ಬಂದ್ ಪ್ರಯುಕ್ತ ಕರ್ನಾಟಕದ ಹಲವೆಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಾ ಇದ್ದರೆ, ಇತ್ತ ಮೈಸೂರಿನಲ್ಲಿ ಅಂಗಡಿ ತೆರೆದವರಿಗೆ ಸನ್ಮಾನ..

0
386

ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯೆ ಪ್ರವೇಶೀಸಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ‘ಕರ್ನಾಟಕ ಬಂದ್‌’ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ಹಲವೆಡೆ ಹಲವು ರೀತಿಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಕೆಲವೆಡೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವೆಡೆ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದಾರೆ.

ಆದರೆ ಕರ್ನಾಟಕ ಬಂದ್‌ಗೆ ಮೈಸೂರಿನಲ್ಲಿ ವಿಶಿಷ್ಟ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೈಸೂರಿನಲ್ಲಿ ಬಂದ್‌ ಬೆಂಬಲಿಸದೆ ಅಂಗಡಿ, ಮುಂಗಟ್ಟು ತೆರೆದು ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಕೆಲವು ಸಂಘಟನೆಯ ಕಾರ್ಯಕರ್ತರು ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರಕಾರಗಳ ರಾಜಕೀಯ ಪ್ರೇರಿತ ಬಂದ್ ನಮಗೆ ಬೇಡ ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿ ಜನಪ್ರತಿನಿಧಿಗಳ ಮತ್ತು ಸರಕಾರಗಳ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಅದೇ, ಗದಗನಲ್ಲಿ ಹಾವೇರಿ ಲೋಕಸಭಾ ಸದಸ್ಯ ಶಿವುಕುಮಾರ ಉದಾಸಿ ಅವರ ಕಚೇರಿ ಎದುರು ಚಾಪೆ ಹಾಸಿಕೊಂಡು ಮಲಗಿ ಪ್ರತಿಭಟಿಸಿದರು. ಬಾಗಲಕೋಟದಲ್ಲಿ ಪ್ರಯಾಣಿಕರಂತೆ ಬಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಳಿಗಳ‌‌‌ ಮೇಲೆ ಮಲಗಿ ಪ್ರತಿಭಟಿಸಿದರು. ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಲಿಬಾಲ್ ಆಡುವ ಮೂಲಕ ಯುವಕರು ಬಂದ್ ಬೆಂಬಲಿಸಿದರು.

Images Credit: Public TV