೇಶರ ನಿರ್ದೇಶನದ ನಾಟಕಗಳು, ಸಮುದಾಯದ ಪ್ರಸನ್ನರ ತಾಯಿ, ಗೆಲಿಲಿಯೋ ಮುಂತಾದವು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು.

ಚಿತ್ರರಂಗದ ಜೀವನ:

‘ಸಂಸ್ಕಾರ’ದ ಮೂಲಕ ಚಿತ್ರರಂಗ ಪ್ರವೇಶಿಸಿದರಾದರೂ, ‘ಗೆಜ್ಜೆಪೂಜೆ’ ಅವರ ಮೊದಲು ಬಿಡುಗಡೆಯಾದ ಚಿತ್ರ. ಮುಂದೆ ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯ, ಶರಪಂಜರ, ನಾಗರಹಾವು, ಹೇಮಾವತಿ, ಬಂಗಾರದ ಪಂಜರ, ಹೃದಯ ಸಂಗಮ, ಕೃಷ್ಣ ರುಕ್ಮಿಣಿ ಸತ್ಯಭಾಮ, ಭಾಗ್ಯಜ್ಯೋತಿ, ಕೂಡಿ ಬಾಳೋಣ, ಮಿಂಚಿನ ಓಟ, ಹೊಸ ನೀರು, ಮನೆ ಮನೆ ಕಥೆ, ಒಲವಿನ ಆಸರೆ ಹೀಗೆ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಇಂದು ಬಾರದ ಲೋಕಕ್ಕೆ ತೆರಳಿ ಒಬ್ಬ ಪುತ್ರ, ನಾಲ್ಕು ಪುತ್ರಿಯರು ಹಾಗೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.