ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್: ಅಭಿಮನ್ಯು ಸಾರಥ್ಯದಲ್ಲಿ ಜಂಬೂ ಸವಾರಿ

0
113

ಕರೋನಾ ಮಹಾಮಾರಿಯಿಂದಾಗಿ ಈ ಬಾರಿಯ ದಸರಾ ಮಹೋತ್ಸವ ನಿಂತು ಹೋಗಲಿದೆ. ಇತಿಹಾಸದ ಪುಟದಲ್ಲಿ ಕರೋನಾ ಕರಿನೆರಳು ಬೀಳುವ ಮೂಲಕ ನಾಡಹಬ್ಬ ಈ ಬಾರಿ ಕಮರಿ ಹೋಗುತ್ತದೆ ಎಂದೆಲ್ಲಾ ಭಾವಿಸಲಾಗಿತ್ತು. ಆದರೆ, ಅದೆಲ್ಲಾ ಸುಳ್ಳಾಗಿ, ನಾಡಹಬ್ಬಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಅಂತೂ ಇಂತೂ ಐತಿಹ್ಯ ನಾಡಹಬ್ಬಕ್ಕೆ ಶುಭ ಮುಹೂರ್ತ ಫಿಕ್ಸ್ ಆಯ್ತು. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ 2 ರಂದು 12:18ನಿಮಿಷಕ್ಕೆ ಗಜಪಯಣ ಆರಂಭವಾಗಲಿದೆ. ಅಕ್ಟೋಬರ್ 17 ರಂದು ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

ಅಕ್ಟೋಬರ್ 17 ರಂದು ಬೆಳಿಗ್ಗೆ 7:45 ರಿಂದ 8:15 ರೊಳಗಿನ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಈ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಕೂಂಬಿಂಗ್ ಸ್ಪೇಷಲಿಸ್ಟ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಅಭಿಮನ್ಯುವಿಗೆ ಈಗಾಗಲೇ ಟ್ರೈನಿಂಗ್ ಕೊಡಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ.

ಸುಪ್ರಿಂ ಕೋರ್ಟ್ ಆದೇಶದಂತೆ ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಅಂಬಾರಿ ಹೊರುವ ಅವಕಾಶವಿಲ್ಲ. ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಮಾತ್ರ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿವೆ. ಐದು ಆನೆಗಳನ್ನ ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಇನ್ನು ಸಾಂಪ್ರದಾಯಿಕವಾಗಿ ಅಕ್ಟೋಬರ್ 2 ರಂದು 12:18ನಿಮಿಷಕ್ಕೆ ಗಜಪಯಣ ಆರಂಭವಾಗಲಿದ್ದು, ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಅಂಬಾವಿಲಾಸ ಅರಮನೆಯ ಆವರಣಕ್ಕೆ ಸಾಂಪ್ರದಾಯಿಕವಾಗಿ ಜಿಲ್ಲಾಧಿಕಾರಿಗಳು ದಸರಾ ಆನೆಗಳನ್ನು ಸ್ವಾಗತ ಮಾಡಲಿದ್ದಾರೆ.

ಪ್ರತಿ ವರ್ಷದಂತೆ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಇರಲಿದೆ. ಚೆಸ್ಕಾಂ ಇದರ ಜವಾಬ್ದಾರಿ ಹೊರುತ್ತದೆ. ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವಿಚಾರ ಸಂಬಂಧ ಕಮಿಟಿ ಮಾಡಲಿದ್ದೇವೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಒಂದು ದಿನಕ್ಕೆ ಒಂದು ಕಾರ್ಯಕ್ರಮ ಇರಲಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.

ಒಟ್ಟಾರೆ, ಐತಿಹ್ಯದ ಪುಟದಲ್ಲಿ ಈ ವರ್ಷದ ದಸರೆ ದಾಖಲಾಗಲು ಕ್ಷಣಗಣನೆ ಆರಂಭವಾಗಿದೆ. ಇಂದಿನ ಸಭೆಯಿಂದ ಎಲ್ಲವೂ ಅಧಿಕೃತವಾಗಿದ್ದು, ಇನ್ನೇನಿದ್ದರೂ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದಷ್ಟೆ ಬಾಕಿ ಉಳಿದಿದೆ.