ದುಬಾರಿ ರೋಲ್ಸ್ ರಾಯ್ ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದ ಎಂಟಿಬಿ ನಾಗರಾಜ್ ಅವರ ಆಸ್ತಿ 18 ತಿಂಗಳಲ್ಲಿ 185 ಕೋಟಿ ರೂ ಹೆಚ್ಚಳ.!

0
232

ಕರ್ನಾಟಕದ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ ಕೇವಲ 18 ತಿಂಗಳ ಅವಧಿಯಲ್ಲಿ 185.7 ಕೋಟಿ ರೂ.ಗಳಿಂದ ಶ್ರೀಮಂತರಾಗಿದ್ದಾರೆ ಎಂದು ಅವರ ಇತ್ತೀಚಿನ ಅಫಿಡವಿಟ್ ಹೇಳುತ್ತೆ. ಎಂಟಿಬಿ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದು, ಜುಲೈನಲ್ಲಿ ಅವರ ಪಕ್ಷಾಂತರವು H.D ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತು, ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ದಾರಿ ಮಾಡಿಕೊಟ್ಟಿತು. ಅದರಂತೆ ಈಗ ನಡೆಯುತ್ತಿರುವ ಉಪಚುನಾವಣೆಗೆ ಬಂಡಾಯ ಶಾಸಕ ಎಂಟಿಬಿ ನಾಗರಾಜ್ ನೀಡಿದ ಅಫಿಡವಿಟ್‌ನಲ್ಲಿ 104.53 ಕೋಟಿ ರೂ.ನಷ್ಟು ಹೆಚ್ಚಳವಾಗಿರುವುದು ತಿಳಿಯುತ್ತದೆ.

ಆಸ್ತಿ 18 ತಿಂಗಳಲ್ಲಿ 185 ಕೋಟಿ ರೂ ಹೆಚ್ಚಳ?

ಹೌದು ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಒಟ್ಟು 1,195 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿದ್ದ ಚರಾಸ್ತಿ, ಸ್ಥಿರಾಸ್ತಿಯನ್ನು ಘೋಷಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಎಂಟಿಬಿ ನಾಗರಾಜ್, 419 ಕೋಟಿ 28 ಲಕ್ಷ 63 ಸಾವಿರದ 731 ರೂ. ಮೌಲ್ಯದ ಚರಾಸ್ತಿ, 2.54 ಕೋಟಿ ರೂ. ಮೌಲ್ಯದ ಕಾರುಗಳು ಸೇರಿದಂತೆ ಒಟ್ಟು 1,195 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಎಂಟಿಬಿ ನಾಗರಾಜ್ ಅವರ ಆಸ್ತಿ ಮೌಲ್ಯದಲ್ಲಿ 180 ಕೋಟಿ ರೂ. ಏರಿಕೆಯಾಗಿದೆ.

ಎಂಟಿಬಿ, ಇತ್ತೀಚೆಗಷ್ಟೇ ಬಲು ದುಬಾರಿ ರೋಲ್ಸ್ ರಾಯ್ ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಬಿಜೆಪಿ ಬಾವುಟ ಹಿಡಿಯುವ ಮೂಲಕ ಕಮಲ ಪಾಳೆಯಕ್ಕೆ ಜಿಗಿದಿರುವ ಎಂಟಿಬಿ, ಉಪ ಚುನಾವಣೆಯಲ್ಲಿ ಹೊಸಕೋಟೆಯ ಕಮಲ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಅವರ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದೂ ಕಳೆದ ವಿಧಾನಸಭೆ ಚುನಾವಣೆ ನಡೆದ ಈವರೆಗಿನ 18 ತಿಂಗಳಿನಲ್ಲಿ ಎನ್ನುವುದು ಗಮನಾರ್ಹ.

ಶೇ 15.5ರಷ್ಟು ಸಂಪತ್ತು ಏರಿಕೆ

ಎಂಟಿಬಿ ಮತ್ತು ಅವರ ಪತ್ನಿ ಶಾಂತಕುಮಾರಿ ಅವರ ಒಟ್ಟು ಆಸ್ತಿ 1,201.50 ಕೋಟಿ ರೂ. ಎನ್ನುತ್ತದೆ ಇತ್ತೀಚಿನ ಅಫಿಡವಿಟ್. ಅವರು 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‍ನಲ್ಲಿ 1,015 ಕೋಟಿ ಘೋಷಣೆಗೊಂಡಿದ್ದರು. ಎಂಟಿಬಿ ನಾಗರಾಜ್ ಹೆಸರಿನಲ್ಲಿ ಚರಾಸ್ತಿ 314 ಕೋಟಿ 75 ಲಕ್ಷದ 54 ಸಾವಿರದ 785 ರೂ., ಸ್ಥಿರಾಸ್ತಿ 394 ಕೋಟಿ 63 ಲಕ್ಷ 53 ಸಾವಿರದ 309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27 ಕೋಟಿ 70 ಲಕ್ಷದ 31 ಸಾವಿರದ 565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. ಎಂಟಿಬಿ ನಾಗರಾಜ್ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ.

ಎಂಟಿಬಿ ನಾಗರಾಜ್ ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 122 ಕೋಟಿ 40 ಲಕ್ಷದ 9 ಸಾವಿರದ 258 ರೂ. ಚರಾಸ್ತಿ, 184 ಕೋಟಿ 1 ಲಕ್ಷದ 12 ಸಾವಿರ ರೂ. ಸ್ಥಿರಾಸ್ತಿ ಹಾಗೂ ಅವರ ವಾರ್ಷಿಕ ಆದಾಯ 52 ಕೋಟಿ ರೂ. ಸೇರಿದಂತೆ 25 ಲಕ್ಷ ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. 2013ರ ಚುನಾವಣೆ ವೇಳೆ 470 ಕೋಟಿ 13 ಲಕ್ಷದ 52 ಸಾವಿರದ 248 ರೂ. ಆಸ್ತಿಯನ್ನು ಎಂಟಿಬಿ ನಾಗರಾಜ್ ಘೋಷಿಸಿಕೊಂಡಿದ್ದರು. ಈಗ ತೋರಿಸಿದ ಅಸ್ತಿ ವಿವರ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಪರವಾಗಿ ಗೆಲ್ಲುತಾರೋ ಇಲ್ಲೋ ಕಾದು ನೋಡಬೇಕಿದೆ.

Also read: ರಾಜ್ಯದಲ್ಲಿ ರಂಗೇರುತ್ತಿರುವ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೈ ತಪ್ಪಿದ ಟಿಕೆಟ್.!