ಮಹಾಭಾರತದ ಕರ್ಣನ ದಾರುಣ ಕಥೆ ಕೇಳಿದರೆ ಎಂಥವರಿಗೂ ಅನುಕಂಪ ಬರುವುದು!!

0
2676

ಕರ್ಣ, ಮಹಾಭಾರತದ ದುರಂತ ನಾಯಕರಲ್ಲಿ ಅತ್ಯಂತ ಆಪ್ತವೆನಿಸುವ ಪಾತ್ರ. ಅವನ ವ್ಯಕ್ತಿತ್ವವೇ ವರ್ಣರಂಜಿತವಾದುದು. “ಕರ್ಣ ರಸಾಯನಮಲ್ತೆ ಭಾರತಂ” ಎಂದು ಪಂಪನೇ ಉದ್ಗರಿಸಿದ್ದಾನೆ. ಧೀರೋದಾತ್ತನಾದರೂ ಎಲ್ಲಾ ಕಡೆಯಲ್ಲಿಯೂ ಎಲೆ ಮರೆಕಾಯಿಯಂತಾಗುತ್ತಾನೆ. ಅವನ ನಿಜವಾದ ವ್ಯಕ್ತಿತ್ವ ವ್ಯಕ್ತವಾಗುವುದಕ್ಕೆ ತಕ್ಕ ವೇದಿಕೆ ಸಿಗುವುದೇ ಇಲ್ಲ. ಹೀಗಾಗುವುದಕ್ಕೆ ಕಾರಣ ಅಧರ್ಮದ ಪರವಾಗಿ ನಿಂತಿದ್ದರಿಂದಲೂ ಇರಬಹುದು ಎನಿಸಿದರೂ, ಆ ಪಾತ್ರಕ್ಕೆ ಹುಟ್ಟಿನಂದಲೂ ಅನ್ಯಾಯವಾಗುತ್ತಲೇ ಹೋಗುತ್ತದೆ.

ಕ್ಷತ್ರಿಯನಾಗಿ ಹುಟ್ಟಿದರೂ, ಅವನಿಗೆ ಮಾನ್ಯತೆ ಸಿಗುವುದೇ ಇಲ್ಲ. ಮುಂದೆ ವಿದ್ಯಾಭ್ಯಾಸಕ್ಕೆ ಹೋದಾಗಲೂ ಅವಮಾನ, ಹೆಜ್ಜೆ ಹೆಜ್ಜೆಗೂ ಅವಹೇಳನಕ್ಕೆ ಗುರಿಯಾಗುತ್ತಲೇ ಹೋಗುತ್ತಾನೆ. ಸಾಲದಕ್ಕೆ ಎಲ್ಲರೂ ಅವನನ್ನು ಧರ್ಮ ಸಂಕಟಕ್ಕೆ ಸಿಕ್ಕಿ ಹಾಕಿಸಿದವರೇ. ಕೃಷ್ಣ, ಕುಂತಿ, ದುರ್ಯೋಧನ, ಇಂದ್ರ ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಧರ್ಮಸೂಕ್ಷ್ಮಕ್ಕೆ ಅವನನ್ನು ಆಗಿಂದಾಗ್ಗೆ ಸಿಕ್ಕಿಸಿ ತಮ್ಮ ಕಾರ್ಯವನ್ನು ಸಾಧಿಸುತ್ತಾರೆ.

ಇಷ್ಟಲ್ಲದೇ ಮೇಲಿಂದ ಮೇಲೆ ಶಾಪಗಳಿಗೆ ಗುರಿಯಾಗುತ್ತಾ ಹೋಗುತ್ತಾನೆ. ಈ ಶಾಪಗಳ ಬಗ್ಗೆ ಕೃಷ್ಣನಲ್ಲಿ ಒಮ್ಮೆ ಹೆೇಳಿಕೊಂಡಾಗ, ಅವನು ಗುರಿಯಾದ ಮೂರೂ ಶಾಪಗಳೂ ಏಕ ಕಾಲದಲ್ಲಿ ಪ್ರಭಾವವಾದರೆ ಮಾತ್ರ ಅವನ ಅಂತ್ಯ ನಿಶ್ಚಿತ ಎಂದು ತಿಳಿಸುತ್ತಾನೆ.

ಕರ್ಣ ಶಾಪಕ್ಕೆ ಗುರಿಯಾದ ಸಂದರ್ಭಗಳು ಇಂತಿವೆ:

ಒಮ್ಮೆ ಕರ್ಣ ದೇಶ ಸಂಚಾರ ಮಾಡುವಾಗ, ಚಿಕ್ಕ ಹೆಣ್ಣು ಮಗುವೊಂದು ಅಳುತ್ತಾ ನಿಂತಿರುತ್ತದೆ. ಏನೆಂದು ವಿಚಾರಿಸಿದಾಗ, ತಾನು ಗಡಿಗೆಯಲ್ಲಿ ತಂದಿದ್ದ ತುಪ್ಪವೆಲ್ಲಾ ಚೆಲ್ಲಿ ಮಣ್ಣುಪಾಲಾಯಿತೆಂದೂ, ಇದನ್ನು ತಿಳಿದರೆ ತನ್ನ ಮಲತಾಯಿಯು ಹೊಡೆಯುತ್ತಾಳೆಂದೂ ತಿಳಿಸುತ್ತದೆ. ಮನ ಕಲಕಿದಂತಾಗಿ ಕರ್ಣನು ತಾನು ಬೇರೆ ತುಪ್ಪವನ್ನು ತಂದುಕೊಡುತ್ತೇನೆಂದು ಹೇಳಿದರೂ ಸಹ ಆ ಮಗುವು ಮಣ್ಣಿನಲ್ಲಿ ಚೆಲ್ಲಿಹೋದ ತನ್ನ ತುಪ್ಪವೇ ಬೇಕೆಂದು ಹಟ ಮಾಡುತ್ತದೆ. ಆಗ ವಿಧಿಯಿಲ್ಲದೇ ಕರ್ಣ ಮಣ್ಣನ್ನು ಹಿಂಡಿ ಚೆಲ್ಲಿದ ತುಪ್ಪವನ್ನು ಮಗುವಿಗೆ ತೆಗೆದು ಕೊಟ್ಟು ಕಳುಹಿಸುತ್ತಾನೆ. ಈ ಸಂದರ್ಭದಲ್ಲಿ ಅವನು ಭೂದೇವಿಗೆ ನೋವುಂಟು ಮಾಡಿದ್ದಕ್ಕಾಗಿ ಅವಳ ಶಾಪಕ್ಕೆ ಗುರಿಯಾಗುತ್ತಾನೆ. ನಿನ್ನ ಯುದ್ಧ ರಥದ ಚಕ್ರವು ಮಣ್ಣಿನಲ್ಲಿ ಹೂತು ಹೋಗಲಿ ಎಂದು ಶಪಿಸುತ್ತಾಳೆ.

ಪರಶುರಾಮರ ಬಳಿ ಬಿಲ್ವಿದ್ಯೆ ಕಲಿಯಲು ಬಂದ ಕರ್ಣನು ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಸೇರಿಕೊಂಡಿರುತ್ತಾನೆ. ದಿನ ಕಳೆದಂತೆ ಕರ್ಣ ಪರಶುರಾಮರಿಗೆ ಆಪ್ತನಾಗುತ್ತಾನೆ, ಪ್ರಿಯ ಶಿಷ್ಯನಾಗುತ್ತಾನೆ. ಹೀಗಿರುವಾಗ ಒಮ್ಮೆ ಆಯಾಸಗೊಂಡ ಪರಶುರಾಮರು, ಕರ್ಣನ ತೊಡೆಯ ಮೇಲೆ ಮಲಗಿ ವಿಶ್ರಮಿಸುತ್ತಾ ಹಾಗೆಯೇ ನಿದ್ದೆ ಹೋಗುತ್ತಾರೆ. ಆ ಸಮಯದಲ್ಲಿ ದುಂಬಿಯೊಂದು ಬಂದು ಕರ್ಣನ ತೊಡೆಯನ್ನು ಕೊರೆಯಲು ಪ್ರಾರಂಭಿಸುತ್ತದೆ. ಗುರುಗಳಿಗೆ ನಿದ್ರಾಭಂಗವಾಗಬಾರದೆಂದು ಕರ್ಣನು ಅಪಾರವಾದ ನೋವನ್ನು ಸಹಿಸಿ ಹಾಗೇ ಕುಳಿತಿರುತ್ತಾನೆ. ತೊಡೆಯಲ್ಲಿ ರಕ್ತಸ್ರಾವ ಶುರುವಾಗಿ ಪರಶುರಾಮರಿಗೆ ಸೋಕಿ ಎಚ್ಚರವಾಗುತ್ತದೆ. ಈ ದೃಶ್ಯ ನೋಡಿದ ಪರಶುರಾಮರು ಇಂತಹ ನೋವನ್ನು ಬ್ರಾಹ್ಮಣನಾದವನಿಗೆ ಖಂಡಿತ ಸಹಿಸಲಸಾಧ್ಯವೆಂದು ಊಹಿಸಿ, ಕರ್ಣನು ಕ್ಷತ್ರಿಯನಿರಬೇಕೆಂದೇ ಭಾವಿಸಿ, ಕಳ್ಳತನದಿಂದ ವಿದ್ಯೆ ಕಲಿಯಲು ಬಂದ ನಿನಗೆ ಅತ್ಯವಶ್ಯಕವಾದ ಸಮಯದಲ್ಲಿ ನೀನು ಕಲಿತ ವಿದ್ಯೆಯು ಸ್ಮೃತಿಯಿಂದ ಅಳಿಸಿ ಹೋಗಲಿ ಎಂದು ಶಪಿಸುತ್ತಾರೆ.

ಶಬ್ದವೇಧಿ ವಿದ್ಯಾಪ್ರವೀಣನಾಗಿದ್ದ ಕರ್ಣನು ಒಮ್ಮೆ ಹಸುವೊಂದನ್ನು ಯಾವುದೋ ಮೃಗವೆಂದು ಭಾವಿಸಿ, ದೂರದಿಂದಲೇ ಬಾಣ ಹೊಡೆದು ಕೊಂದಿರುತ್ತಾನೆ. ಆದರೆ ಅದು ಒಬ್ಬ ಬ್ರಾಹ್ಮಣನಿಗೆ ಸೇರಿದ ಹಸುವಾಗಿರುತ್ತದೆ. ಇದರಿಂದ ಮನನೊಂದ ಬ್ರಾಹ್ಮಣನು “ಅನ್ಯಾಯವಾಗಿ ಏನೂ ಅರಿಯದ ಅಸಹಾಯಕವಾದ ನನ್ನ ಹಸುವನ್ನು ಕೊಂದ ನೀನು ಸಹ ನಿನ್ನ ಶತ್ರುವಿನಿಂದ ನಿನ್ನ ಅರಿವಿಗೆ ಬಾರದಂತೆ ಅಸಹಾಯಕ ಪರಿಸ್ಥಿತಿಯಲ್ಲಿ ಕೊಲ್ಲಲ್ಪಡುತ್ತಿಯೆ” ಎಂದು ಶಪಿಸುತ್ತಾನೆ.

ಈ ರೀತಿಯಾಗಿ ಮಹಾಭಾರತದ ಯುದ್ಧದ ಸಮಯದಲ್ಲಿ, ಅರ್ಜುನನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಕರ್ಣನು ವಿಫಲನಾಗುತ್ತಾನೆ. ಪರಶುರಾಮರ ಶಾಪದ ಫಲವಾಗಿ ಅಸ್ತ್ರವನ್ನು ಪ್ರಯೋಗಿಸುವ ಮಂತ್ರವು ಅವನಿಗೆ ಮರೆತು ಹೋಗುತ್ತದೆ. ಹಾಗೆಯೇ ಭೂದೇವಿಯ ಶಾಪದ ಫಲವಾಗಿ ಯುದ್ಧದ ಮಧ್ಯದಲ್ಲಿ ಅವನ ರಥದ ಚಕ್ರ ಮಣ್ಣಿನಲ್ಲಿ ಹೂತು ಹೋಗುತ್ತದೆ. ಬ್ರಾಹ್ಮಣನ ಶಾಪದ ಫಲವಾಗಿ, ಹೂತಿದ್ದ ಚಕ್ರವನ್ನು ತೆಗೆಯುವಲ್ಲಿ ಮಗ್ನನಾದ ನಿಶ್ಯಸ್ತ್ರನಾದ ಕರ್ಣನ ಮೇಲೆ ಅರ್ಜುನನು ಬಾಣ ಪ್ರಯೋಗ ಮಾಡಿ ಕೊಲ್ಲುತ್ತಾನೆ.

ಕರ್ಣನ ಜೀವನದಲ್ಲಿ ಹೋದಲ್ಲೆಲ್ಲ ಎಲ್ಲರೂ ಅವಮಾನ ಮಾಡಿದರು. ಆದರೆ ಅವನು ಯಾವತ್ತೂ ಸೋತವನ ಹಾಗೆ ಕೂಡಲಿಲ್ಲ ಎಲ್ಲವನ್ನು ಧೈರ್ಯವಾಗಿ ಎದರಿಸಿದ. ಹಾಗೆ ತನಗೆ ಸಿಕ್ಕಿರುವುದರಲ್ಲಿ ಎಲ್ಲವನ್ನು ದಾನ ಮಾಡಿ ದಾನ ಶೂರ ಕರ್ಣ ಎಂದು ಲೋಕಪ್ರಸಿದ್ಧನಾದನು. ಹಾಗೆ ಜೀವನದಲ್ಲಿ ಕಷ್ಟ ಇದ್ದೇ‌ ಇರುತ್ತೆ. ಅದನ್ನ ಧೈರ್ಯವಾಗಿ ಎದುರಿಸೋದೇ ನಮ್ಮ ಕೆಲಸ. ಹಾಗಂತ ನಮ್ಮ ಆದರ್ಶಗಳು, ನಮ್ಮ ಮನುಷ್ಯತ್ವ… ಇದನ್ನೆಲ್ಲ ಬಿಡಲೂ ಬಾರದು. ಇದನ್ನೆಲ್ಲ ಬದುಕಿ ತೋರಿಸಿದ ಕರ್ಣ ಎಲ್ಲರಿಗೂ ಆದರ್ಶ.