ಇನ್ಮುಂದೆ ಮಕ್ಕಳನ್ನು ನರ್ಸರಿಗೆ ಸೇರಿಸಲು ಚಿಂತೆ ಬೇಡ; ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಶುರುವಾಗಳಿವೆ ನರ್ಸರಿ ಸ್ಕೂಲ್-ಗಳು..

0
538

ಮೇ ಜೂನ್ ತಿಂಗಳು ಬಂದರೆ ಸಾಕು ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರು ಹರಸಾಹಸ ಪಡುತ್ತಾರೆ. ಅದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷದವರೆಗೆ ಡೊನೇಶನ್ ಕಟ್ಟಿ ಬರಿ UKG-LKG ಗೆ ಪ್ರವೇಶವನ್ನು ಪಡೆಯಬೇಕಾಗಿದೆ. ಇವೆಲ್ಲ ಪಜೀತಿ ಪಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ ವೆಂದರೆ ಮಕ್ಕಳು ಓದಿನಲ್ಲಿ ಹಿಂದೆ ಉಳಿಯುತ್ತಾರೆ ಎನ್ನುವ ಭಯವು ಕೂಡ ಇರುತ್ತದೆ. ಅದಕ್ಕಾಗಿ ಪಟ್ಟಣದಿಂದ ಹಿಡಿದು ಹಳ್ಳಿಯ ಪಾಲಕರು ಕೂಡ ಮಕ್ಕಳನ್ನು ಖಾಸಗಿ ಶಿಕ್ಷಣಕ್ಕೆ ಸೇರಿಸಲು ಮುಂದಾಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇದನ್ನು ಅರಿತ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ.

ಏನಿದು ಸರ್ಕಾರದ ಹೊಸ ನ್ಯೂಸ್?

ಹೌದು ಖಾಸಗಿ ಶಾಲೆಗಳತ್ತ ಮುಖ ಮಾಡಿರುವ ಮಕ್ಕಳು ಸರ್ಕಾರಿ ಶಿಕ್ಷಣವನ್ನು ಪಡೆಯಲು ಮುಂದೆಬರುತ್ತಿಲ್ಲ, ಇದರಿಂದ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಗಣನೀಯವಾಗಿ ಕುಶಿಯುತ್ತಿದೆ. ಪಾಲಕರು ಕೂಡ ಕಷ್ಟದಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ವರ್ಷಪೂರ್ತಿ ದುಡಿದು ಸಾಲವನ್ನು ತಿರಿಸುತ್ತಿದ್ದಾರೆ. ಇದೆಲ್ಲವನ್ನು ಅರಿತ ಸರ್ಕಾರ ಈ ವರ್ಷದಿಂದಲೇ ಸರ್ಕಾರಿ ಶಾಲೆಯಲ್ಲಿ ನರ್ಸರಿ ಯನ್ನು ಶುರುಮಾಡಲು ಶಿಕ್ಷಣ ಇಲಾಖೆಗಳಿಗೆ ನಿರ್ದೇಶಿಸಿದೆ. ಇದೆಲ್ಲವೂ ಮೊದಲಿನಿಂದ ಕೇಳಿ ಬರುತ್ತಿರುವ ದೂರು ಆಗಿದ್ದು ಪೂರ್ವ ಪ್ರಾಥಮಿಕ (ಪ್ರಿ ಸ್ಕೂಲ್‌) ತರಗತಿಗಳು ಇಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2019-20ನೇ ಸಾಲಿನಿಂದಲೇ ರಾಜ್ಯದ 276 ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ಸರ್ಕಾರದ ಹೊಸ ಯೋಚನೆಯಿಂದ ಶಾಲೆಗಳನ್ನು ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಗ್ಗೂಡಿಸಿ 2018-19ನೇ ಸಾಲಿನಿಂದ ತಾಲೂಕಿಗೆ ಒಂದರಂತೆ 176 ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ವರ್ಷದಿಂದ ಮತ್ತೆ 100 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಒಟ್ಟಾರೆ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಪೂರ್ವ ಪ್ರಾಥಮಿಕ ತರಗತಿಗಳಿಗೆ ಕನಿಷ್ಠ 3.5 ವರ್ಷ ಮೇಲ್ಪಟ್ಟವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಪ್ರತಿ ಶಾಲೆಯಲ್ಲಿ 20ರಿಂದ 30 ಮಕ್ಕಳನ್ನು ಮಾತ್ರ ದಾಖಲಿಸಿಕೊಂಡು ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರ ವರೆಗೆ ತರಗತಿ ನಡೆಸುವಂತೆ ತಿಳಿಸಿದೆ.

ಈ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಹೇಗೆ?

ಯುನಿಸೆಫ್‌, ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ನಿಯೋಜಿಸಿರುವ ಸಮಿತಿಯ ಶಿಫಾರಸಿನಂತೆ ಪ್ರಿ ಸ್ಕೂಲ್‌ಗೆ ಬಳಸಿಕೊಳ್ಳಬೇಕಾದ ಪಠ್ಯಕ್ರಮ, ಪಠ್ಯಪುಸ್ತಕ, ಬೋಧನೋಪಾಯಗಳನ್ನು ತಯಾರಿಸಿ ಶಿಕ್ಷಕರಿಗೆ ತರಬೇತಿ ನೀಡಬೇಕು ಎಂದೂ ಸೂಚಿಸಲಾಗಿದ್ದು, ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕ ಹಾಗೂ ಒಬ್ಬ ಆಯಾಗಳನ್ನು ಎಸ್‌ಡಿಎಂಸಿ ವತಿಯಿಂದಲೇ 10 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು. ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಅಡಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ತಿಳಿಸಿದ್ದು, ನೇಮಕ ಮಾಡಿಕೊಂಡ ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರು. ಮತ್ತು ಆಯಾಗಳಿಗೆ 5,000 ರು. ಸಂಭಾವನೆ ನೀಡುವಂತೆ ಸೂಚನೆ ನೀಡಿದೆ.

ಮಕ್ಕಳಿಗೆ ಏನೆಲ್ಲಾ ಸೌಕರ್ಯವಿದೆ?

ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಅಂಗನವಾಡಿಗಳಂತೆಯೇ ಹಾಲು, ಉಪಾಹಾರ, ಊಟವನ್ನು ಮಧ್ಯಾಹ್ನ ಉಪಾಹಾರ ಯೋಜನೆ ವತಿಯಿಂದ ಸರಬರಾಜು ಮಾಡಲಾಗುತ್ತದೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಶಾಲೆಯ ಪ್ರಾಂಶುಪಾಲರು ಚುಚ್ಚುಮದ್ದುಗಳನ್ನು ಹಾಕಿಸಬೇಕು. ಶಾಲಾ ನಿರ್ಮಾಣಕ್ಕೆ ಅವಶ್ಯವಾದ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕವಾಗಿಟ್ಟಿರುವ ಹಣದಿಂದಲೇ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.