ಬಿಎಸ್​ವೈ ಗೆ ಇಂದು ಕೂಡ ಹೈಕಮಾಂಡ್ ಸಿಗುವುದು ಅನುಮಾನ; ಹಾಗಾದರೆ ಸಚಿವ ಸಂಪುಟ ಯಾವಾಗ.?

0
110

ರಾಜ್ಯದಲ್ಲಿ ಉಪಚುನಾವಣೆಯ ನಂತರ ಸಂಪುಟ ವಿಸ್ತರಣೆ ಕಾದು ಕುಳಿತ್ತಿರುವ ರಾಜ್ಯದ ಜನರಿಗೆ ಬಿಎಸ್​ವೈ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲಕಾರಿ ಆಗಿದ್ದು, ಅದರಂತೆ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರಾದ ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಜೊತೆಗೆ ಚರ್ಚಿಸುವ ಸಲುವಾಗಿ ಬಿ.ಎಸ್. ಯಡಿಯೂರಪ್ಪ ಇಂದು ದೆಹಲಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ದೆಹಲಿ ತಲುಪಲು ಮುನ್ನವೇ ಸಿಎಂ ಯಡಿಯೂರಪ್ಪಗೆ ಶಾಕಿಂಗ್ ನ್ಯೂಸ್ ಕಾದಿದ್ದು ಇಂದು ಹೈಕಮಾಂಡ್ ಭೇಟಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಹೌದು ದೆಹಲಿ ತಲುಪಲು ಮುನ್ನವೇ ಸಿಎಂ ಯಡಿಯೂರಪ್ಪಗೆ ಶಾಕಿಂಗ್ ನ್ಯೂಸ್ ಕಾದಿದ್ದು, ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ರಾತ್ರಿ ಒಂಬತ್ತು ಗಂಟೆಗೆವರೆಗೂ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಮೂರು ಗಂಟೆಯಿಂದ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿರುವ ಗೃಹ ಸಚಿವ ಅಮಿತ್ ಶಾ, 3:30 ರಿಂದ ರಾತ್ರಿ 8:30 ವರೆಗೂ ನಾಲ್ಕು ಕಡೆ ಪ್ರಚಾರ ಮತ್ತು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಯಿಂದ ರಾತ್ರಿ 7:30ವರೆಗೂ ಜೆ.ಪಿ ನಡ್ಡಾ ಮೂರು ಕಡೆ ಪ್ರತ್ಯೇಕ ಪ್ರಚಾರ ಮಾಡಲಿದ್ದು ಬಹಿರಂಗ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಹೈಕಮಾಂಡ್ ರಾತ್ರಿ ಒಂಬತ್ತು ಗಂಟೆಯವರೆಗೂ ಚುನಾವಣಾ ಕಾರ್ಯಗಳಲ್ಲಿ ನಿರತವಾಗಿರುವುದರಿಂದ ಇಂದು ಭೇಟಿ ಅನುಮಾನ ಎನ್ನಲಾಗುತ್ತಿದೆ. ಹೈಕಮಾಂಡ್ ಮನಸ್ಸು ಮಾಡದಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಮಾತುಕತೆ ನಡೆಸಬಹುದು ಆದರೆ ಈ ಸಾಧ್ಯತೆ ವಿರಳ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಹೀಗಾಗಿ ಸಂಪುಟ ವಿಸ್ತರಣೆ ಮಾತುಕತೆ ಇಂದೇ ಫೈನಲ್ ಆಗುತ್ತಾ ಅಥವಾ ನಾಳೆ ಮುಂದೂಡುತ್ತಾ ಅನ್ನೋ ಕುತೂಹಲ ಮೂಡಿಸಿದೆ. ಆದರೆ ಬಿಎಸ್​ವೈ ದೆಹಲಿಗೆ ತೆರಳುವ ಸುದ್ದಿ ತಿಳಿದ ಶಾಸಕರು ಸಿಎಂ ತಮ್ಮ ಮನೆಗೆ ಬರುವುದಕ್ಕೂ ಮುನ್ನವೇ ಸಚಿವ ಸ್ಥಾನ ಆಕಾಂಕ್ಷಿಗಳು ಬಿಎಸ್​ವೈ ಮನೆಗೆ ಬಂದು ಕುಳಿತ್ತಿದ್ದಾರೆ.

ಶಾಸಕ ಡಾ. ಸುಧಾಕರ್, ಮುರುಗೇಶ್ ನಿರಾಣಿ ಹಾಗೂ ಮುನಿರತ್ನ ಸಿಎಂ ಮನೆಗೆ ತೆರಳಿ ಅವರಿಗಾಗಿ ಕಾದು ಕುಳಿತಿದ್ದರು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೂಲಕ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಮುರುಗೇಶ್ ನಿರಾಣಿ, ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಶ್ರೀ ಅವರಿಂದಲೂ ಬಹಿರಂಗ ಹೇಳಿಕೆ ನೀಡಿಸಿದ್ದರು. ಇದರ ವಿರುದ್ಧ ಬಿಎಸ್​ವೈ ಅಸಮಾಧನಗೊಂಡಿರುವ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ಆಗಮಿಸಿರುವ ನಿರಾಣಿ, “ಕ್ಷಮಿಸಿ ಸರ್, ವಚನಾನಂದ ಸ್ವಾಮೀಜಿ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ. ದಯಮಾಡಿ ಅದನ್ನು ಮನಸ್ಸಿನಲ್ಲಿ ಇಟ್ಕೊಂಡು ನನ್ನನ್ನು ಮರೆಯಬೇಡಿ.

ನಾನು ಪಕ್ಷಕ್ಕಾಗಿ ಬಹಳ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ನಾನು ಕೂಡ ಹಿರಿಯ ನಾಯಕನಿದ್ದೇನೆ, ಹೀಗಾಗಿ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ. ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಿ. ಸಮುದಾಯದಲ್ಲೂ ಕೂಡ ನಾನು ಹಿರಿಯ ನಾಯಕನಾಗಿದ್ದೇನೆ. ದಯಮಾಡಿ ನನ್ನನ್ನು ಪರಿಗಣಿಸಿ” ಎಂದು ದುಂಬಾಲು ಬೀಳುವ ಮೂಲಕ ಸಚಿವ ಸ್ಥಾನಕ್ಕೆ ಕೊನೆಯ ಪ್ರಯತ್ನ ನಡೆಸಿದ್ದಾರೆ. ಒಟ್ಟಾರೆಯಾಗಿ ಒಂದು ಕಡೆ ಪಕ್ಷ ಬಿಟ್ಟು ಬಂದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕೋ, ಇಲ್ಲ ಮೂಲ ಪಕ್ಷದವರಿಗೆ ಮಂತ್ರಿ ಸ್ಥಾನ ಕೊಡಬೇಕೋ ಎನ್ನುವುದು ಸದ್ಯಕ್ಕೆ ಬಿಎಸ್​ವೈ ಅವರಿಗೆ ಇರುವ ದೊಡ್ಡ ತಲೆನೋವು ಎಂದು ತಿಳಿದುಬಂದಿದೆ.

Also read: ಇದೇ ಜ.31ರಿಂದ ಎರಡು ದಿನ ಬ್ಯಾಂಕ್‌ ನೌಕರರ ಮುಷ್ಕರ ಸೇರಿ ಮೂರು ದಿನ ಬ್ಯಾಂಕ್ ರಜೆ, ಏನೇ ವ್ಯವಹಾರಗಳಿದ್ದರು ಎಂದೇ ಮಾಡಿಕೊಳ್ಳಿ.!