ಕರ್ನಾಟಕದ ಹಳದಿ-ಕೆಂಪು ಬಾವುಟವನ್ನು ಕರ್ನಾಟಕ ಸರ್ಕಾರ ಬದಲಾಯಿಸಲು ಪಿತೂರಿ ನಡೆಸಿದೆ: ವಾಟಾಳ್

0
372

ಬೆಂಗಳೂರು: ಹಳದಿ-ಕೆಂಪು ಬಣ್ಣದ ಕರ್ನಾಟಕ ಬಾವುಟವನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಅಲ್ಲದೇ ಈಗಿರುವ ಧ್ವಜವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ನಾಡಧ್ವಜವಾಗಿ ಮುಂದುವರಿಸಬೇಕೆಂದು ಕನ್ನಡ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್, ನಾಡಧ್ವಜ ಮಾನ್ಯತೆ ನೆಪದಲ್ಲಿ ಈಗಿರುವ ಧ್ವಜವನ್ನು ವಿನ್ಯಾಸಗೊಳಿಸುವ ಕ್ರಮದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಆಂದೋಲನ ಮಾಡಬೇಕಾಗುತ್ತದೆ ಎಂದು ಗುಡುಗಿದರು. ಹಾಲಿ ಇರುವ ಧ್ವಜವನ್ನು ಬದಲಿಸಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಳದಿ-ಕೆಂಪು ಬಣ್ಣದ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ. ಕನ್ನಡಿಗರ ಶಕ್ತಿಯಾಗಿರುವ ಧ್ವಜಕ್ಕೆ ಮಾನ್ಯತೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಹಾಗೆಂದು ಯಾವುದೇ ಕಾರಣಕ್ಕೂ ಬಾವುಟ ವಿನ್ಯಾಸ ಬದಲಾಯಿಸಬಾರದು ಎಂದರು.

ಕಳೆದ ಐದು ದಶಕಗಳ ಹಿಂದೆ ನಾನು ಮತ್ತು ಕನ್ನಡ ಹೋರಾಟಗಾರರಾದ ರಾಮಮೂರ್ತಿ ಅವರು ಈ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದೇವೆ. ಅದಕ್ಕೊಂದು ವಿಶಿಷ್ಟ ಶಕ್ತಿ ಇದೆ. ಇಡೀ ರಾಜ್ಯದ ಜನರು ಆ ಬಾವುಟದ ಬಣ್ಣ ಮತ್ತು ವಿನ್ಯಾಸವನ್ನು ಒಪ್ಪಿದ್ದಾರೆ. ಜನರೇ ನ್ಯಾಯಾಲಯವಿದ್ದಂತೆ. ಜನರ ತೀರ್ಪು ಅಂತಿಮವಾಗಿರುವಾಗ ರಾಜ್ಯ ಸರ್ಕಾರ ಧ್ವಜ ವಿನ್ಯಾಸಕ್ಕೆ ಸಮಿತಿ ನೇಮಿಸಿಿರುವುದು ತಪ್ಪು. ಈ ಸಮಿತಿಯನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿದರು. ಇನ್ನು ಇದೇ ವೇಳೆ ಕಳಸಾ ಬಂಡೂರಿ, ಮಹದಾಯಿ, ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾಳೆ ರಾಮನಗರದಲ್ಲಿ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಮಹದಾಯಿ ಯೋಜನೆಯಲ್ಲಿ ರಾಜಕೀಯ ಪಕ್ಷಗಳು ಕೆಸರೆರಚಾಟ ನಡೆಸುತ್ತಿವೆ. ಪಕ್ಷ ರಾಜಕಾರಣದಿಂದ ಅಮಾಯಕ ಜನರಿಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಪ್ರಾರಂಭಿಸದೆ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಈ ಎಲ್ಲಾ ನಿರ್ಲಕ್ಷ್ಯಗಳನ್ನು ನೋಡಿಕೊಂಡು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.