ರಾಜ್ಯದಲ್ಲಿ ಬಹುದಿನಗಳಿಂದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರದ ಹೊಣೆಯನ್ನು ಹೊತ್ತ ಜನ ಮೆಚ್ಚಿದ ಸ್ಪೀಕರ್ ರಮೇಶ್ ಕುಮಾರ್ ಇಂದು ರಾಜಿನಾಮೆ ನೀಡಿದ್ದಾರೆ. ನಿನ್ನೆ ತಾನೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿರುವ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಿ, ಬಹುಮತ ಸಾಬೀತುಪಡಿಸಿದ್ದು. ಇಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಧನ ವಿಧೇಯಕಕ್ಕೆ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ ಹಾಗೇ, ಇದೇ ಸದನದಲ್ಲಿ 14 ತಿಂಗಳು ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿದ್ದ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ರಮೇಶ್ ಕುಮಾರ್ ಪಕ್ಷದ ಹಿರಿಯರ ಮಾತಿನಂತೆ ಸ್ಪೀಕರ್ ಆಗಿ ಆಯ್ಕೆಯಾದೆ. ನಾನು ಯಾರನ್ನು ಕೇಳಲಿಲ್ಲ, ಪಕ್ಷದ ವರಿಷ್ಠರ ಸಲಹೆಯಂತೆ ಈ ಸ್ಥಾನವನ್ನು ಅಲಂಕರಿಸಿದೆ. ಇದೂವರೆಗೂ ಈ ಸ್ಥಾನದ ಗೌರವ ಕಡಿಮೆಯಾಗದಂತೆ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲ ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಮತ್ತು ಮಾಧ್ಯಮಗಳಿಗೆ ಧನ್ಯವಾದಗಳು ದಯವಿಟ್ಟು ಯಾರು ವೈಯಕ್ತಿಕ ವಿಚಾರಗಳನ್ನು ಕೆದಕಬೇಡಿ. ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರ ದೂರಿನ ಅನ್ವಯ ಸಂವಿಧಾನದ ಪ್ರಕಾರವೇ 17 ಶಾಸಕರ ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೇನೆ. ಯಾವುದೇ ಒತ್ತಡ, ಪ್ರಚೋದನೆಗೆ ಒಳಗಾಗದೇ ಆದೇಶವನ್ನು ಪ್ರಕಟಿಸಿದ್ದೇನೆ ಎಂದು ಸದನದಿಂದ ಹೊರನಡೆದರು.
ವಿಶ್ವಾಸ ಮತ ಗೆದ್ದ ಬಿ.ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತಕ್ಕೆ ಜಯ ದೊರಕಿದೆ. ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. 105 ಶಾಸಕರು ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಕರ್ನಾಟಕದ ಆಡಳಿತ ಮಾಡಲು ಸಿದ್ದವಾಗಿದೆ. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸಾಧನೆಗಳು ಮಾತನಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು ಎಂದರು. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದೇನೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸರ್ಕಾರಕ್ಕೆ ವಿರೋಧ ಪಕ್ಷಗಳ ಸಹ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು. ನನ್ನನ್ನು ವಿರೋಧಿಸಿದರೂ ನಾನು ದ್ವೇಷ ಮಾಡುವುದಿಲ್ಲ ಎಂದು ತಿಳಿಸಿದರು.
Also read: ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮಾನತ್ತು..
ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ಆಗಿದ್ದು 17 ಮಂದಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. 105 ಶಾಸಕರ ಬೆಂಬಲ ಹೊಂದಿದ್ದರಿಂದ ಬಿಎಸ್ವೈ ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಧ್ವನಿ ಮತದ ಮೂಲಕ ವಿಶ್ವಾಸಮತ ಪ್ರಸ್ತಾವನೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಿದರು. ವಿಶ್ವಾಸಮತ ಗೆದ್ದ ನಂತರ ಮಹತ್ವದ ಧನ ವಿನಿಯೋಗ ವಿಧೇಯಕವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.