22 ವರ್ಷದ ಹಿಂದಿನ ಗುಜರಾತ್ ರಾಜಕೀಯ ಘಟನೆ ಇಂದು ಕರ್ನಾಟಕದಲ್ಲಿ ಮರುಕಳಿಸಿತಾ..?

0
452

ಈಗಾಗಲೇ ಯಡಿಯೂರಪ್ಪ ಅವರು ಸಿಎಂ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. 222 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 104 ಸ್ಥಾನಗಳನ್ನು ಗಳಿಸಿ ಅತ್ಯಧಿಕ ಸ್ಥಾನಗಳನ್ನು ಪಡೆದು ಹೊರಹೊಮ್ಮಿದ್ದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 78 ಸ್ಥಾನಗಳನ್ನಷ್ಟೆ ಪಡೆದು ದ್ವಿತೀಯ ಸ್ಥಾನಕ್ಕೆ ಜಾರಿತ್ತು. ಇನ್ನು ಮೂರನೇ ಸ್ಥಾನದಲ್ಲಿದ್ದ ಜಾತ್ಯತೀತ ಜನತಾ ದಳ 37 ಸ್ಥಾನಗಳನ್ನು ಪಡೆದಿದ್ದು ಮೂವರು ಪಕ್ಷೇತರರು ಗೆದ್ದು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬಹುಮತ ರಹಿತದ ಹೊರತಾಗಿಯೂ ಅತೀ ದೊಡ್ಡ ಪಕ್ಷ ಎಂಬ ಆಧಾರದ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ.

ಸಹಜವಾಗಿ ಅಧಿಕಾರ ಹಿಡಿಯಬೇಕಿದ್ದ ಬಿಜೆಪಿಗೆ ಬಹುಮತ ಪಡೆಯಲು ಕೇವಲ 9 ಸ್ಥಾನಗಳ ಕೊರತೆಯಿದ್ದ ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕುತಂತ್ರ ರಾಜಕಾರಣದಿಂದ ದೋಸ್ತಿ ಮಾಡಿಕೊಂಡು ಪ್ರಜಾಪ್ರಭುತ್ವದ ಆಶಯವನ್ನು ಬಲಿಕೊಟ್ಟು ಸಮ್ಮಿಶ್ರ ಸರಕಾರ ಮಾಡಲು ಮುಂದಾಗಿದೆ. ಅತ್ಯಧಿಕ ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ರಾಜ್ಯಪಾಲರು ನ್ಯಾಯಯುತವಾಗಿ ಸರ್ಕಾರ ರಚಿಸಲು ಸೂಚನೆ ನೀಡಿದ್ದರಿಂದ ನಿನ್ನೆ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ 22 ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದು ಮುನ್ನೆಲೆಗೆ ಬಂದಿದ್ದು, ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ. 1996 ನೇ ಇಸವಿ, ಆ ಸಮಯದಲ್ಲಿ ದೇಶದ ಪ್ರಧಾನಿಯಾಗಿದ್ದವರು ಜಾತ್ಯಾತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾದ ಎಚ್.ಡಿ.ದೇವೇಗೌಡರು. ಗುಜರಾತ್ ನ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದವರು ವಜು ಭಾಯಿ ವಾಲಾ. ಗುಜರಾತ್ ನಲ್ಲಿ ಅಂದು ಬಿಜೆಪಿ ಸರಕಾರ ಬಹುಮತದೊಂದಿಗೆ ಅಧಿಕಾರದಲ್ಲಿತ್ತು.

ಆಗ ದೇವೇಗೌಡರು ಕಾಂಗ್ರೆಸ್ ಕುಮ್ಮಕ್ಕಿನಿಂದ ಗುಜರಾತ್ ನ ಬಿಜೆಪಿ ಸರಕಾರ ವಜಾ ಆಗುವಂತೆ ಮಾಡಿದ್ದರು. ಈ ಕಾರಣದಿಂದ ಅಂದಿನ ಗುಜರಾತ್ ನ ಬಿಜೆಪಿ ಸರಕಾರ ಎರಡು ಭಾಗಗಳಾಗಿ ಹೋಳಾಯಿತು. ಇದರಲ್ಲಿ ಒಂದು ತಂಡ ಕಾಂಗ್ರೆಸ್ ಬೆಂಬಲ ಪಡೆದು ಶಂಕರ್ ಸಿಂಗ್ ವಾಘೇಲಾ ಗುಜರಾತ್ ಮುಖ್ಯಮಂತ್ರಿ ಆದರು. ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಕುಮ್ಮಕ್ಕಿನಿಂದ ಸಾಂವಿಧಾನಿಕ ಬಿಕ್ಕಟ್ಟು ಹಾಗು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣ ನೀಡಿ, ಬಿಜೆಪಿ ಸರಕಾರ ವಜಾ ಆಗುವಂತೆ ಮಾಡಿದ್ದರು.

22 ವರ್ಷಗಳ ನಂತರ ಆ ಘಟನೆ ಮತ್ತೆ ಮರುಕಳಿಸಿದಂತಿದೆ. ಅಂದು ಪ್ರಧಾನಿಯಾಗಿದ್ದವರು ಇಂದು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಂದು ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದವರು ಇಂದು ಕರ್ನಾಟಕದ ರಾಜ್ಯಪಾಲರಾಗಿದ್ದಾರೆ! ದೇವೇಗೌಡರ ಅಂದಿನ ತಂತ್ರಗಳು ಇಂದು ಅವರಿಗೇ ತಿರುಮಂತ್ರವಾಗುತ್ತಿವೆ. ಇದೀಗ ಜೆಡಿಎಸ್ ಹಾಗು ಕಾಂಗ್ರೆಸ್ಸಿಗರು ರಾಜ್ಯಪಾಲರಿಗೆ ನೈತಿಕತೆ ಹಾಗೂ ನ್ಯಾಯಾಂಗದ ಪಾಠ ಹೇಳುತ್ತಿದ್ದಾರೆ. ಮಾಡಿದ್ದುಣ್ಣೋ ಮಾರಾಯ ಎಂಬಂತೆ ಗುಜರಾತ್ ನಲಲಲಿ ಅಂದು ನಡೆದ ರಾಜಕೀಯದ ಚದುರಂಗದಾಟ ಇಂದು ಕರ್ನಾಟಕದಲ್ಲಿ ಪುನರಾವರ್ತಿಸಿದೆ..

ಬಹುಮತ ರಹಿತದ ಹೊರತಾಗಿಯೂ ಅತೀ ದೊಡ್ಡ ಪಕ್ಷ ಎಂಬ ಆಧಾರದ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲ ವಜುಭಾಯ್ ವಾಲಾ ಅವರ ನಿರ್ಧಾರವನ್ನು ಪ್ರಶ್ನಿಸಿ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.

ಈಗ ಎಲ್ಲರ ಚಿತ್ರ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌–ಜೆಡಿಎಸ್‌ ‘ಮೈತ್ರಿ’ ಕೂಟ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ‘ಬಕ’ಪಕ್ಷಿಯಂತೆ ಕಾಯುತ್ತಿವೆ.