ಮಹದಾಯಿ ಹೋರಾಟಕ್ಕಾಗಿ ಕನ್ನಡ ಪರ ಸಂಘಟನೆಗಳಿಂದ ೨ ದಿನ ರಾಜ್ಯ ಬಂದ್-ಗೆ ಕರೆ ನೀಡಲಾಗಿದೆ!!

0
554

ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಜ.25ರಂದು ಕರ್ನಾಟಕ ಬಂದ್‌ ಮತ್ತು ಫೆ.4 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಧ್ಯಮದವರೊಂಗಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆ ಬಗೆಹರಿಸಲು ಕಳೆದ ಮೂರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಮತ್ತು ರಾಜ್ಯದ ಸಂಸದರಿಗೆ ರೈತರ ಸಮಸ್ಯೆ ಬೇಕಿಲ್ಲ. ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಆಗುವ ತೊಂದರೆಯ ಅರಿವಿಲ್ಲ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಜಾಣ ಕುರುಡನಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯಕ್ಕೆ ಐದು ಬಾರಿ ಭೇಟಿ ನೀಡಿದ ಪ್ರಧಾನಿ ಮೋದಿಯವರು ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಿಲ್ಲ. ಬಹುಶಃ ಭಾರತದ ಭೂಪಟದಲ್ಲಿ ಕರ್ನಾಟಕ ಇದೆ ಎಂಬ ಮಾಹಿತಿ ಇಲ್ಲವೆಂದು ಅವರ ಮೇಲೆ ಕೂಡ ಕಿಡಿ ಹಾರಿದರು. ಇದೆ ಕಾರಣದಿಂದ ಫೆ.5ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಕಳಸಾ – ಬಂಡೂರಿ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಈ ಹೋರಾಟಕ್ಕೆ ರಾಜ್ಯದ ಸುಮಾರು 2500ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮತ್ತು ಈ ಹೋರಾಟದಲ್ಲಿ 10 ಸಾವಿರ ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.