ವಿದ್ಯಾರ್ಥಿಗಳಿಗೆ ನಕಲು ತಪ್ಪಿಸಲು ಹೊಸ ರೀತಿಯ ಪರೀಕ್ಷೆ ಬರೆಸಿದ ಪಿಯು ಕಾಲೇಜ್; ಈ ವಿಚಿತ್ರ ಪ್ರಯೋಗದ ಚಿತ್ರಗಳು ಭಾರಿ ವೈರಲ್.!

0
207

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವುದು ಸಾಮಾನ್ಯವಾಗಿದೆ. ಅದಕ್ಕೆ ಪರೀಕ್ಷಾ ಅಧಿಕಾರಿಗಳು ಎಷ್ಟೇ ಬಿಗಿಯಾಗಿ ಕಣ್ಗಾವಲಿಟ್ಟು ಸಿಸಿ ಕ್ಯಾಮರ ಇಟ್ಟು ಪರೀಕ್ಷೆ ನಡೆಸಿದರು ಕೂಡ ಕೆಲವರು ಕತರ್ನಾಕ್ ಐಡಿಯಾ ಉಪಯೋಗಿಸಿ ನಕಲು ಮಾಡುತ್ತಾರೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ಇರಿಸುವುದು ಒಂದು ಕಡೆಯಾದರೆ, ಒಂದು ರೂಮ್-ನಲ್ಲಿ ಕಡಿಮೆ ವಿದ್ಯಾರ್ಥಿಗಳಿಗೆ ಕೂರಿಸಿ ಪರೀಕ್ಷೆ ನಡೆಸಿದ್ದು ನಡೆದಿದೆ ಆದರೆ ಹಾವೇರಿ ಕಾಲೇಜಿನಲ್ಲಿ ನಕಲು ತಡೆಯಲು ವಿಚಿತ್ರ ಪ್ರಯೋಗಯೊಂದು ನಡೆದಿದ್ದು, ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್ ಹಾಕಿ ಪರೀಕ್ಷೆ ನಡೆಸಿದ್ದು ಭಾರಿ ವೈರಲ್ ಆಗಿದೆ.

ಹೌದು ವಿದ್ಯಾರ್ಥಿಗಳು ಪರೀಕ್ಷೆ ನಕಲು ಮಾಡುವುದನ್ನು ತಪ್ಪಿಸಲು ಕಾಲೇಜಿನ ಆಡಳಿತ ಮಂಡಗಳು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ರಾಜ್ಯದ ಖಾಸಗಿ ಕಾಲೇಜೊಂದು ಚೀಟಿಂಗ್ ತಪ್ಪಿಸಲು ‘ಡಬ್ಬಾ’ ಐಡಿಯಾ ಮಾಡಿದೆ. ಹಾವೇರಿಯ ಹಾನಗಲ್ಲ ರಸ್ತೆಯಲ್ಲಿರುವ ಭಗತ್ ಪದವಿಪೂರ್ವ ಕಾಲೇಜಿನಲ್ಲಿ ನಕಲು ಮಾಡಬಾರದೆಂದು ಅ.16ರಂದು ನಡೆದ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ವರ್ಷದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೆಲ್ಮೆಟ್’ಗಳಂತೆ ರಟ್ಟಿನ ಬಾಕ್ಸ್ ಗಳನ್ನು ಹಾಕಿಸಿ ಪರೀಕ್ಷೆ ಬರೆಸಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಅಲ್ಲದೆ, ಈ ಬಗ್ಗೆ ಪರ ಹಾಗೂ ವಿರೋಧದ ಕುರಿತು ಚರ್ಚೆಗಳೂ ಆರಂಭವಾಗಿವೆ.

ಇದರ ಮುಖ್ಯ ಉದ್ದೇಶವೇ ವಿದ್ಯಾರ್ಥಿಗಳು ಕಾಪಿ ಮಾಡಬಾರದು ಎಂಬ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್​ ಹಾಕಿಸಿತ್ತು. ಅವರೆಲ್ಲರೂ ಉಸಿರಾಡಲೂ ಕಷ್ಟಪಡುತ್ತ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ ಅಕ್ಕಪಕ್ಕ ನೋಡುತ್ತಾರೆ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಸಿಬ್ಬಂದಿಯೋರ್ವರು ಹೀಗೆ ಉಪಾಯ ಮಾಡಿದ್ದರಂತೆ. ಆದರೆ ಇದು ವಿದ್ಯಾರ್ಥಿಗಳ ಪಾಲಿಗೆ ನರಕವಾಗಿತ್ತು. ಸಾಹಸಪಟ್ಟು ಪ್ರಶ್ನೆ ಪತ್ರಿಕೆ ಓದಿಕೊಂಡು ಬರೆದಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಈ ಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋವನ್ನು ಗಮಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಕೂಡಲೇ ಕಾಲೇಜಿಗೆ ಭೇಟಿ ನೀಡಿದ್ದು, ಕಾಲೇಜು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ರಟ್ಟಿನ ಪೆಟ್ಟಿಗೆಗಳನ್ನು ತೆಗೆಸಿದ್ದಾರೆ. ಪರೀಕ್ಷಾ ಪದ್ಧತಿ, ನಿಯಮ ಮೀರಿ ನಿಮಗೆ ತೋಚಿದಂತೆ ಪರೀಕ್ಷೆ ಮಾಡಲು ಅವಕಾಶವಿಲ್ಲ ಎಂದು ಹೇಳಿರುವ ಅಧಿಕಾರಿಗಳು, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. ಅಲ್ಲದೆ, ಇದೇ ರೀತಿ ಮುಂದುವರೆಸಿದರೆ ಕಾಲೇಜಿಗೆ ನೀಡಿರುವ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದೂ ಕೂಡ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಇದಕ್ಕೆ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಕಲನ್ನು ತಡೆಯಲು ಮಾಡಿದ ಹೊಸ ಉಪಾಯ ಎಂದು ಹೊಗಳಿದ್ದಾರೆ. ಆದರೆ ಕೆಲವು ನಿಯಮಗಳನ್ನು ಮೀರಿ ಕಾಲೇಜು ಮಂಡಳಿ ಮಾಡಿದ ಪ್ರಯೋಗದಿಂದ ನಾವು ಓದಿದ್ದನ್ನು ಮರೆಯುವಂತೆ ಆಗುತ್ತೆ ಎಂದು ಕೆಲವು ವಿದ್ಯಾರ್ಥಿಗಳು ಕೇಳಿದ್ದಾರೆ, ಒಟ್ಟಾರೆಯಾಗಿ ಇದೆಲ್ಲ ನೋಡಿದರೆ ಮುಂದೊಂದು ದಿನ ಪರೀಕ್ಷೆ ಪ್ಯಾಡ್ ರೀತಿ ಹೆಲ್ಮೆಟ್ ಬರುವುದರಲ್ಲಿ ಅನುಮಾನವಿಲ್ಲ ಅನಿಸುತ್ತೆ.