ರಾಜ್ಯದ ಭಿಕರ ಬರಗಾಲದ ಹೊತ್ತಲ್ಲಿ ಸ್ಪೀಕರ್ ಕೊಠಡಿ ನವೀಕರಣ!

0
533

ಬೆಂಗಳೂರು:ರಾಜ್ಯದಲ್ಲಿ ಭಿಕರ ಬರಗಾಲ ಇರುವಾಗ 35ಲಕ್ಷರೂ. ವೆಚ್ಚದಲ್ಲಿ ಸ್ಪೀಕರ್ ಕೊಠಡಿ ನವೀಕರಣಮಾಡಲಾಗುತ್ತಿದೆ. ರಾಜ್ಯ ಸತತ ಮೂರನೇ ವರ್ಷ ಭೀಕರ ಬರದಿಂದ ತತ್ತರಿಸುತ್ತಿರುವ ಸಂದರ್ಭದಲ್ಲೇ ಇಂಥದ್ದೊಂದು ಅದ್ದೂರಿ, ಅತ್ಯಾಧುನಿಕ ಸೌಲಭ್ಯ ಗಳನ್ನೊಳಗೊಂಡ ಕಚೇರಿಯೊಂದು ಶೀಘ್ರದಲ್ಲೇ ಆಡಳಿತದ ಶಕ್ತಿಕೇಂದ್ರವಾದ ವಿಧಾನಸೌಧದ ಮೊದಲನೇ ಮಹಡಿಯಲ್ಲಿ ನಿರ್ವಣವಾಗಲಿದೆ.

ವಿಧಾನಸಭೆ  ಅಧ್ಯಕ್ಷ ಕೆ.ಬಿ. ಕೋಳಿವಾಡ ತಮ್ಮ ಅಧಿಕೃತ ಕೊಠಡಿ ಸ್ಥಳಾಂತರಿಸುತ್ತಿದ್ದು, ಲೋಕೋಪಯೋಗಿ ಇಲಾಖೆ ಅನುಮತಿ ಪಡೆಯದೆ ನವೀಕರಣ ಕಾರ್ಯ ನಡೆಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

‘ನಮ್ಮ ಗಮನಕ್ಕೆ ಬಾರದೆ ಕೊಠಡಿ ನವೀಕರಣದ ಟೆಂಡರ್‌ ಕರೆದು ಕಾಮಗಾರಿ ಆರಂಭ ಮಾಡಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ವಿಭಾಗದಿಂದ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಆ ಪತ್ರ ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲುಪಿದೆ.

ಕೊಠಡಿ ನವೀಕರಣಕ್ಕೆ ₹ 75 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. 2016ರ ಡಿಸೆಂಬರ್‌ ಅಂತ್ಯದಲ್ಲಿ ಟೆಂಡರ್‌ ಕರೆಯಲಾಗಿತ್ತು. ಆರ್‌.ಕೆ. ಇಂಡಸ್ಟ್ರೀಸ್‌ ಎಂಬ ಖಾಸಗಿ ಸಂಸ್ಥೆಗೆ ಟೆಂಡರ್‌ ಕೊಡಲಾಗಿದೆ.

ಗೋಡೆಗಳಿಗೆ ವುಡ್‌ವರ್ಕ್‌, ನೆಲಕ್ಕೆ ಟೈಲ್ಸ್‌, ಎಲ್‌ಇಡಿ ವಿದ್ಯುದ್ದೀಪಗಳನ್ನು ಅಳವಡಿಸುವುದಲ್ಲದೆ, ಹೊಸದಾದ ಟೇಬಲ್‌, ಸೋಫಾ ಮತ್ತು ಕುರ್ಚಿಗಳನ್ನು ಹಾಕಲು ಉದ್ದೇಶಿಸಲಾಗಿದೆ. ಇಡೀ ಕೊಠಡಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಲಿದೆ.

ಲೋಕೋಪಯೋಗಿ ಇಲಾಖೆಗೆ ಮಾಹಿತಿ ಇಲ್ಲ: ವಿಧಾನಸೌಧದ ಮೊದಲ ಮಹಡಿ ಮತ್ತು ನೆಲಮಹಡಿಯ ಒಂದು ಭಾಗದ ಹಕ್ಕನ್ನು ತಮಗೆ ಬಿಟ್ಟುಕೊಡಬೇಕು ಎಂದು ಸ್ಪೀಕರ್‌ ಕೋಳಿವಾಡ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಮಾಲೀಕತ್ವ ವರ್ಗಾವಣೆಗೆ ಲೋಕೋಪಯೋಗಿ ಇಲಾಖೆಯಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ವಿಷಯ ಇತ್ಯರ್ಥವಾಗುವ ಮೊದಲೇ ವಿಧಾನಸಭೆ ಸಚಿವಾಲಯವೇ ನೇರವಾಗಿ ನವೀಕರಣಕ್ಕೆ ಟೆಂಡರ್‌ ಕರೆದು, ಅಂತಿಮಗೊಳಿಸಿದೆ ಎಂಬ ಟೀಕೆಗಳು ಕೇಳಿಬಂದಿವೆ.

ಹೊಸ ಕೊಠಡಿಗೆ ಪ್ರಮುಖವಾಗಿ ಆಂಟಿ ಚೇಂಬರ್ನಲ್ಲಿ ಡಬಲ್ ಮಂಚ ಇರಲಿದ್ದು ಅದಕ್ಕಾಗಿಯೇ 1.75 ಲಕ್ಷ ರೂ. ವೆಚ್ಚ ಮಾಡಲಾಗುತ್ತದೆ. ಅದೇ ರೀತಿಯಲ್ಲಿ 3.75 ಲಕ್ಷ ರೂ.ಗಳ ಮೀಟಿಂಗ್ ಟೇಬಲ್, ಅದಕ್ಕೆ 1 ಲಕ್ಷ ರೂ. ವೆಚ್ಚದ ಗ್ಲಾಸ್, ಮೂರು ಆಸನದ ಲೆದರ್ ಸೋಫಾಗೆ 4 ಲಕ್ಷ ರೂ, ಒಂದು ಆಸನದ ಲೆದರ್ ಕುರ್ಚಿಗೆ 1.5 ಲಕ್ಷ ರೂ., ಒಳಾಂಗಣ ಅಲಂಕಾರಕ್ಕೆ 5 ಲಕ್ಷ ರೂ. ವ್ಯಯಿಸಲಾಗುತ್ತದೆ. ವಿಧಾನಸಭೆಯ ಸಭಾಂಗಣದ ಬಳಿಯಲ್ಲಿಯೇ ಸಭಾಧ್ಯಕ್ಷರ ಚಹ ಕೊಠಡಿಯೂ ಒಂದಿದೆ. ಅಲ್ಲಿ ಸಭೆಗಳನ್ನು ನಡೆಸಲು ಅವಕಾಶಗಳಿರುವಾಗ ದೊಡ್ಡ ಕೊಠಡಿಯ ಅಗತ್ಯವಾದರೂ ಏನಿದೆ ಎಂಬುದೇ ಸದ್ಯ ಮೂಡಿರುವ ಯಕ್ಷಪ್ರಶ್ನೆ.