ಸ್ವಾವಲಂಬನೆಗೆ “ಕಾಯಕವೇ ಕೈಲಾಸ” ಎಂದು ಸಾರಿದ ಬಸವಣ್ಣನವರ ಜೀವನ

0
965

ಸಮಾಜದ ಸ್ವಾವಲಂಬನೆಗೆ “ಕಾಯಕವೇ ಕೈಲಾಸ” ಎಂದು ಸಾರಿದ ಬಸವಣ್ಣನವರ ಜೀವನ

ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು, ಇವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು. ತಮ್ಮ ಕಾರ್ಯ ದಕ್ಷತೆಯಿಂದ ಕಲಚೂರಿ ಅರಸ ಬಿಜ್ಜಳನ ಭಂಡಾರದ ಅಧಿಕಾರಿಯಾಗಿದ್ದರು. ಇದೇ ಕಾಲದಲ್ಲಿ ತಮ್ಮ ಧಾರ್ಮಿಕ, ಸಾಮಾಜಿಕ ಚಳುವಳಿಯನ್ನು ಬಸವಣ್ಣನವರು ಮಂಗಳವೇಡೆಯಲ್ಲಿ ಆರಂಭಿಸಿದರು.

ಶಿವಶರಣರಾದರು ಜಾತಿ ಭೇದವನ್ನು ಮಾಡಬಾರದು. ಪರಿಶುದ್ಧ ಭಕ್ತಿಯೇ ಶಿವನನ್ನು ಸೇರುವ ನಿಜವಾದ ಮಾರ್ಗವೆಂಬುದಾಗಿ ಪ್ರತಿಪಾದಿಸಿದರು. ಪ್ರತಿಯೊಬ್ಬ ಮನುಷ್ಯನು ದುಡಿದು ತಿನ್ನಬೇಕು. ವೃತ್ತಿಗಳಲ್ಲಿ ಹಿರಿದು-ಕಿರಿದು ಎಂಬುದಿಲ್ಲ ಎಂದು ಸಾರಿದರು. ಸಮಾಜದ ಸ್ವಾವಲಂಬನೆಗೆ “ಕಾಯಕವೇ ಕೈಲಾಸ” ಎಂದು ಸಾರಿದ ಬಸವಣ್ಣನವರು, ಈ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು.

ಬಸವೇಶ್ವರರು ಬೀದರ ಜಿಲ್ಲೆ ಬಸವ ಕಲ್ಯಾಣದಲ್ಲಿ “ಅನುಭವ ಮಂಟಪ” ಎಂಬ ಹೆಸರಿನ ಒಂದು ಶರಣ ಆಧ್ಯಾತ್ಮ ಸಂಸ್ಥೆಯನ್ನು ಪ್ರಾರಂಭಿಸಿ, ಜಾತಿ ಮತ್ತು ಲಿಂಗ ಭೇದ ಎಣಿಸದೆ ಸಾಮಾಜಿಕ, ಅರ್ಥಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಸ್ತ್ರೀಯರ ಸ್ವಾತಂತ್ರ್ಯ ಸಮಾನತೆಯನ್ನು ಪ್ರತಿಪಾದಿಸಿದರು. ಇಲ್ಲಿ ಹೊರಹೊಮ್ಮಿದ ಅನೇಕ ಅಂಶಗಳನ್ನು ವಚನಗಳ ಮೂಲಕ ಸಮಾಜಕ್ಕೆ ತಲುಪಿಸುವ ಪ್ರಯತ್ನ ನಡೆಯಿತು. ಈ ವಚನ ಚಳುವಳಿಯಲ್ಲಿ ಜಾತಿ-ಭೇದವಿಲ್ಲದೆ ಅವರ ಅನುಯಾಯಿಗಳು ಒಗ್ಗೂಡಿದರು. ಇವರುಗಳಲ್ಲಿ ಪ್ರಮುಖರಾದವರು ಅಲ್ಲಮಪ್ರಭು, ಅಕ್ಕಮಹದೇವಿ, ಸಿದ್ಧರಾಮ, ಮೋಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ. ಮಾದಾರ ಚನ್ನಯ್ಯ, ಹರಳಯ್ಯ ಮತ್ತು ಕಿನ್ನರಿ ಬೊಮ್ಮಯ್ಯ.

ವಚನಕಾರರು ತಮ್ಮ ವಚನಗಳಲ್ಲಿ ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟು ವೀರಶೈವ ಮತವನ್ನು ಸುಧಾರಿಸಿದರು, ಜನರ ನೈತಿಕ ಮತ್ತು ಪರಿಶುದ್ಧ ಜೀವನಕ್ಕೆ ಮಹತ್ವ ನೀಡಿದ್ದಾರೆ. ಪ್ರತಿಯೊಬ್ಬರೂ ಉದಾಕ್ತ ಜೀವನವನ್ನು ನಡೆಸಬೇಕೆಂದು ತಿಳಿಸಿದ್ದಾರೆ.

ವಿಶ್ವದ ಮಾನವರೆಲ್ಲ ಸಮಾನರು. ಹುಟ್ಟಿನಿಂದ ಯಾರೂ ಅಸ್ಪೃಶ್ಯರಲ್ಲ. ಅವರ ಆಚಾರ ವಿಚಾರಗಳಿಂದ, ನಡೆ-ನುಡಿಗಳಿಂದ ಮಾತ್ರ ಅಸ್ಪೃಶ್ಯತ್ತಾರೆಂದು ವಚನಗಳ ಮೂಲಕ ಹೇಳಿದ್ದಾರೆ. ಅನೇಕ ವಚನಗಳ ಮೂಲಕ ವಚನಕಾರರು ಅಂದಿನ ಸಮಾಜದಲ್ಲಿ ಆಚರಣೆಯಲ್ಲಿದ್ದ ಲೋಪ ದೋಷಗಳನ್ನು ಎತ್ತಿ ತೋರಿಸಿ ಅರಿವು ಮೂಡಿಸಲು ಪ್ರಯತ್ನಿಸಿದರು. ಮುಂದಿನ ಶತಮಾನಗಳಲ್ಲಿ ತಲೆ ಎತ್ತಿದ ಮಠಗಳು ಸಾಮಾಜಿಕ ಸುಧಾರಣೆ ಮತ್ತು ಶಿಕ್ಷಣಕ್ಕೂ ಬೆಂಬಲ ನೀಡುತ್ತಾ ಬಂದಿವೆ.

Also read: ಕೂಡಲ ಸಂಗಮ ಬಸವಣ್ಣನವರ ಐಕ್ಯ ಸ್ಥಳದ ಚರಿತ್ರೆ..!!