ಪ್ರವಾಹದಲ್ಲಿರುವ ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾ ಮೂರ್ತಿ, ನಟ ಯಶ್!!

0
325

ರಾಜ್ಯದಲ್ಲಿ ಇಂದು ಮುಂದುವರೆದ ಮಳೆಯಿಂದ ಉತ್ತರ ಕರ್ನಾಟಕ ಮತ್ತಷ್ಟು ಪ್ರವಾಹಕ್ಕೆ ಸಿಲುಕಲಿದೆ. ಜನರು ತಮ್ಮ ಊರು ಮನೆ ಬಿಟ್ಟು ಗಜ್ಜಿ ಕೇಂದ್ರಗಳಿಗೆ ಸೇರಿದ್ದು, ಸಹಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಪ್ರವಾಹಕ್ಕೆ ಜನರು ಸಹಾಯ ಮಾಡುವಷ್ಟು ಉತ್ತರ ಕರ್ನಾಟಕಕ್ಕೆ ಮುಂದೆ ಬಂದು ಸಹಾಯ ಮಾಡುತ್ತಿಲ್ಲ ಎನ್ನುವುದು ಕೇಳಿಬರುತ್ತಿತ್ತು. ಅದಕ್ಕೆ ಹಲವು ನಟರು, ಉದ್ಯಮಿಗಳು ಸಂಘ ಸಂಸ್ಥೆಗಳು ಸಹಾಯ ಮಾಡಲು ಮುಂದಾಗಿದ್ದು. ಪ್ರವಾಹ ಪರಿಸ್ಥಿತಿಗೆ ಮಿಡಿದ ‘ಮಾತೃ ಹೃದಯಿ’ ಸುಧಾ ಮೂರ್ತಿ ಸಿಎಂ ಪರಿಹಾರ ನಿಧಿಗೆ 10 ಕೋಟಿ ದೇಣಿಗೆ ನೀಡಿದ್ದಾರೆ.

source: livemint.com

ಹೌದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರು ಸಿಎಂ ಪರಿಹಾರ ನಿಧಿಗೆ 10 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದು ಇದಕ್ಕೆ ಸ್ಪಂಧಿಸಿರುವ ಸುಧಾ ಮೂರ್ತಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಮೂಲಭೂತ ವಸ್ತುಗಳ ಅಗತ್ಯತೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು “ಯಶೋಮಾರ್ಗ” ತಂಡದ ಮೂಲಕ ದಿನಬಳಕೆ ವಸ್ತುಗಳನ್ನು ಕಳುಹಿಸಿದ್ದಾರೆ.

ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಯಶೋಮಾರ್ಗದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. ಲಾರಿಯಲ್ಲಿ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ತಂಡ ಕಳುಹಿಸಿದೆ. ಈ ಮೂಲಕ ಯಶ್ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಇತ್ತ ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ, “ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ನಿದೇರ್ಶಕ ಪವನ್ ಒಡೆಯರ್ ಹಾಗೂ ರೇಮೊ ಚಿತ್ರ ತಂಡ ಕೂಡ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಜನರಿಗೆ ಬೇಕಾಗುವ ಆಹಾರ, ಬಟ್ಟೆಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ “ನೆರೆ ಹಾವಳಿಯಲ್ಲಿ ಸಿಕ್ಕಿರುವವರ ರಕ್ಷಣೆಗೆ ಅಧಿಕಾರಿಗಳು ಎಲ್ಲಾ ಬಗೆಯ ಪ್ರಯತ್ನ ನಡೆಸುತ್ತಾರೆ. ಅಗತ್ಯವಾದಲ್ಲಿ ಇನ್ನು ಮೂರು ದಿನ ಕಾಲ ನಾನಿಲ್ಲಿಯೇ ವಾಸ್ತವ್ಯ ಹೂಡಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. “ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ರಸ್ತೆ ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಪಿ.ಎಸ್.ಐ ಲಟ್ಟೆ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು.” ಎಂದು ಅವರು ಹೇಳಿದ್ದಾರೆ.