ಕನ್ನಡಿಗರಿಗೆ ಹೊಸ ವರ್ಷದ ಉಡುಗೊರೆ: ಜನತಾ ಚಿತ್ರಮಂದಿರಕ್ಕೆ ಚಾಲನೆ!!!

0
2544

ಒಂದು ವರ್ಷದ ಕಾಲಾವಕಾಶ ಬಳಿಕ ರಾಜ್ಯ ಸರ್ಕಾರ ಅಂತಿಮವಾಗಿ ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಇದು ಕನ್ನಡಿಗರಿಗೆ ಹೊಸ ವರ್ಷದ ಉಡುಗೊರೆ.

ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳ ನಡುವೆ ಸಾಮರಸ್ಯ ಅತ್ಯಗತ್ಯ. ಕನ್ನಡ ಚಿತ್ರರಂಗದ ಸುವರ್ಣಯುಗ ಆರಂಭವಾಗಿದೆ. ಚಿತ್ರಗಳು ಗೆಲ್ಲುತ್ತಿವೆ. ಆದರೆ ಮೂಲಭೂತ ಸಮಸ್ಯೆಗಳು ಚಿತ್ರರಂಗವನ್ನು ಕಾಡುತ್ತಲೇ ಇವೆ. ರಾಜ್ಯದಲ್ಲಿ ಮುಚ್ಚುವ ಹಂತದಲ್ಲಿರುವ ಗ್ರಾಮೀಣ ಪ್ರದೇಶದ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಅದಕ್ಕೋಸ್ಕರ ಕನ್ನಡ ಹೋರಾಟಗಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ರವರು ‘ಅಮ್ಮ ಥಿಯೇಟರ್ಸ್’ ಮಾದರಿಯಲ್ಲಿ ನೆರೆಯ ತಮಿಳುನಾಡಿನಲ್ಲಿ ಆದೇಶಿಸಿದ ರೀತಿಯಲ್ಲಿ ಕರ್ನಾಟಕದಲ್ಲೂ ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ ಕನ್ನಡ ಚಲನಚಿತ್ರರಂಗದ ಪರವಾಗಿ ಬೇಡಿಕೆಯನ್ನು ಇಟ್ಟಿದ್ದರು ಅದಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಅಷ್ಟೇ ಅಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯ ಮಾಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.

2016-17 ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಪ್ರೋತ್ಸಾಹ ಧನ ಪಡೆದ ಜನತಾ ಚಿತ್ರ ಮಂದಿರಗಳು, ಪ್ರೋತ್ಸಾಹ ಧನ ಪಡೆದ ದಿನದಿಂದ ಶೇ.100ರಷ್ಟು ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು. ಪ್ರೋತ್ಸಾಹ ಧನ ಪಡೆದು ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸದೇ ಇದ್ದಲ್ಲಿ ಸರ್ಕಾರವು ಮಂಜೂರು ಮಾಡಿದ ಪ್ರೋತ್ಸಾಹ ಧನವನ್ನು ದಂಡ ಶುಲ್ಕದೊಂದಿಗೆ ಹಿಂದಿರುಗಿಸಬೇಕಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಜನತಾ ಚಿತ್ರಮಂದಿರ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ಪಡೆಯುವ ಅರ್ಹತೆ ಪಡೆಯಬೇಕೆಂದರೆ ಈ ನಿಯಮವನ್ನು ಪಾಲಿಸಲೇಬೇಕು. ರಾಜ್ಯದ ಯಾವುದೇ ಭಾಗದಲ್ಲಿ ನಿರ್ಮಾಣವಾಗುವ ಕನಿಷ್ಟ 200 ಆಸನಗಳ ಸಾಮರ್ಥ್ಯದ ಏಕ ಪರದೆ ಅಥವಾ ಕನಿಷ್ಟ 150 ಆಸನಗಳು ಹೊಂದಿದ ಬಹುಪರದೆ ಚಿತ್ರಮಂದಿರಗಳಿರಬೇಕು. ಹೊಸದಾಗಿ ನಿರ್ಮಾಣವಾಗುವ ಏಕ ಪರದೆ ಚಿತ್ರ ಮಂದಿರಗಳಿಗೆ 50 ಲಕ್ಷ ರೂ. ಅದೇ ರೀತಿ ಬಹು ಪರದೆ ಚಿತ್ರಮಂದಿರಗಳಿಗೂ ಸಹ ಪ್ರತಿ ಪರದೆಗೆ ಗರಿಷ್ಠ 50 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.