ಬಿಜೆಪಿ ಸೇರಿದ ಕರ್ನಾಟಕ ಸಿಗಂ: ಅಣ್ಣಾಮಲೈಗೆ ರಾಜಕೀಯ ಮುಖಂಡರ ಶುಭಹಾರೈಕೆ

0
137

ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜಕೀಯ ಸೇರುತ್ತಾರೆನ್ನುವ ಊಹಾಪೋಹಕ್ಕೆ ಕಡೆಗೂ ತೆರೆ ಬಿದ್ದಿದೆ. ಕರ್ನಾಟಕದ ಸಿಗಂ ಎಂದೇ ಹೆಸರಾಗಿದ ದಕ್ಷ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಸೇರಿದಂತೆ ಕೆಲವು ಗಣ್ಯರ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವುದರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಮುಂದಿನ ವರ್ಷದ 2021ರ ಮಧ್ಯಭಾಗದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಪ್ರಮುಖ ತಾರಾ ಪ್ರಚಾರಕರಾಗಿ ಪಕ್ಷವನ್ನು ಅಣ್ಣಾಮಲೈ ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಐಪಿಎಸ್ ಅಕಾರಿಯಾಗಿದ್ದ ವೇಳೆ ಅವರ ದಕ್ಷತೆ, ಪ್ರಾಮಾಣಿಕತೆ, ಸಮಾಜದ ಬಗ್ಗೆ ಇಟ್ಟುಕೊಂಡಿರುವ ಕಳಕಳಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಸೇರಿದಂತೆ ಅಣ್ಣಾಮಲೈ ಅವರಲ್ಲಿದ್ದ ವಿಶೇಷ ಗುಣಗಳನ್ನು ಮೆಚ್ಚಿಯೇ ಮೋದಿ ಅವರು ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟಿದ್ದರು. ಕರ್ನಾಟಕದ ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದರು. ಪ್ರಮುಖವಾಗಿ ಮಟ್ಕಾ, ಜೂಜು, ಅಕ್ರಮ ಮದ್ಯಕ್ಕೆ ಕಡಿವಾಣ, ಬಾಲ್ಯ ವಿವಾಹ ತಡೆಗಟ್ಟಿದ್ದು, ಜನರನ್ನು ಜಾಗೃತಿಗೊಳಿಸುವುದು ಸೇರಿದಂತೆ ಇವರ ಕೆಲವು ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಹೀಗಾಗಿಯೇ ಅಣ್ಣಾಮಲೈ ಅವರನ್ನು ಅಭಿಮಾನದಿಂದ ಜನರು ಕರ್ನಾಟಕದ ಸಿಂಗಮ್ ಎಂದು ಕರೆಯುತ್ತಿದ್ದರು. ಬೆಂಗಳೂರಿನ ದಕ್ಷಿಣ ವಲಯದ ಡಿಸಿಪಿ ಆಗಿದ್ದ ವೇಳೆಯೇ 2019, ಮೇ 19ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಸ್ವಯಂ ನಿವೃತ್ತಿ ಪಡೆದಿದ್ದರು. ಕರ್ನಾಟಕದಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೂ ಅಣ್ಣಾಮಲೈ ರಾಜಕೀಯ ಸೇರ್ಪಡೆ ಕುರಿತಂತೆ ನಾನಾ ವದಂತಿಗಳು ಕೇಳಿಬಂದಿದ್ದವು.

ಕರ್ನಾಟಕ ಕೇಡರ್ ನಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಾ ಮಲೈ ಅನಿರೀಕ್ಷಿತವಾಗಿ ತಮ್ಮ ಇಲಾಖೆ ಸೇವೆಗೆ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಸಮಾಜ ಸೇವೆ ಮತ್ತು ಕುಟುಂಬಕ್ಕೆ ಸಮಯ ಮೀಸಲಿಡುವ ಸಲುವಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ವರ್ಷ ಉರುಳಿದ ಬೆನ್ನಲ್ಲೇ ಸಮಾಜ ಸೇವೆಗೆ ರಾಜಕೀಯ ಸೂಕ್ಷ ಎಂದು ಅರಿತುಕೊಂಡ ಅಣ್ಣಾಮಲೈ ಬಿಜೆಪಿ ಪಕ್ಷ ಸೇರುವ ನಿರ್ಧಾರ ಮಾಡಿಕೊಂಡರು. ಈ ಸಲುವಾಗಿ ತಮಿಳುನಾಡನ್ನು ಕಾರ್ಯಕ್ಷೇತ್ರವನ್ನಾಗಿಸಕೊಳ್ಳಲು ಅಣ್ಣಾಮಲೈ ನಿರ್ಧರಿಸಿದ್ದಾರೆ. ಇತ್ತ ಪ್ರಾದೇಶಿಕ ಪಕ್ಷದ ಹಿಡಿತದಲ್ಲಿರುವ ತಮಿಳುನಾಡಿನ ರಾಜಕೀಯದಲ್ಲಿ ಬಿಜೆಪಿ ಬಲಪಡಿಸುವ ಜವಾಬ್ಧಾರಿಯನ್ನು ಅಣ್ಣಮಲೈಗೆ ಕೇಸರಿ ಪಡೆ ವರಿಷ್ಠರು ನೀಡುವುದು ಪಕ್ಕಾ ಆಗಿದೆ.

ಪೊಲೀಸ್ ಅಧಿಕಾರಿಯಾಗಿ ಜನಮೆಚ್ಚುವ ಕೆಲಸ ಮಾಡಿದ್ದ ಅಣ್ಣಾಮಲೈ ರಾಜಕೀಯ ಸೇರಿದ ಮೇಲೂ ಅದೇ ಮಾದರಿ ಜನಾನುರಾಗಿ ಕೆಲಸ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ. ಅಭಿಮಾನಿಗಳಂತೆ ರಾಜ್ಯದ ಕೆಲ ರಾಜಕೀಯ ನಾಯಕರುಗಳೂ ಅಣ್ಣಮಲೈ ಹೊಸ ಹಾದಿಗೆ ಶುಭಕೋರಿದ್ದಾರೆ. ಸಚಿವ ಸುಧಾಕರ್ ಮತ್ತು ಸಿಟಿ ರವಿ, ಅಣ್ಣಾಮಲೈ ಅವರ ಪಕ್ಷ ಸೇರ್ಪಡೆಯಿಂದ ನಮಗೆ ಇನ್ನಷ್ಟು ಬಲ ಬಂದಿದೆ. ಅಣ್ಣಾಮಲೈ ಅವರಿಗೆ ಶುಭಾಷಗಳು ಎಂದು ಟ್ವೀಟ್ ಮಾಡಿ ನಿವೃತ್ತ ಅಧಿಕಾರಿಗೆ ಶುಭ ಕೋರಿದ್ದಾರೆ.