ಕರ್ನಾಟಕದ ಗಿರಿಧಾಮಗಳಲ್ಲಿ ರಾಣಿ ಎಂದೇ ಪ್ರಸಿದ್ಧಿ ಹೊಂದಿರುವ ಕೆಮಣ್ಣು ಗುಂಡಿ.! ತಪ್ಪದೆ ಒಮ್ಮೆ ಭೇಟಿ ಕೊಡಿ

0
1528

ಕೆಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯ ಶ್ರೇಣಿಯಲ್ಲಿದೆ. ಕೆಂಪಾದ ಮಣ್ಣು ಅಥವಾ ಕೆಮ್ಮಣ್ಣು ಇಲ್ಲಿ ಹೆಚ್ಚಾಗಿರುವುದರಿಂದಲೂ ಆಳವಾದ ರುದ್ರ ರಮಣೀಯ ಪ್ರಪಾತಗಳಿರುವುದರಿಂದಲೂ ಈ ಗಿರಿಧಾಮಕ್ಕೆ ಕೆಂಪುಮಣ್ಣಿನ ಗುಂಡಿ ಎಂದು ಹೆಸರಾಗಿ ಕ್ರಮೇಣ ಕೆಮ್ಮಣ್ಣುಗುಂಡಿ ಎಂದಾಯಿತು. ಭದ್ರಾ ಅರಣ್ಯ ಪ್ರದೇಶಕ್ಕೆ ಸೇರಿದ ಗಿರಿಧಾಮವಿದು. 4705 ಅಡಿ ಎತ್ತರದಲ್ಲಿರುವ ಈ ಗಿರಿಧಾಮ `ಗಿರಿಧಾಮಗಳ ರಾಣಿ’ ಎಂದೇ ಹೆಸರಾಗಿದೆ.

source: chickmagalur.nic.in

ಈ ಗಿರಿಧಾಮದ ಮುಂಭಾಗ `ಶೃಂಗಾರಪುರಕ್ಕೆ ಸುಸ್ವಾಗತ’ ಎಂಬ ನಾಮಫಲಕ ಸ್ವಾಗತ ಹೇಳುತ್ತದೆ. ಈ ಗಿರಿಧಾಮದ ರಮ್ಯ, ರಮಣೀಯ ದೃಶ್ಯಗಳಿಗೆ ಮಿತಿಯೇ ಇಲ್ಲ. ಇಲ್ಲಿ ಏನಿದೆ, ಏನಿಲ್ಲ ಎಂಬುದಿಲ್ಲ. ಇಲ್ಲಿನ ಪರಿಸರ ಅಂತಹದು. ವರ್ಷ ಪೂರಾ ಹಸಿರನ್ನು ಕಣ್ಣಿಗೆ ರಾಚುವ ಸಸ್ಯಶಾಮಲೆ. ಭೋರ್ಗರೆಯುವ ಜಲರಾಶಿ. ನದಿಗಳ ನರ್ತನ. ಆದ್ದರಿಂದಲೇ ಶೃಂಗಾರಪುರ ಎಂದಿದ್ದಾರೆ. ಇದಕ್ಕೆ ಕೃಷ್ಣರಾಜೇಂದ್ರ ಗಿರಿಧಾಮವೆಂಬ ಹೆಸರೂ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ಇದನ್ನು ತಮ್ಮ ಬೇಸಿಗೆ ತಂಗುದಾಣವನ್ನಾಗಿಸಿಕೊಂಡಿದ್ದರು. ಆಗಲೇ ಇದನ್ನು ಅವರು ಅಭಿವೃದ್ಧಿಪಡಿಸಿದರು. ಅನಂತರ ಬ್ರಿಟಿಷರು ಇದನ್ನು ಒಂದು ಉತ್ತಮ ಗಿರಿಧಾಮವನ್ನಾಗಿ ರೂಪಿಸಲು ಪ್ರಯತ್ನಿಸಿದರು.

Image result for ಕೃಷ್ಣರಾಜೇಂದ್ರ ಗಿರಿಧಾಮ

ಪ್ರಕೃತಿಯ ನರ್ತನ ನೋಡಬೇಕಾದರೆ ಕೆಮ್ಮಣ್ಣ್ಣುಗುಂಡಿಗೆ ಬರಬೇಕು. ಹವಾಮಾನದಲ್ಲಿನ ಏರುಪೇರು ಸವಿಯಲು ಪ್ರಶಾಂತ ಸ್ಥಳ. ಬೇಸಿಗೆಯ ದಿನಗಳಲ್ಲಿ ತಂಪು ನೀಡುವ ತಾಣ. ಪ್ರಪಂಚದಲ್ಲೇ ಹೆಸರು ಪಡೆದ ಶಂಕರ ಶೋಲಾ ಅರಣ್ಯ ಹೊಂದಿರುವ ಪ್ರದೇಶವಿದು. ಕರ್ನಾಟಕ ತೋಟಗಾರಿಕೆ ಇಲಾಖೆಯವರು ನಡೆಸುತ್ತಿರುವ ಇಲ್ಲಿನ ಗುಲಾಬಿ ಉದ್ಯಾನವನ ಬಹು ಸುಂದರ. ಬಗೆಬಗೆಯ ಬಣ್ಣಗಳು, ಪುಷ್ಪಗಳು ಇಲ್ಲಿನ ಒಂದು ಅದ್ಭುತ ಆಕರ್ಷಣೆ. ಇವುಗಳ ಪ್ರಬಲ ಬಣ್ಣ ಇಲ್ಲಿನ ಮಣ್ಣಿನಲ್ಲಿರುವ ಹೆಚ್ಚಿನ ಕಬ್ಬಿಣದಂಶದಿಂದ ಎನ್ನುತ್ತಾರೆ. ನೂರಾರು ಬಗೆಯ ಸಸ್ಯರಾಶಿ ಗಿಡಮೂಲಿಕೆಗಳ ಆಗರವಿದು. ನಿಸರ್ಗ ಪ್ರೇಮಿಗಳು, ಆಯುರ್ವೇದ ವಿದ್ಯಾರ್ಥಿಗಳಿಗೆ ಸಂಶೋಧನಾ ಕೇಂದ್ರ. ಕಾಮನಬಿಲ್ಲಿನ ಬಣ್ಣಗಳಿರುವ ಮಣ್ಣಿನ ವರ್ಣರಂಜಿತ ಸಂಯೋಜನೆ ಬೆರಗು ಮೂಡಿಸುತ್ತದೆ.

Related image

ಇಲ್ಲಿ ಸೂರ್ಯೋದಯ ಸೂರ್ಯಾಸ್ತಮಾನದ ದೃಶ್ಯಗಳು ವಿಹಂಗಮ ಕ್ಷಣಗಳನ್ನು ಸೃಷ್ಟಿಸಿ ಮುದ ನೀಡುತ್ತವೆ. ಈ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲಾಗದು! ಕೆಮ್ಮಣ್ಣುಗುಂಡಿಯ ವಿಹಂಗಮ ನೋಟಗಳಿಗೆ ಪ್ರಮುಖವಾದ ಕೇಂದ್ರವೆಂದರೆ `ಝಡ್’ ಪಾಯಿಂಟ್. ತೋಟಗಾರಿಕೆ ಇಲಾಖೆಯ ಅತಿಥಿ ಗೃಹದಿಂದ ಸುಮಾರು 30 ನಿಮಿಷಗಳ ಕಾಡುದಾರಿಯಲ್ಲಿ ಚಾರಣ ಮಾಡಬೇಕು. ಹೀಗೆ ಚಾರಣ ಮಾಡುತ್ತಾ ಹೋದಾಗ ಮೊದಲು ನಮ್ಮನ್ನು ಸ್ವಾಗತಿಸುವುದೇ `ಶಾಂತಿ ಜಲಪಾತ’ವೆಂಬ ಪುಟ್ಟ ಜಲಪಾತ. ಮುಂದೆ ಹೋದಂತೆ `ಝಡ್’ ಆಕಾರದ `ಝಡ್’ ಪಾಯಿಂಟ್ ಸಿಗುತ್ತದೆ. ಇಲ್ಲಿನ ನೋಟ- ಅರಣ್ಯಗಳು, ಗಿರಿಗಳು-ಪ್ರಪಾತಗಳ ವಿಹಂಗಮ ದೃಶ್ಯ ರುದ್ರರಮಣೀಯ.

ನಿಸರ್ಗದ ರಮಣೀಯತೆಯಲ್ಲಿ ಕೂಲಾಗಿ ಮೈಮರೆಯಬೇಕೆಂದರೆ ಇದು ಅತ್ಯಂತ ಪ್ರಶಸ್ತ ಸ್ಥಳ! ಕವಿಗಳಿಗೆ ಪರಿಸರ ಪ್ರೇಮಿಗಳಿಗೆ ಚಾರಣಪ್ರಿಯರಿಗೆ ಇದು ಭುವಿಯ ಮೇಲಿನ ಸ್ವರ್ಗ! ರಾಜ್ಯದ ಎಲ್ಲಾ ಪ್ರಮುಖ ಸ್ಥಳಗಳಿಂದಲೂ ಚಿಕ್ಕಮಗಳೂರಿಗೆ ಬಸ್ಸಿನ ಸೌಕರ್ಯವಿದೆ. ಅಲ್ಲಿಂದ 55 ಕಿ.ಮೀ. ಅಂತರದಲ್ಲಿದೆ ಬಾಬಾ ಬುಡನ್‍ಗಿರಿ ಶ್ರೇಣಿ. ಕೆಮ್ಮಣ್ಣ್ಣುಗುಂಡಿಯಲ್ಲಿ ಇಳಿದುಕೊಳ್ಳಲು ತೋಟಗಾರಿಕೆ ಇಲಾಖೆಯ ಪ್ರವಾಸಿ ಮಂದಿರವಿದೆ. ಚಿಕ್ಕಮಗಳೂರಿನಲ್ಲಿ ಹಲವಾರು ಹೋಟೆಲ್‍ಗಳ ಸೌಲಭ್ಯವಿದೆ. ನಗರದ ಶಬ್ದ ಮಾಲಿನ್ಯದಿಂದ ಹೊಗೆಭರಿತ ಮಾಲಿನ್ಯದಿಂದ ದೂರ ಬಂದು ಇಲ್ಲಿನ ನಿಸರ್ಗದ ರಮಣೀಯತೆಯಲ್ಲಿ ಮೈಮರೆಯಬಹುದು.

Related image